ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ ಕೆಲವೇ ಕ್ಷಣಗಳಲ್ಲಿ ಮಹಿಳೆ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ, ಕುಟುಂಬಸ್ಥರ ಪ್ರತಿಭಟನೆ
ಹೃದಯ ಸಂಬಂಧಿ ಕಾಯಿಲೆಗಾಗಿ ಅನುಷಾ ಅವರು ಪ್ರತಿ ತಿಂಗಳು ಇಂಜೆಕ್ಷನ್ ಪಡೆಯುತ್ತಿದ್ದರು. ಇದರಂತೆ ನಿನ್ನೆ ಕೂಡ ಆಸ್ಪತ್ರೆಗೆ ಬಂದು ಇಂಜೆಕ್ಷನ್ ಹಾಕಿಸಿಕೊಂಡಿದ್ದು, ಇಂಜೆಕ್ಷನ್ ಪಡೆದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ.

ದಾವಣಗೆರೆ: ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ ಕೆಲವೇ ಕ್ಷಣಗಳಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿ ನಿವಾಸಿ ಅನುಷಾ (34) ಎಂಬುವವರು ಇಂಜೆಕ್ಷನ್ ಪಡೆದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಗಾಗಿ ಅನುಷಾ ಅವರು ಪ್ರತಿ ತಿಂಗಳು ಇಂಜೆಕ್ಷನ್ ಪಡೆಯುತ್ತಿದ್ದರು. ಇದರಂತೆ ನಿನ್ನೆ ಕೂಡ ಆಸ್ಪತ್ರೆಗೆ ಬಂದು ಇಂಜೆಕ್ಷನ್ ಹಾಕಿಸಿಕೊಂಡಿದ್ದು, ಇಂಜೆಕ್ಷನ್ ಪಡೆದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ.
ಇಂಜೆಕ್ಷನ್ ಅನ್ನು ಸಂಬಂಧಿಕರು ಖಾಸಗಿ ಔಷಧೀಯ ಮಳಿಗೆಯಿಂದ ಖರೀದಿಸಿ ತಂದಿದ್ದು, ನಂತರ ಆಸ್ಪತ್ರೆಯಲ್ಲಿ ಅನುಷಾಗೆ ನೀಡಲಾಗಿದೆ. ಇಂಜೆಕ್ಷನ್ ನೀಡಿದ ಸುಮಾರು 15 ನಿಮಿಷಗಳ ನಂತರ ಅಸ್ವಸ್ಥರಾಗಿದ್ದು, ಬಳಿಕ ಮೃತಪಟ್ಟಿದ್ದಾರೆ.
ಘಟನೆ ಬೆನ್ನಲ್ಲೇ ಇದು ವೈದ್ಯರ ಮತ್ತು ಸಿಬ್ಬಂದಿಯ ಘೋರ ಎಡವಟ್ಟು ಎಂದು ಆರೋಪಿಸಿರುವ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನುಷಾ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಚನ್ನಗಿರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಅವರು ಮಾತನಾಡಿ, “ಎಫ್‌ಎಸ್‌ಎಲ್ ವರದಿ ಬಂದ ನಂತರ ಪ್ರಕರಣವನ್ನು ವೈದ್ಯಕೀಯ ಮಂಡಳಿಗೆ ಶಿಫಾರಸು ಮಾಡಲಾಗುವುದು. ವರದಿಯ ಆಧಾರದ ಮೇಲೆ ತನಿಖೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಚನ್ನಗಿರಿ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಮಾಹಿತಿ ನೀಡಿ, ಶಿವಮೊಗ್ಗದ McGann ಆಸ್ಪತ್ರೆಯಿಂದ ಫಾರೆನ್ಸಿಕ್ ತಜ್ಞರು ಸ್ಥಳಕ್ಕೆ ಬಂದು ಔಷಧ ಮಾದರಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



