News wrap 19-02-2026 | 26 ತಿಂಗಳ ಅರಿಯರ್ಸ್ ಬಾಕಿಗೆ ಅನುಮೋದನೆ, ಸಾರಿಗೆ ನೌಕರರ ಮುಷ್ಕರ ವಾಪಸ್; ಬಿಜೆಪಿ ನಾಯಕರ ಕ್ಷೇತ್ರದಲ್ಲಿ ಕಸವನ್ನೇ ತೆಗೆಯುವುದಿಲ್ಲ- DKS; ಬಂಡಿಪುರ, ನಾಗರಹೊಳೆಯಲ್ಲಿ ಸಫಾರಿ ಪುನರಾರಂಭ

1. 26 ತಿಂಗಳ ಅರಿಯರ್ಸ್ ಬಾಕಿಗೆ ಅನುಮೋದನೆ, ಸಾರಿಗೆ ನೌಕರರ ಮುಷ್ಕರ ವಾಪಸ್
ಸಾರಿಗೆ ನೌಕರರ ಮುಷ್ಕರದ ಎಚ್ಚರಿಕೆಗೆ ಸರ್ಕಾರ ಎಚ್ಚೆತ್ತುಕೊಂಡಿದ್ದು, ನೌಕರರ ಬೇಡಿಕೆಗಳಲ್ಲಿ ಪ್ರಮುಖವಾದ ವೇತನ ಬಾಕಿ ಪಾವತಿಗೆ ಮುಂದಾಗಿದೆ. ಸಾರಿಗೆ ನೌಕರರಿಗೆ 38 ತಿಂಗಳ ವೇತನ ಬಾಕಿ ನೀಡಬೇಕಿದ್ದು, ಈ ಪೈಕಿ ಮೊದಲ ಹಂತದಲ್ಲಿ 26 ತಿಂಗಳ ಅರಿಯರ್ಸ್ ಪಾವತಿಸಲು ಸರ್ಕಾರ ಆದೇಶ ಪ್ರಕಟಿಸಿದೆ. ಏಪ್ರಿಲ್ 2025 ರಿಂದ ವೇತನ ಪರಿಷ್ಕರಣೆಗೂ ಒಪ್ಪಿಗೆ ಸೂಚಿಸಿದೆ. ಇನ್ನು ಪೂರ್ವನಿಗದಿಯಂತೆಯೇ ಸಾರಿಗೆ ನಿಗಮಗಳ ನೌಕರರು ಇಂದು ಗುರುವಾರ “ಬೆಂಗಳೂರು ಚಲೋ” ಬೃಹತ್ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ತೆರಳಿದ ಕೆಎಸ್ ಆರ್ ಟಿಸಿ ಎಂಡಿ ಅಕ್ರಂ ಪಾಷಾ, ಸರ್ಕಾರ ನಿವೃತ್ತ ನೌಕರರ ಬೇಡಿಕೆಗಳನ್ನು ಈಡೇರಿಸಿದೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡಲಾಗುತ್ತಿದೆ. ಮಾತುಕತೆಗೆ ಮುಕ್ತವಾಗಿದೆ. ಬಜೆಟ್ ನಲ್ಲಿ ಹಣ ನಿಗದಿಪಡಿಸಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಸಂಜೆ ನಡೆದ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಮುಷ್ಕರವನ್ನು ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರ ಬಜೆಟ್ ಸಭೆ ಕರೆದಿದ್ದು, ಅಲ್ಲಿ ವೇತನ ಹೆಚ್ಚಳ ಮತ್ತು ಬಾಕಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆ ನಿರ್ಧಾರದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಮಿತಿ ಹೇಳಿದೆ.
2. ಕಸ ತೆರವಿಗೆ ವಿರೋಧ: ಬಿಜೆಪಿ ನಾಯಕರ ಕ್ಷೇತ್ರದಲ್ಲಿ ಕಸವನ್ನೇ ತೆಗೆಯುವುದಿಲ್ಲ- DKS
ಬಿಜೆಪಿ ನಾಯಕರುಗಳು ಕಸ ವಿಲೇವಾರಿಗೆ ಬಿಡುವುದು ಬೇಡ. ಅವರೇ ಕಸವನ್ನು ಇಟ್ಟುಕೊಳ್ಳಲಿ. ಯಾರು ಬಿಡುವುದಿಲ್ಲವೋ ಅವರ ಕ್ಷೇತ್ರದಲ್ಲಿ ಕಸವನ್ನೇ ತೆಗೆಯುವುದಿಲ್ಲ, ತೆಗೆಸುವುದಿಲ್ಲ. ಆಗ ಜನರೇ ಅವರಿಗೆ ಉಗಿಯುತ್ತಾರೆ. ಮೈಕ್ ಹಾಕಿ ಪ್ರಚಾರ ಮಾಡಿಸುತ್ತೇನೆ. ಕಾಲನ್ನು ಕಟ್ಟಿಕೊಳ್ಳಲು ಆಗುತ್ತದೆಯೇ? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಕಸ ಯಾರದ್ದು ಅದು ಜನರ ಕಸ. ಮೊದಲಿನಿಂದಲೂ ಹೇಗೆ ಸಂಪ್ರದಾಯವಿತ್ತೋ ಅದೇ ರೀತಿ ಮಾಡಿಕೊಂಡು ಬರುತ್ತಿದ್ದೇವೆ. ಬಿಜೆಪಿ ಹಾಗೂ ನಮ್ಮ ಸಮಯದಲ್ಲಿ ತೀರ್ಮಾನ ಮಾಡಿದ್ದು ಇದೇ ರೀತಿ" ಎಂದರು. ಮಹದೇವಪುರದಲ್ಲಿ ಕಸ ವಿಲೇವಾರಿ ನಿಲ್ಲಿಸಲಾಗಿದೆ. ನಾವು ಸಹ ಅಲ್ಲಿ ಮೂರು ದಿನ ಕಸ ತೆಗೆಯಬೇಡಿ ಎಂದರೆ ಏನಾಗಬಹುದು" ಎಂದರು. "ಕಸ ವಿಲೇವಾರಿಗೆ ನಾಲ್ಕು ಕಡೆ ಜಮೀನುಗಳನ್ನು ನೋಡಿದ್ದೆವು. ಭೂಮಿ ಸಮಸ್ಯೆ ಬಂದ ಕಾರಣಕ್ಕೆ ಎರಡು ಕಡೆ ಅಂತಿಮ ಮಾಡಿದ್ದೇವೆ. ಟೆಂಡರ್ ಕೂಡ ಕರೆಯಲಾಗಿದೆ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ" ಎಂದು ಶಿವಕುಮಾರ್ ಹೇಳಿದ್ದಾರೆ.
3. ಬಂಡಿಪುರ, ನಾಗರಹೊಳೆಯಲ್ಲಿ ಸಫಾರಿ ಪುನರಾರಂಭ
100 ದಿನಗಳ ಬಳಿಕ ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಸಫಾರಿಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸಫಾರಿ ಪುನರಾರಂಭಿಸಲು ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರು ಅನುಮೋದನೆ ನೀಡಿದ್ದು, ಇನ್ನೆರಡು ದಿನಗಳಲ್ಲಿ ಸಫಾರಿ ಆರಂಭವಾಗಲಿದೆ. ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಾದ ಹಿನ್ನೆಲೆಯಲ್ಲಿ, ಸಿಬ್ಬಂದಿ ಮತ್ತು ವಾಹನ ದುರುಪಯೋಗ ತಡೆಗಟ್ಟಲು ಹಾಗೂ ಇತರ ಮಹತ್ವದ ಅರಣ್ಯ ಕಾರ್ಯಗಳಿಗೆ ಒತ್ತು ನೀಡಲು ನವೆಂಬರ್ 7ರಿಂದ ಸಫಾರಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
4. ಬ್ರೆಜಿಲ್ ಪ್ರಜೆಯಿಂದ 23.88 ಕೋಟಿ ರೂ ಮೌಲ್ಯದ ಕೊಕೇನ್ ವಶಕ್ಕೆ
ಬೆಂಗಳೂರು ವಲಯ ಘಟಕದ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಅಧಿಕಾರಿಗಳು ಫೆಬ್ರವರಿ 17 ರಂದು ಬೆಳಗ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ರೆಜಿಲ್ ಪ್ರಜೆಯೊಬ್ಬರನ್ನು ಬಂಧಿಸಿದ್ದು, ಆರೋಪಿ ಬಳಿ ಇದ್ದ 23.88 ಕೋಟಿ ರೂ. ಮೌಲ್ಯದ 4.776 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿ, ಸಾವೊ ಪಾಲೊದಿಂದ ಕತಾರ್‌ನ ದೋಹಾಗೆ ಪ್ರಯಾಣಿಸಿದ್ದರು ಮತ್ತು ನಂತರ ದೋಹಾದಿಂದ ಬೆಂಗಳೂರಿಗೆ ವಿಮಾನ ಹತ್ತಿದ್ದರು. “ಆರೋಪಿ ಚೆಕ್-ಇನ್ ಮಾಡಿದ ಪದಾರ್ಥಗಳನ್ನು ಪರಿಶೀಲಿಸುವಾಗ, ಅಧಿಕಾರಿಗಳು ನಾಲ್ಕು ಮಹಿಳೆಯರ ಕೈಚೀಲಗಳನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ” ಎಂದು ಬೆಂಗಳೂರಿನ ಎನ್‌ಸಿಬಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
5. ರೈತ ಪುರುಷರನ್ನು ಮದುವೆಯಾಗುವ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಯೋಜನೆ ಘೋಷಿಸಿ
ರೈತ ಪುರುಷರನ್ನು ಮದುವೆಯಾಗುವ ಮಹಿಳೆಯರಿಗೆ ಆರ್ಥಿಕವಾಗಿ ಪ್ರೋತ್ಸಾಹ ನೀಡುವ ಯೋಜನೆಯನ್ನು ಘೋಷಿಸುವಂತೆ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ಎಚ್.ಡಿ. ರಂಗನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ರೈತರನ್ನು ಮದುವೆಯಾಗಲು ಬಯಸುವುದಿಲ್ಲ. ರೈತ ಮಕ್ಕಳಿಗೆ ವಧುಗಳ ಕೊರತೆ ಎದುರಾಗಿದೆ ಎಂದು ರಂಗನಾಥ್ ತಿಳಿಸಿದ್ದಾರೆ. ಮಹಿಳೆಯರು ರೈತರನ್ನು ಮದುವೆಯಾಗಿ ಹಳ್ಳಿಗಳಿಗೆ ಏಕೆ ಹೋಗಬೇಕು ಎಂದು ಕೇಳುತ್ತಿದ್ದಾರೆ. ಇದು ವಾಸ್ತವ. ಮಾರ್ಚ್ 6 ರಂದು 2026-27ರ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ ಅವರನ್ನು ಪ್ರೋತ್ಸಾಹಕ ಯೋಜನೆಯನ್ನು ರೂಪಿಸುವಂತೆ ಕೇಳಿಕೊಂಡಿದ್ದೇನೆ ಎಂದು ರಂಗನಾಥ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


