ಧಾರವಾಡ ಹೈಕೋರ್ಟ್ ಪೀಠ, ಮಂಡ್ಯ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ; ತೀವ್ರ ಶೋಧ
ಮುಂಜಾಗ್ರತಾ ಕ್ರಮವಾಗಿ ಧಾರವಾಡ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ನ್ಯಾಯಾಲಯದ ಕಟ್ಟಡಗಳಿಂದ ವಕೀಲರು ಮತ್ತು ಸಿಬ್ಬಂದಿಯನ್ನು ತೆರವುಗೊಳಿಸಲಾಗಿದೆ.

ಧಾರವಾಡ/ಮಂಡ್ಯ: ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಮತ್ತು ಮಂಡ್ಯದ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಲಾಗಿದ್ದು, ಸೋಮವಾರ ಅಧಿಕಾರಿಗಳು ವ್ಯಾಪಕ ಶೋಧಕಾರ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಧಾರವಾಡ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ನ್ಯಾಯಾಲಯದ ಕಟ್ಟಡಗಳಿಂದ ವಕೀಲರು ಮತ್ತು ಸಿಬ್ಬಂದಿಯನ್ನು ತೆರವುಗೊಳಿಸಲಾಗಿದೆ. ಭದ್ರತಾ ಸಿಬ್ಬಂದಿ ಆವರಣವನ್ನು ಸುತ್ತುವರಿದು ಸಂಪೂರ್ಣ ತಪಾಸಣೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸ್ಥಳಕ್ಕೆ ಭೇಟಿ ನೀಡಿ ಹೈಕೋರ್ಟ್ ಆವರಣವನ್ನು ಪರಿಶೀಲಿಸಿದ್ದಾರೆ.
ಪೊಲೀಸರು ಸಮಗ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಕಟ್ಟಡದಿಂದ ಎಲ್ಲರನ್ನು ಹೊರಗೆ ಕಳುಹಿಸಿದ್ದಾರೆ. ಬಾಂಬ್ ಸ್ಕ್ವಾಡ್ ಸಿಬ್ಬಂದಿ ಕೂಡ ಘಟನಾ ಸ್ಥಳದಲ್ಲಿ ಪರಿಶೀಲನೆ ಮುಂದುವರೆಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ಯ, 'ನಾವು ಸಂಪೂರ್ಣ ತಪಾಸಣೆ ನಡೆಸುತ್ತಿದ್ದೇವೆ. ನಮ್ಮ ಸಿಬ್ಬಂದಿ ಮಾತ್ರ ಒಳಗೆ ಇದ್ದಾರೆ. ಇಮೇಲ್ ಸಂದೇಶವು ಮಧ್ಯಾಹ್ನ 1.15ಕ್ಕೆ ಸ್ಫೋಟ ಸಂಭವಿಸಲಿದೆ ಎಂದು ಹೇಳಿದೆ. ಉಳಿದ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಸಂದೇಶವು ವಿವಿಧ ರಾಜ್ಯಗಳ ಉಲ್ಲೇಖಗಳನ್ನು ಒಳಗೊಂಡಿದೆ. ಆದ್ದರಿಂದ ನಾವು ಹೆಚ್ಚಿನ ಮಾಹಿತಿಯನ್ನು ಸದ್ಯಕ್ಕೆ ಹಂಚಿಕೊಳ್ಳಲು ಸಾಧ್ಯವಿಲ್ಲ' ಎಂದು ಹೇಳಿದರು.
ಮಂಡ್ಯ ಜಿಲ್ಲಾ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ
ಮಂಡ್ಯದಲ್ಲೂ ಬಾಂಬ್ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯದ ಕಲಾಪವನ್ನು ಸ್ಥಗಿತಗೊಳಿಸಲಾಗಿತ್ತು. ನ್ಯಾಯಾಧೀಶರು, ವಕೀಲರು ಮತ್ತು ದಾವೆದಾರರನ್ನು ಆವರಣದಿಂದ ಹೊರಗೆ ಕಳುಹಿಸಲಾಯಿತು.
ಬಾಂಬ್ ನಿಷ್ಕ್ರಿಯ ದಳ, ಪೊಲೀಸರೊಂದಿಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



