News Wrap 13-02-26 | ಬಿಕ್ಲು ಶಿವ ಹತ್ಯೆ: BJP ಶಾಸಕ ಬಸವರಾಜ್ ಬಂಧನ; ಕನ್ನಡದ ಹಿರಿಯ ನಿರ್ದೇಶಕ ಜೋ ಸೈಮನ್ ನಿಧನ; ಭೀಕರ ಅಪಘಾತದಲ್ಲಿ 6 ವಿದ್ಯಾರ್ಥಿಗಳು ಸೇರಿ 7 ಮಂದಿ ಸಾವು!

1. ಬಿಕ್ಲು ಶಿವ ಹತ್ಯೆ: BJP ಶಾಸಕ ಬಸವರಾಜ್ ಬಂಧನ
ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸಿಐಡಿ ಅಧಿಕಾರಿಗಳು ಗುರುವಾರ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಅವರನ್ನು ಬಂಧಿಸಿತ್ತು. ಬಸವರಾಜ್ ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿರುವ ಖಚಿತ ಮಾಹಿತಿ ಹಿನ್ನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಸಿಐಡಿ ಅಧಿಕಾರಿಗಳು ಶಾಸಕನನ್ನು ವಶಕ್ಕೆ ಪಡೆದರು. ಇಂದು ಶುಕ್ರವಾರ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯಕ್ಕೆ ಶಾಸಕನನ್ನು ಸಿಐಡಿ ಅಧಿಕಾರಿಗಳು ಹಾಜರುಪಡಿಸಿದರು. ಈ ವೇಳೆ ಭೈರತಿ ಬಸವರಾಜ್ ಹೃದಯ ಸಂಬಂಧಿ ಸಮಸ್ಯೆ ಬಗ್ಗೆ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಕೋರ್ಟ್ ಸಿಐಡಿಗೆ ಸೂಚಿಸಿದೆ. ಜಯದೇವ ಆಸ್ಪತ್ರೆಯ ವೈದ್ಯಕೀಯ ವರದಿ ಆಧರಿಸಿ ಭೈರತಿ ಬಸವರಾಜ್ ಅವರಿಗೆ ನ್ಯಾಯಾಂಗ ಬಂಧನವಾ ಅಥವಾ ಸಿಐಡಿ ಕಸ್ಟಡಿಗೆ ನೀಡಲಾಗುವುದೇ ಎಂಬುದು ನಾಳೆ ತೀರ್ಮಾನವಾಗಲಿದೆ.
2. ಹಿರಿಯ ನಿರ್ದೇಶಕ ಜೋ ಸೈಮನ್ ನಿಧನ
ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ ಸಾಹಸ ಸಿಂಹ ಮತ್ತು ಅಂಬರೀಶ್ ಅಭಿನಯದ ಏಜೆಂಟ್ ಅಮರ್ ಸೂಪರ್ ಹಿಟ್ ಗಳನ್ನು ನೀಡಿದ್ದ ನಿರ್ದೇಶಕ ಜೋಸೈಮನ್ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಫಿಲ್ಮ್ ಚೇಂಬರ್ ಸಭೆಯಲ್ಲಿ ಭಾಗಿಯಾಗಿದ್ದ ನಿರ್ದೇಶಕ ಜೋ ಸೈಮನ್ ಅವರಿಗೆ ಸಭೆಯಲ್ಲಿದ್ದಾಗಲೇ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. 1967ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅವರು, 1977ರಲ್ಲಿ ಒಂದು ಪ್ರೇಮದ ಕಥೆ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶರಾಗಿದ್ದು ನಂತರ ಕನ್ನಡದ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಜೋ ಸೈಮನ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ.
3. ಭೀಕರ ಅಪಘಾತದಲ್ಲಿ 6 ವಿದ್ಯಾರ್ಥಿಗಳು ಸಾವು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಸತ್ಯವರ ಗ್ರಾಮದ ಬಳಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನ, ಬೈಕ್ ಹಾಗೂ ಎಸ್ಯುವಿ ಕಾರಿನ ನಡುವೆ ಸರಣಿ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಓವರ್ ಟೇಕ್ ಮಾಡುವ ಭರದಲ್ಲಿ ಮೊದಲು ಬೈಕ್ ಗೆ ಡಿಕ್ಕಿ ಹೊಡೆದ ಎಸ್ಯುವಿ ಕಾರು ನಿಯಂತ್ರಣ ತಪ್ಪಿ ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಮತ್ತು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸವಾರ ಸಫಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಗಗನ್, ವಿದ್ಯಾರ್ಥಿಗಳಾದ ಅಶ್ವಿನ್ ನಾಯರ್, ಭರತ್, ಅರ್ಹನ್ ಶರೀಫ್, ಅಯನ್ ಅಲಿ, ಈತನ್ ಜಾರ್ಜ್, ಫರ್ಹಾನ್ ಮೃತ ದುರ್ದೈವಿಗಳು.
4. Chinnaswamy ಕ್ರೀಡಾಂಗಣದಲ್ಲಿ IPL ಪಂದ್ಯ ಆಯೋಜನೆಗೆ ಒಪ್ಪಿಗೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ, ಭವಿಷ್ಯದಲ್ಲಿ ಆ ಸ್ಥಳದಲ್ಲಿ ಆಚರಣೆಗೆ ಅವಕಾಶ ನೀಡುವ ಬಗ್ಗೆ ಪ್ರತ್ಯೇಕವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂದ್ಯಗಳಿಗೂ ಮುನ್ನ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಆಯೋಗದ ಶಿಫಾರಸ್ಸಿನಂತೆ ಸುರಕ್ಷತೆ ಮತ್ತು ಭದ್ರತಾ ಅಗತ್ಯಗಳನ್ನು ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ನಾನು ಜಿಬಿಎ ಆಯುಕ್ತ ಮಹೇಶ್ವರ ರಾವ್ ಅವರ ನೇತೃತ್ವದಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮತ್ತು ಅಗ್ನಿಶಾಮಕ, ಆರೋಗ್ಯ ಮತ್ತು ಪಿಡಬ್ಲ್ಯುಡಿ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ಸಹ ರಚಿಸಿದ್ದೇನೆ. ಅವರು ಐಪಿಎಲ್ ಪಂದ್ಯಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ ಎಂದರು.
5. ಸರ್ಕಾರಿ ಅಧಿಕಾರಿಗಳ ಬಳಿ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ನಾಲ್ವರು ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಸೇರಿದ 29 ಸ್ಥಳಗಳ ಮೇಲೆ ಗುರುವಾರ ದಾಳಿ ನಡೆಸಿದ್ದರು. ದಾಳಿ ವೇಳೆ 23.75 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿ ಜಪ್ತಿ ಮಾಡಲಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸೂಪರಿಂಟೆಂಡ್ ಎಂಜಿನಿಯರ್ ಎಚ್.ಎಂ ಜನಾರ್ದನ ಅವರ ಆಪ್ತರ ಮನೆಯಲ್ಲಿ 1.70 ಕೋಟಿ ನಗದು ಸೇರಿ ಒಟ್ಟು 19.71 ಕೋಟಿಯಷ್ಟು ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೆ-ಶಿಪ್ ಕಾರ್ಯನಿರ್ವಾಹಕ ಎಂಜಿನಿಯರ್ ಪುರುಷೋತ್ತಮ ದಾಸ್ ಹೆಗಡೆ ಬಳಿ 11.29 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಇನ್ನು ದಾವಣಗೆರೆಯಲ್ಲಿ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅರ್ಜುನ್ ಬಳಿ 2.18 ಕೋಟಿ ಅಕ್ರಮ ಆಸ್ತಿ, ಧಾರವಾಡದಲ್ಲಿ ಸರ್ವೆ ಮೇಲ್ವಿಚಾರಕ ಸೋಮಲಿಂಗಪ್ಪ ಬಳಿ 1.82 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


