ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ; ವ್ಯಕ್ತಿಯ ಹತ್ಯೆ: MLA ಸುರೇಶ್ ಕುಮಾರ್ ನೈತಿಕ ಹೊಣೆ ಹೊರಬೇಕು; ಇದೇನಿದು ಹರಿಪ್ರಸಾದ್ ಆರೋಪ?
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಹರಿಪ್ರಸಾದ್. ಕಾರವಾರದ ಸಿದ್ದಾಪುರದಲ್ಲಿ ಕಮಲಾಕರ್ ಭಟ್ ಹೆಸರಿನ ಜ್ಯೋತಿಷಿಯ ಅಕ್ರಮ ಸಂಬಂಧಕ್ಕೆ 41 ವರ್ಷದ ಅಮಾಯಕ ವಸಂತ್ ನಾಯ್ಕ್ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರು: ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ ವಿಚಾರ ರಾಜ್ಯಾದ್ಯಂತ ಈಗ ಚರ್ಚೆಗೆ ಗ್ರಾಸವಾಗಿದೆ. ಇಂತಹವರನ್ನು ಒರ್ವ ಶಾಸಕನಾಗಿ ಪ್ರೋತ್ಸಾಹಿಸಿ ಬೆಳೆಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ? ಎಂದು ಶಾಸಕ ಸುರೇಶ್ ಕುಮಾರ್ ವಿರುದ್ಧ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಪ್ರಕರಣ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಹರಿಪ್ರಸಾದ್. ಕಾರವಾರದ ಸಿದ್ದಾಪುರದಲ್ಲಿ ಕಮಲಾಕರ್ ಭಟ್ ಹೆಸರಿನ ಜ್ಯೋತಿಷಿಯ ಅಕ್ರಮ ಸಂಬಂಧಕ್ಕೆ 41 ವರ್ಷದ ಅಮಾಯಕ ವಸಂತ್ ನಾಯ್ಕ್ ಬಲಿಯಾಗಿದ್ದಾರೆ.
ಈ ಕ್ರಿಮಿನಲ್ ಪ್ರಕರಣ ನ್ಯಾಯಯುತ ತನಿಖೆಯಾಗಿ, ನ್ಯಾಯಾಲಯ ತೀರ್ಪು ಕೊಡುತ್ತದೆ. ಆದರೆ, ಇಂತಹ ಪ್ರಕರಣದಲ್ಲಿ ಸಂಘಪರಿವಾರದ ಹಿನ್ನಲೆಯಿಂದ ಬಂದ ಬಿಜೆಪಿಯ ಸುರೇಶ್ ಕುಮಾರ್, ಬಿವೈ ವಿಜಯೇಂದ್ರ ಅಂತಹ ಜನಪ್ರತಿನಿಧಿಗಳ ಪಾತ್ರ ಏನು? ಎಂಬುದು ಸ್ವಸ್ಥ ಸಮಾಜ ದೃಷ್ಟಿಯಿಂದ ಮುಖ್ಯವಾಗುತ್ತದೆ ಎಂದಿದ್ದಾರೆ.
ಕಮಲಾಕರ ಭಟ್ ಎಂಬ ಜೋತಿಷಿ ಭಾಗಿಯಾದ ಕೊಲೆ ಕೇಸ್ ನಲ್ಲಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರಂತವರ ಪಾತ್ರವಿಲ್ಲವೇ? ಕೊಲೆ ಆರೋಪಿ ಜೋತಿಷಿ "ಗುರೂಜಿ" ಕಮಲಾಕರ ಭಟ್ಟನನ್ನು ಒರ್ವ ಶಾಸಕನಾಗಿ ಪ್ರೋತ್ಸಾಹಿಸಿ ಬೆಳೆಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ ? ಒರ್ವ ಮಾಜಿ ಕಾನೂನು ಸಚಿವನಿಗೆ ಇಷ್ಟೂ ಅರಿವಿಲ್ಲದಿರುವುದು ಈ ರಾಜ್ಯದ ದುರಂತವಾಗಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಕೊಲೆಗಡುಕ, ಮಹಿಳಾ ಪೀಡಕ ಕಮಲಾಕರ ಭಟ್ ತನ್ನಲ್ಲಿಗೆ ಜೋತಿಷ್ಯ ಕೇಳಲು ಬರುವ ಗ್ರಾಹಕರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ. ಅದರ ಭಾಗವಾಗಿಯೇ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿ ಅದು ಕೊಲೆಯವರೆಗೂ ಹೋಗಿದೆ. ಈ ರೀತಿ ಜನರ ಮೂಢನಂಬಿಕೆಯನ್ನೇ ಬಳಸಿಕೊಂಡು ಹಲವು 'ಅಕ್ರಮ'ಗಳನ್ನು ಸಂಪಾದಿಸಿಕೊಂಡು ಇಂತಹ "ಜೀ-ಗುರೂಜಿ"ಗಳು ಸಮಾಜ ಸೇವೆಯ ಹೆಸರಿನಲ್ಲಿ ಸಮಾಜವನ್ನೇ ಯಾಮಾರಿಸುತ್ತಾರೆ. ಇಂತಹ ಮೂಢನಂಬಿಕೆಯ 'ಅಕ್ರಮ ದಂಧೆ'ಗಳನ್ನು ಬಿಜೆಪಿಯ ಸ್ವಯಂ ಘೋಷಿತ ಸಜ್ಜನ ಶಾಸಕ ಬಿರುದಾಂಕಿತ ಬಿಜೆಪಿಯ ಸುರೇಶ್ ಕುಮಾರ್ ಬೆನ್ನುತ್ತಟ್ಟಿ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಹಾಗಾಗಿ ಈ ಕೊಲೆಯಲ್ಲಿ ಸುರೇಶ್ ಕುಮಾರ್ ಅಂತವರ ಪಾತ್ರ ಬಹಳ ಮುಖ್ಯವಾಗುತ್ತದೆ ಎಂದಿದ್ದಾರೆ.
ಸದನದಲ್ಲಿ ಮಹಿಳೆಯರನ್ನೇ ಅಪಮಾನ ಮಾಡುವವರು, ಸಮಾಜದಲ್ಲಿ ಸ್ತ್ರೀ ಪೀಡಕರು, ಅತ್ಯಾಚಾರಿಗಳು, ಕೊಲೆಗಡಕರು, ಅಕ್ರಮ ಚಟುವಟಿಕೆಯಲ್ಲಿ ಭಾಗವಹಿಸುವವರಿಗೆ ನೇರವಾಗಿ ಬಿಜೆಪಿ ಜೊತೆಗೆ ಅವಿನಾಭಾವ ಸಂಬಂಧ ಇರುವುದಾದರೂ ಹೇಗೆ? ಬಿಜೆಪಿ ಕರ್ನಾಟಕದಲ್ಲಿ ಈ ಕಾರಣಕ್ಕಾಗಿಯೇ ಪ್ರತ್ಯೇಕ ಮೋರ್ಚಾ ಇದೆಯೇ? ಅಥವಾ ಕ್ರಿಮಿನಲ್ ಗಳಲ್ಲಿ ಭಾಗವಹಿಸುವವರಿಗೆ ಹಾಗೂ ಪ್ರೋತ್ಸಾಹ ನೀಡುವವರಿಗೆ ಮಾತ್ರ ಸ್ಥಾನಮಾನಗಳು ಸಿಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ಗೆ ನೆನಪಿಸಲು ಬಯಸುತ್ತೇನೆ : ಭಾರತ ಸಂವಿಧಾನದ 51A(h) ಆರ್ಟಿಕಲ್ ಪ್ರಕಾರ, ಪ್ರತಿಯೊಬ್ಬ ನಾಗರಿಕನ ಮೂಲ ಕರ್ತವ್ಯವೆಂದರೆ : “ವೈಜ್ಞಾನಿಕ ಮನೋಭಾವ, ಮಾನವೀಯತೆ ಹಾಗೂ ಪ್ರಗತಿಪರ ಸುಧಾರಣೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು". ಈ ವಿಧಿಯ ಉದ್ದೇಶವು ಅಂಧಶ್ರದ್ಧೆ, ಪೂರ್ವಗ್ರಹಗಳನ್ನು ಅವಲಂಬಿಸದೆ, ತಾರ್ಕಿಕತೆ, ವಿಮರ್ಶಾತ್ಮಕ ಚಿಂತನೆ ಮತ್ತು ಪ್ರಗತಿಶೀಲ ದೃಷ್ಟಿಕೋನವನ್ನು ಉತ್ತೇಜಿಸುವುದಾಗಿದೆ. ಸುರೇಶ್ ಕುಮಾರ್ ಅಂತವರು ಸಂವಿಧಾನದ ಈ ಆರ್ಟಿಕಲ್ ಅನ್ನು ಉಲ್ಲಂಘಿಸಿ ಅಪರಾಧ ಮಾಡಿದ್ದೇ ಕಮಲಾಕರ ಭಟ್ ಅಂತವರು ಕೊಲೆಗಾರರಾಗಲು ಕಾರಣವಾಗಿದೆ. ಹಾಗಾಗಿಯೇ ಶಾಸಕ ಸುರೇಶ್ ಕುಮಾರ್ ಕೂಡಾ ಈ ಕೊಲೆಯ ನೈತಿಕ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



