ಕೊಳ್ಳೇಗಾಲದಲ್ಲಿ ವರನಿಗೆ ಚಾಕು ಇರಿತ ಪ್ರಕರಣ: ಸುಪಾರಿ ಕೊಟ್ಟಿದ್ದೇ ವಧು; ಆಸ್ಪತ್ರೆಗೆ ಬಂದು ಕಣ್ಣೀರಿಟ್ಟಿದ್ದ ನಯನಾ!
ಮೊದಲ ಆರೋಪಿ ದರ್ಶನ್ ತಮಟೆ ಬಾರಿಸುವ ಹಾಗೂ ಪುಸ್ತಕ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು ಎರಡು ವರ್ಷಗಳಿಂದ ನಯನಳನ್ನು ಪ್ರೀತಿಸುತ್ತಿದ್ದ.

ಚಾಮರಾಜನಗರ: ಕೊಳ್ಳೇಗಾಲದಲ್ಲಿ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದ ವರನಿಗೆ ಚಾಕು ಇರಿತ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ವರನಿಗೆ ಚಾಕು ಇರಿತದ ಹಿಂದೆ ಇದ್ದ ಸೂತ್ರದಾರಿಯೇ ವಧು ಎನ್ನುವುದು ತನಿಖೆಯಲ್ಲಿ ಬಯಲಾಗಿದೆ.
ಡಿ.30ರಂದು ಕುಣಗಳ್ಳಿ ಗ್ರಾಮದ ರವೀಶ್ ಮತ್ತು ನಯನ ಮದುವೆ ನಡೆಯಬೇಕಿತ್ತು. ರವೀಶ್ ಹೊಸ ಜೀವನಕ್ಕೆ ಕಾಲಿಡುವ ಸಂತೋಷದಲ್ಲಿದ್ದರು. ಹಿಂದಿನ ದಿನ ಆರತಕ್ಷತೆಗೆ ರವೀಶ್ ಸೇರಿದಂತೆ ಸಂಬಂಧಿಕರು ಕಲ್ಯಾಣ ಮಂಟಪದತ್ತ ಹೊರಟಿದ್ದರು.
ಕೊಳ್ಳೇಗಾಲದ ವೆಂಕಟೇಶ್ವರ ಮಂಟಪಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಮತ್ತೊಂದು ಕಾರಿನಲ್ಲಿ ಬಂದ ಗುಂಪು ರವೀಶ್ ಕಾರನ್ನು ಅಡ್ಡಗಟ್ಟಿ ಗಲಾಟೆ ತೆಗೆದು ಚಾಕು ಇರಿದು ಪರಾರಿಯಾಗಿತ್ತು. ಗಾಯಗೊಂಡಿದ್ದ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದರು. ಪ್ರಕರಣ ದಾಖಲಾದ ಬಳಿಕ ಪೊಲೀಸರು ತನಿಖೆಗೆ ಇಳಿದಿದ್ದಾರೆ. ನಯನಾ ಕರೆ ಡಿಟೇಲ್ಸ್ ತೆಗೆದಾಗ ಪೊಲೀಸರು ಶಾಕ್ ಆಗಿದ್ದಾರೆ. ಚಾಕು ಇರಿದ ಆರೋಪಿಗಳ ಜೊತೆ ಆಕೆ ಸಂಪರ್ಕದಲ್ಲಿದ್ದ ವಿಚಾರ ಗೊತ್ತಾಗಿದೆ.
ಮೊದಲ ಆರೋಪಿ ದರ್ಶನ್ ತಮಟೆ ಬಾರಿಸುವ ಹಾಗೂ ಪುಸ್ತಕ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು ಎರಡು ವರ್ಷಗಳಿಂದ ನಯನಳನ್ನು ಪ್ರೀತಿಸುತ್ತಿದ್ದ. ಇದರ ನಡುವೆಯೂ ನಯನಗೆ ಕುಣಗಳ್ಳಿ ಗ್ರಾಮದ ರವೀಶ್ ಜೊತೆ ವಿವಾಹ ನಿಶ್ಚಯವಾಗಿತ್ತು. ಇದಾದ ಬಳಿಕ ರವೀಶ್‌ನ ಮೊಬೈಲ್ ನಂಬರ್ ಅನ್ನು ಆರೋಪಿ ದರ್ಶನ್‌ಗೆ ನೀಡಿ ಬೆದರಿಕೆ ಹಾಕಿ ಮದುವೆ ನಿಲ್ಲಿಸುವಂತೆ ನಯನಾ ಒತ್ತಡ ಹೇರಿದ್ದಳು.
ಇಷ್ಟ ಇಲ್ಲದೇ ಇದ್ದರೂ ಮನೆಯವರು ಮದುವೆ ಮಾಡಲು ಮುಂದಾಗಿದ್ದರು. ಮದುವೆ ನಿಲ್ಲಿಸಲು ಕೊನೆಯ ಪ್ರಯತ್ನ ಎನ್ನುವಂತೆ ನಯನ ತನ್ನ ತಂಗಿಯ ಮೊಬೈಲ್‌ನಿಂದ ಪ್ರಿಯಕರ ದರ್ಶನ್‌ಗೆ ಕರೆ ಮಾಡಿ ವರನನ್ನು ಹತ್ಯೆ ಮಾಡುವಂತೆ ಹೇಳಿದ್ದಳು. ಪೊಲೀಸ್ ವಿಚಾರಣೆಯನ್ನು ಆರೋಪಿ ಎಲ್ಲಾ ವಿಚಾರವನ್ನು ಬಾಯಿ ಬಿಟ್ಟಿದ್ದಾನೆ.
ಈಗ ನಯನ, ನಯನಳ ಪ್ರೇಮಿ ದರ್ಶನ್ ಹಾಗು ಮಿಥುನ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ವರನಿಗೆ ಚಾಕು ಇರಿದ ಬಳಿಕ ಮದುವೆ ರದ್ದಾಗಿತ್ತು. ಬಳಿಕ ಆಸ್ಪತ್ರೆಗೆ ಓಡೋಡಿ ಬಂದಿದ್ದ ನಯನ ತನಗೆ ಏನು ಗೊತ್ತಿಲ್ಲ ಎನ್ನುವಂತೆ ಕಣ್ಣೀರಿಟ್ಟಿದ್ದಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



