ಬಿಡದಿ ಟೌನ್‌ಶಿಪ್ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಶಿವಕುಮಾರ್ ಸ್ಪಷ್ಟನೆ
ಆದರೆ, ಟೌನ್‌ಶಿಪ್ ಯೋಜನೆಯನ್ನು ರದ್ದುಗೊಳಿಸುವ ಕುರಿತು ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬೀಳುವವರೆಗೆ ಬೈರಮಂಗಲ ವೃತ್ತದಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ರೈತರು ತಿಳಿಸಿದ್ದಾರೆ.

ಬೆಂಗಳೂರು: ವಿವಾದಕ್ಕೆ ಕಾರಣವಾಗಿರುವ 7,000 ಎಕರೆ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈತರ 25 ಸದಸ್ಯರ ನಿಯೋಗ ಮಂಗಳವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು.
ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಬಡಗಲ್ಪುರ ನಾಗೇಂದ್ರ, ಟಿ. ಯಶವಂತ್, ನೂರ್ ಶ್ರೀಧರ್, ಎಸ್.ಆರ್. ಹಿರೇಮಠ್ ಸೇರಿದಂತೆ ಹಲವು ಮುಖಂಡರು ನಿಯೋಗದಲ್ಲಿದ್ದರು.
ಮುಖ್ಯಮಂತ್ರಿಗಳ ಭೇಟಿಗೆ ಸಮಯ ನಿಗದಿಯಾಗಿದ್ದರಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಯೋಜನೆಯನ್ನು ಕೈಬಿಡಲಾಯಿತು ಎಂದು ರೈತರು ತಿಳಿಸಿದ್ದಾರೆ.
ಸಭೆಯಲ್ಲಿ ರೈತರಿಗೆ ಭರವಸೆ ನೀಡಿದ ಮುಖ್ಯಮಂತ್ರಿಗಳು, “ಯಾರನ್ನೂ ಜಮೀನು ಬಿಟ್ಟುಕೊಡುವಂತೆ ಒತ್ತಾಯಿಸುವುದಿಲ್ಲ. ಜಮೀನಿನ ಡಿನೋಟಿಫಿಕೇಷನ್ ಆದೇಶ ಹೊರಡಿಸುವ ಪ್ರಯತ್ನವನ್ನೂ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಆದರೆ, ಯೋಜನೆಯನ್ನೇ ರದ್ದುಗೊಳಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿರುವುದರಿಂದ ಹೋರಾಟ ಮುಂದುವರಿಸುತ್ತೇವೆ” ಎಂದು ರೈತ ಮುಖಂಡ ಮಂಡಲಹಳ್ಳಿ ನಾಗರಾಜ್ ಹೇಳಿದ್ದಾರೆ.
ಕೃಷಿ, ಪರಿಸರ ಮತ್ತು ಸಾಮಾಜಿಕ ಪರಿಣಾಮಗಳ ಕ್ಷೇತ್ರದ ತಜ್ಞರನ್ನು ಯೋಜನೆಯ ಪರಿಶೀಲನಾ ಸಮಿತಿಗೆ ಸೇರ್ಪಡೆಗೊಳಿಸಬೇಕು ಎಂದು ರೈತರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಇದಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘದ ಟಿ. ಯಶವಂತ್ ಮಾತನಾಡಿ, ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಅವಕಾಶ ದೊರೆತಿರುವುದು ಆಶಾಭಾವನೆ ಮೂಡಿಸಿದೆ ಎಂದರು.
ಇದೇ ವೇಳೆ ಟೌನ್‌ಶಿಪ್ ಯೋಜನೆಯನ್ನೇ ರದ್ದುಗೊಳಿಸಬೇಕು ಎಂದು ರೈತರ ನಿಯೋಗ ಮುಖ್ಯಮಂತ್ರಿ ಮುಂದೆ ಬೇಡಿಕೆ ಇಟ್ಟಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಭೂಮಿಯ ಯಾವುದೇ ಡಿನೋಟಿಫಿಕೇಷನ್‌ಗೆ ಅವಕಾಶ ನೀಡುವುದಿಲ್ಲ ಹಾಗೂ ಯೋಜನೆಯನ್ನು ರದ್ದುಗೊಳಿಸಲು ರೈತರು ನ್ಯಾಯಾಲಯದ ಮೊರೆ ಹೋಗಬಹುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಆದರೆ, ಟೌನ್‌ಶಿಪ್ ಯೋಜನೆಯನ್ನು ರದ್ದುಗೊಳಿಸುವ ಕುರಿತು ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬೀಳುವವರೆಗೆ ಬೈರಮಂಗಲ ವೃತ್ತದಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ರೈತರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



