'ಭಾರತದ ಎಥೆನಾಲ್ ಗಣಿತವೇ ಸರಿಯಿಲ್ಲ: ಎಥೆನಾಲ್ ಉತ್ಪಾದಕರಿಗೆ ಅಕ್ಕಿಯನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದೇಕೆ?'
ಆಹಾರ ಭದ್ರತೆಗಾಗಿ ರೈತರಿಂದ ಖರೀದಿಸುವ ಭತ್ತಕ್ಕೆ ತೆರಿಗೆದಾರರ ಹಣ ಬಳಕೆಯಾಗುತ್ತದೆ. ಬಳಿಕ ಧಾನ್ಯವನ್ನು ಸಂಗ್ರಹಿಸುವುದು ಹಾಗೂ ಸಾಗಣೆ ಮಾಡುವುದಕ್ಕೂ ಸರ್ಕಾರ ವೆಚ್ಚ ಮಾಡುತ್ತದೆ.

ಬೆಂಗಳೂರು: ಆಹಾರ ಭದ್ರತೆಗಾಗಿ ತೆರಿಗೆದಾರರ ಹಣದಲ್ಲಿ ರೈತರಿಂದ ಭತ್ತ ಖರೀದಿಸಿ, ಅದರ ಸಂಗ್ರಹಣೆ ಮತ್ತು ಸಾಗಣೆ ವೆಚ್ಚವನ್ನೂ ಸರ್ಕಾರವೇ ಭರಿಸಿದ ಬಳಿಕ, ಭಾರತೀಯ ಆಹಾರ ನಿಗಮ ಮೂಲಕ ಎಥೆನಾಲ್ ಉತ್ಪಾದಕರಿಗೆ ಅಕ್ಕಿಯನ್ನು ಸ್ವಾಧೀನ ವೆಚ್ಚಕ್ಕಿಂತ ಸುಮಾರು ಶೇ.40ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಭಾರತದ ಎಥೆನಾಲ್ ಗಣಿತವೇ ಸರಿಯಾಗಿ ಹೊಂದಿಕೆಯಾಗುತ್ತಿಲ್ಲಎಂದು ವ್ಯಂಗ್ಯವಾಡಿದ್ದಾರೆ. ಆಹಾರ ಭದ್ರತೆಗಾಗಿ ರೈತರಿಂದ ಖರೀದಿಸುವ ಭತ್ತಕ್ಕೆ ತೆರಿಗೆದಾರರ ಹಣ ಬಳಕೆಯಾಗುತ್ತದೆ.
ಬಳಿಕ ಧಾನ್ಯವನ್ನು ಸಂಗ್ರಹಿಸುವುದು ಹಾಗೂ ಸಾಗಣೆ ಮಾಡುವುದಕ್ಕೂ ಸರ್ಕಾರ ವೆಚ್ಚ ಮಾಡುತ್ತದೆ. ಇಷ್ಟೆಲ್ಲ ಖರ್ಚು ಮಾಡಿದ ನಂತರ ಅದೇ ಅಕ್ಕಿಯನ್ನು ಎಥೆನಾಲ್ ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದು ಯಾವ ರೀತಿಯ ಆರ್ಥಿಕ ನೀತಿ ಎಂದು ಅವರು ಪ್ರಶ್ನಿಸಿದ್ದಾರೆ.
“ತೆರಿಗೆದಾರರ ಹಣದಲ್ಲಿ ಧಾನ್ಯಕ್ಕೆ ಸಬ್ಸಿಡಿ, ಖರೀದಿ–ಸಂಗ್ರಹಣೆ–ಸಾಗಣೆಗೆ ಸರ್ಕಾರದ ವೆಚ್ಚ, ಬಳಿಕ ಅದೇ ಧಾನ್ಯವನ್ನು ಎಥೆನಾಲ್ ಉತ್ಪಾದಕರಿಗೆ ಕಡಿಮೆ ದರದಲ್ಲಿ ಮಾರಾಟ. ಹಾಗಾದರೆ ಈ ವ್ಯವಸ್ಥೆಯಿಂದ ನಿಜವಾಗಿ ಲಾಭ ಪಡೆಯುತ್ತಿರುವವರು ಯಾರು? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ತುರ್ತಾಗಿ ಸೃಷ್ಟಿಸಲಾದ ಎಥೆನಾಲ್ ಉತ್ಪಾದನಾ ಸಾಮರ್ಥ್ಯಕ್ಕೆ ಕಚ್ಚಾ ವಸ್ತು ಒದಗಿಸುವ ಉದ್ದೇಶದಿಂದ ಆಹಾರ ಧಾನ್ಯವನ್ನು ದೊಡ್ಡ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆಗೆ ತಿರುಗಿಸಲಾಗುತ್ತಿದೆಯೇ ಎಂಬ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಸರ್ಕಾರವೇ ಎಥೆನಾಲ್ ಉತ್ಪಾದಕರಿಂದ ಹೆಚ್ಚಿನ ಬೆಲೆಗೆ ಎಥೆನಾಲ್ ಖರೀದಿಸಿ ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡುತ್ತಿದೆ. ಹೀಗಿರುವಾಗ ಧಾನ್ಯವನ್ನು ಕಡಿಮೆ ದರದಲ್ಲಿ ನೀಡಿ, ಬಳಿಕ ಅದೇ ಉದ್ಯಮದಿಂದ ಹೆಚ್ಚಿನ ಬೆಲೆಗೆ ಎಥೆನಾಲ್ ಖರೀದಿಸುವುದರಿಂದ ಸಾಮಾನ್ಯ ಗ್ರಾಹಕರಿಗೆ ನಿಜವಾದ ಲಾಭವೇನು ಎಂದು ಪ್ರಶ್ನಿಸಿದ್ದಾರೆ.
ಎಥೆನಾಲ್ ಮಿಶ್ರಣದಿಂದ ಪೆಟ್ರೋಲ್ ಬೆಲೆ ಕಡಿಮೆಯಾಗಿದೆಯೇ, ವಾಹನಗಳ ಮೈಲೇಜ್ ಹಾಗೂ ನಿರ್ವಹಣಾ ವೆಚ್ಚದ ಮೇಲೆ ಆಗುವ ಪರಿಣಾಮವನ್ನು ಯಾರು ಪರಿಗಣಿಸುತ್ತಿದ್ದಾರೆ ಎಂಬ ಪ್ರಶ್ನೆಗಳನ್ನೂ ಅವರು ಮುಂದಿಟ್ಟಿದ್ದಾರೆ. ಯಾರನ್ನು ಯಾರು ಸಬ್ಸಿಡಿ ಮಾಡುತ್ತಿದ್ದಾರೆ? ಈ ವ್ಯವಸ್ಥೆಯಲ್ಲಿ ನಿಜವಾದ ಲಾಭ ಯಾರಿಗೆ?” ಎಂಬುದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಆಹಾರ ಭದ್ರತೆಗಾಗಿ ಮೀಸಲಿಟ್ಟ ಧಾನ್ಯವನ್ನು ಎಥೆನಾಲ್ ಉತ್ಪಾದನೆಗೆ ಬಳಸುವ ನೀತಿಯ ಆರ್ಥಿಕ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಪಾರದರ್ಶಕವಾಗಿ ಲೆಕ್ಕ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



