ಅದಾನಿ-ಡಿಕೆಶಿ ಒನ್-ಟು-ಒನ್ ಮೀಟಿಂಗ್; ಫೋಟೋ ಹಂಚಿಕೊಳ್ಳದೆ ಮೌನಕ್ಕೆ ಶರಣಾದ CMO; ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ..!
ಸಿಎಂಒನ ಅಧಿಕೃತ ‘ಎಕ್ಸ್’ ಖಾತೆ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣ ವೇದಿಕೆಯಲ್ಲೂ ಅದಾನಿ-ಶಿವಕುಮಾರ್ ಭೇಟಿಯ ಕುರಿತು ಮಾಹಿತಿ ಪ್ರಕಟವಾಗಿಲ್ಲ.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಈಗ ಉದ್ಯಮಿ ಗೌತಮ್ ಅದಾನಿ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭೇಟಿ ಭಾರಿ ಸಂಚಲನ ಮೂಡಿಸಿದೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಈ ಹೈಪ್ರೊಫೈಲ್ ಸಭೆಯ ಕುರಿತು ಮುಖ್ಯಮಂತ್ರಿ ಕಚೇರಿ (CMO) ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ಸಂಪೂರ್ಣ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಾಮಾನ್ಯವಾಗಿ ಪ್ರಮುಖ ಉದ್ಯಮಿಗಳು ಅಥವಾ ಗಣ್ಯರು ಭೇಟಿಯಾದಾಗ ಫೋಟೋ ಹಾಗೂ ವಿವರಗಳನ್ನು ಹಂಚಿಕೊಳ್ಳುವ ಸಿಎಂಒ, ಈ ಭೇಟಿಯ ಯಾವುದೇ ಡಿಜಿಟಲ್ ಸುಳಿವು ಬಿಟ್ಟುಕೊಡದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಿಎಂಒನ ಅಧಿಕೃತ ‘ಎಕ್ಸ್’ ಖಾತೆ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣ ವೇದಿಕೆಯಲ್ಲೂ ಅದಾನಿ-ಶಿವಕುಮಾರ್ ಭೇಟಿಯ ಕುರಿತು ಮಾಹಿತಿ ಪ್ರಕಟವಾಗಿಲ್ಲ.
ಸಿಎಂಒ ಸಾಮಾನ್ಯ ಕಾರ್ಯವೈಖರಿಗೆ ಭಿನ್ನವಾಗಿರುವ ಈ ಬೆಳವಣಿಗೆ, ಭೇಟಿಯ ಹಿಂದೆ ರಾಜಕೀಯ ಸೂಕ್ಷ್ಮತೆ ಇರಬಹುದೇ ಎಂಬ ಊಹಾಪೋಹಗಳಿಗೆ ಮತ್ತಷ್ಟು ಎಡೆಮಾಡಿಕೊಟ್ಟಿದೆ. ಈ ಭೇಟಿ ಕಾಂಗ್ರೆಸ್ ಪಕ್ಷಕ್ಕೂ ಮುಜುಗರದ ಸೃಷ್ಟಿಸಿದೆ ಎನ್ನಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಮಾಡುತ್ತಿರುವ ಪ್ರಮುಖ ಆರೋಪಗಳಲ್ಲಿ ‘ಕ್ರೋನಿ ಕ್ಯಾಪಿಟಲಿಸಂ’ ಹಾಗೂ ಅದಾನಿ ಸಮೂಹದೊಂದಿಗಿನ ನಿಕಟ ಸಂಬಂಧವೂ ಸೇರಿದೆ. ಹೀಗಾಗಿ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯದ ಮುಖ್ಯಮಂತ್ರಿ ಮತ್ತು ಅದಾನಿ ನಡುವಿನ ಭೇಟಿ ರಾಜಕೀಯವಾಗಿ ಅಸಹಜ ಚಿತ್ರಣ ನೀಡುವ ಸಾಧ್ಯತೆಯಿದೆ.
ಈ ನಡುವೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೂಡಲೇ ಭೇಟಿಯನ್ನು ಸಾಮಾನ್ಯ ಹಾಗೂ ರಾಜಕೀಯೇತರ ಭೇಟಿ ಎಂದು ಬಣ್ಣಿಸಿದ್ದಾರೆ.
ಅದಾನಿ ಅವರು ಮುಖ್ಯಮಂತ್ರಿಯನ್ನು ಭೇಟಿಯಾಗಿರುವುದು ಗುತ್ತಿಗೆದಾರರೊಬ್ಬರು ಮುಖ್ಯಮಂತ್ರಿಯನ್ನು ಭೇಟಿ ಮಾಡಿದಷ್ಟೇ. ಅದಾನಿ ಬಗ್ಗೆ ನಮಗೆ ಯಾವುದೇ ಅಭಿಪ್ರಾಯವಿದ್ದರೂ, ಅವರು ಚಿತ್ತಾಪುರದಲ್ಲಿರುವ ಎಸಿಸಿ ಸಿಮೆಂಟ್ ಕಾರ್ಖಾನೆಯನ್ನು ಖರೀದಿಸಿದ್ದಾರೆ. ಅದರ ಬಗ್ಗೆ ನಾನೇನು ಮಾಡಲು ಸಾಧ್ಯ? ನಾವು ಕಾನೂನನ್ನು ಪಾಲಿಸಬೇಕಷ್ಟೇ ಎಂದು ಹೇಳಿದ್ದಾರೆ.
ರಾಜ್ಯದ ಎರಡು ಯೋಜನೆಗಳಿಗೆ ಅದಾನಿ ಸಮೂಹವೇ ಅತಿ ಕಡಿಮೆ ಮೊತ್ತದ ಬಿಡ್ ಸಲ್ಲಿಸಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಸರ್ಕಾರ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ನಾವು ಟೆಂಡರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ನಮಗೆ ಅವರು ಗುತ್ತಿಗೆದಾರರಷ್ಟೇ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



