ರಾಜ್ಯ

KPSC ಹಗರಣ: IAS ಅಧಿಕಾರಿ ಗಂಗ್ವಾರ್ ಮನೆ ಮೇಲೆ ED ದಾಳಿ; ಗೇಟ್ ಲಾಕ್ ಮಾಡಿ ಸೆಕ್ಯೂರಿಟಿ ಹೈಡ್ರಾಮಾ, ಕೀ ಮೇಕರ್ ಕರೆಯಿಸಿ ಬಾಗಿಲು ಮುರಿದ ಅಧಿಕಾರಿಗಳು..!

2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಗಂಗ್ವಾರ್ ಸದ್ಯ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಎಂಎಸ್‌ಎಂಇ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

KPSC ಹಗರಣ: IAS ಅಧಿಕಾರಿ ಗಂಗ್ವಾರ್ ಮನೆ ಮೇಲೆ ED ದಾಳಿ; ಗೇಟ್ ಲಾಕ್ ಮಾಡಿ ಸೆಕ್ಯೂರಿಟಿ ಹೈಡ್ರಾಮಾ, ಕೀ ಮೇಕರ್ ಕರೆಯಿಸಿ ಬಾಗಿಲು ಮುರಿದ ಅಧಿಕಾರಿಗಳು..!
ಅಧಿಕಾರಿಯಮನೆ ಮುಂದೆ ಇರುವ ಪೊಲೀಸರು.
Published On :

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷಾ ಅಕ್ರಮ ಹಾಗೂ ಭ್ರಷ್ಟಾಚಾರದ ಜೇನುಗೂಡಿಗೆ ಕೈಹಾಕಿರುವ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು, ಭಾನುವಾರ ಮಧ್ಯಾಹ್ನ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಸೇರಿದ ಬೆಂಗಳೂರು ಮತ್ತು ಉತ್ತರ ಪ್ರದೇಶದ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ತನಿಖಾ ಸಂಸ್ಥೆಗೆ ತೀವ್ರ ಪ್ರತಿರೋಧ ಎದುರಾಗಿದ್ದು, ಸ್ಥಳದಲ್ಲಿ ಭಾರೀ ಹೈಡ್ರಾಮಾ ಸೃಷ್ಟಿಯಾಗಿದೆ.

2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಗಂಗ್ವಾರ್ ಸದ್ಯ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಎಂಎಸ್‌ಎಂಇ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ ನಡೆದ ಸಂದರ್ಭದಲ್ಲಿ ಅವರು ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿ ಸೇವೆ ಸಲ್ಲಿಸಿದ್ದರು.

ಕಳೆದ ಕೆಲ ದಿನಗಳಿಂದ ಗಂಗ್ವಾರ್ ಅವರು ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಶನಿವಾರ ಅವರು ನಾಪತ್ತೆಯಾಗಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಬಳಿಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿ, ಕುಟುಂಬದ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಗಂಗ್ವಾರ್ ಉತ್ತರ ಪ್ರದೇಶದಲ್ಲಿರುವ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದರು ಎಂದು ತಿಳಿಸಿದ್ದರು.

ಭಾನುವಾರ ಬೆಂಗಳೂರಿನ ವಲಯದ ಇಡಿ ಅಧಿಕಾರಿಗಳು ಸಿಆರ್‌ಪಿಎಫ್ ಸಿಬ್ಬಂದಿಯೊಂದಿಗೆ ಜಯಮಹಲ್ ರಸ್ತೆಯ ಸಮೀಪದಲ್ಲಿರುವ ಗಂಗ್ವಾರ್ ಅವರ ಅಪಾರ್ಟ್‌ಮೆಂಟ್‌ಗೆ ತೆರಳಿದರು. ಆದರೆ, ಗಂಗ್ವಾರ್ ಮನೆಯಲ್ಲಿ ಇಲ್ಲ ಎಂದು ಹೇಳಿದ ಭದ್ರತಾ ಸಿಬ್ಬಂದಿ ಆರಂಭದಲ್ಲಿ ಅಧಿಕಾರಿಗಳನ್ನು ಒಳಗೆ ಬಿಡಲಿಲ್ಲ ಎನ್ನಲಾಗಿದೆ.

ಗಂಗ್ವಾರ್ ಅವರನ್ನು ಸಂಪರ್ಕಿಸಲು ಅಧಿಕಾರಿಗಳು ಪ್ರಯತ್ನಿಸಿದಾಗ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ತಿಳಿದುಬಂದಿದೆ.

ನಂತರ ಇಡಿ ಅಧಿಕಾರಿಗಳು ಅಪಾರ್ಟ್‌ಮೆಂಟ್ ಒಳಗೆ ಪ್ರವೇಶಿಸಲು ಸುಮಾರು ಒಂದು ಗಂಟೆ ಸಮಯ ಬೇಕಾಯಿತು. ಬಳಿಕ ಗಂಗ್ವಾರ್ ಅವರ ಫ್ಲ್ಯಾಟ್‌ಗೆ ಬೀಗ ಹಾಕಿರುವುದು ಕಂಡುಬಂದಿದೆ. ಅಧಿಕಾರಿಗಳು ಕೀ ತಯಾರಿಸುವ ವ್ಯಕ್ತಿಯನ್ನು ಕರೆಸಿ, ನಕಲಿ ಕೀ ಬಳಸಿ ಬಾಗಿಲು ತೆರೆದು ಒಳಗೆ ಪ್ರವೇಶಿಸಿದ್ದಾರೆ.

ಸಾಕ್ಷಿಯೊಬ್ಬರು ಹಾಗೂ ನೆರೆಮನೆಯವರ ಸಮ್ಮುಖದಲ್ಲಿ ಗಂಗ್ವಾರ್ ಅವರ ನಿವಾಸದಲ್ಲಿ ಶೋಧ ನಡೆಸಿದ ಅಧಿಕಾರಿಗಳು, ಅಲ್ಲಿಂದ ಪ್ರಿಂಟರ್‌ವೊಂದನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದೇ ವೇಳೆ ಉತ್ತರ ಪ್ರದೇಶದಲ್ಲಿರುವ ಗಂಗ್ವಾರ್ ಅವರ ನಿವಾಸದ ಮೇಲೂ ಇಡಿ ತಂಡಗಳು ದಾಳಿ ನಡೆಸಿವೆ ಎನ್ನಲಾಗಿದೆ.

ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಇಡಿ ಇತ್ತೀಚೆಗೆ ಕರ್ನಾಟಕ ಮತ್ತು ಗುಜರಾತ್‌ನ 21 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸ ಸೇರಿದಂತೆ ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದ ವ್ಯಕ್ತಿಗಳ ಸ್ಥಳಗಳಲ್ಲೂ ಅಂದು ಶೋಧ ನಡೆಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.