ರಾಜ್ಯ

ಇನ್ಮುಂದೆ ಖಾಸಗಿ ರಸ್ತೆಗಳು ಸಾರ್ವಜನಿಕ ಆಸ್ತಿ: ಪರಿಹಾರವೂ ಇಲ್ಲ, ಟಿಡಿಆರ್ ಕೂಡ ಇಲ್ಲ! ವಿಪಕ್ಷಗಳ ವಿರೋಧದ ನಡುವೆಯೂ ಮಹತ್ವದ ಬಿಲ್ ಪಾಸ್

ರಾಜ್ಯದ ನಗರ ಮತ್ತು ಪಟ್ಟಣಗಳಲ್ಲಿರುವ ಖಾಸಗಿ ರಸ್ತೆ ಹಾಗೂ ಚರಂಡಿಗಳನ್ನು ಸಾರ್ವಜನಿಕ ಆಸ್ತಿಯನ್ನಾಗಿ ಘೋಷಿಸಲು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುವ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಆ ಕುರಿತ ವರದಿ ಇಲ್ಲಿದೆ:

ಇನ್ಮುಂದೆ ಖಾಸಗಿ ರಸ್ತೆಗಳು ಸಾರ್ವಜನಿಕ ಆಸ್ತಿ: ಪರಿಹಾರವೂ ಇಲ್ಲ, ಟಿಡಿಆರ್ ಕೂಡ ಇಲ್ಲ! ವಿಪಕ್ಷಗಳ ವಿರೋಧದ ನಡುವೆಯೂ ಮಹತ್ವದ ಬಿಲ್ ಪಾಸ್
ಕೃಷ್ಣ ಬೈರೇಗೌಡ
Published On :

ಬೆಂಗಳೂರು: ನಿಮ್ಮ ಬಡಾವಣೆಯ ಅಥವಾ ಖಾಸಗಿ ಲೇಔಟ್‌ನ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದರೂ ಸ್ಥಳೀಯ ಸಂಸ್ಥೆಗಳು ದುರಸ್ತಿ ಮಾಡುತ್ತಿಲ್ಲವೇ? ಇನ್ನು ಮುಂದೆ ಆ ಚಿಂತೆ ಇರುವುದಿಲ್ಲ. ಕರ್ನಾಟಕದ ನಗರ ಮತ್ತು ಪಟ್ಟಣಗಳಲ್ಲಿರುವ ಖಾಸಗಿ ರಸ್ತೆಗಳ ಚಿತ್ರಣವೇ ಸಂಪೂರ್ಣವಾಗಿ ಬದಲಾಗಲಿದ್ದು, ಆ ಖಾಸಗಿ ರಸ್ತೆಗಳನ್ನು ಇನ್ನು ಮುಂದೆ ಸಾರ್ವಜನಿಕ ರಸ್ತೆ ಎಂದು ಪರಿಗಣಿಸುವದಕ್ಕೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಈ ನಿರ್ಧಾರದಿಂದ ನಗರವಾಸಿಗಳ ದೀರ್ಘಕಾಲದ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರೆ, ಖಾಸಗಿ ಬಡಾವಣೆ ಮಾಲೀಕರಿಗೆ ಆಘಾತವಾಗಿದೆ.

ಹೌದು, ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಅವರು ಮಂಡಿಸಿದ 'ಕರ್ನಾಟಕ ಪುರಸಭೆಗಳ (ತಿದ್ದುಪಡಿ) ವಿಧೇಯಕ 2026' ಮತ್ತು 'ಕರ್ನಾಟಕ ಮಹಾನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ 2026' ಕ್ಕೆ ವಿರೋಧ ಪಕ್ಷಗಳ ಭಾರಿ ಗದ್ದಲ ಮತ್ತು ಪ್ರತಿಭಟನೆಯ ನಡುವೆಯೇ ಸದನದಲ್ಲಿ ಅನುಮೋದನೆ ಸಿಕ್ಕಿದೆ. ಆ ಕುರಿತ ವರದಿ ಇಲ್ಲಿದೆ:

ಮಸೂದೆಯ ಮುಖ್ಯ ಉದ್ದೇಶವೇನು?

ನಗರ ಅಥವಾ ಪಟ್ಟಣ ವ್ಯಾಪ್ತಿಯಲ್ಲಿರುವ ಖಾಸಗಿ ರಸ್ತೆಗಳು ಮತ್ತು ಚರಂಡಿಗಳು ತೀರಾ ಹದಗೆಟ್ಟು, ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಗೆ ಧಕ್ಕೆ ತರುತ್ತಿದ್ದರೆ, ಅಂತಹ ರಸ್ತೆಗಳನ್ನು ಮುನ್ಸಿಪಲ್ ಕಮಿಷನರ್‌ಗಳು ಅಥವಾ ಅಧಿಕಾರಿಗಳು ನೇರವಾಗಿ ತಮ್ಮ ಸುಪರ್ದಿಗೆ ಪಡೆಯಬಹುದು. ಈ ಹಿಂದೆ ಖಾಸಗಿ ಲೇಔಟ್‌ಗಳು ಅಥವಾ ಜಾಗಗಳಲ್ಲಿನ ರಸ್ತೆಗಳನ್ನು ದುರಸ್ತಿ ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಕಾನೂನಾತ್ಮಕವಾಗಿ ಅವಕಾಶವಿರಲಿಲ್ಲ. ಇನ್ನು ಮುಂದೆ ಸರ್ಕಾರವೇ ಇವುಗಳನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸಿ, ತಾನೇ ಅಭಿವೃದ್ಧಿಪಡಿಸಲಿದೆ.

ಪ್ರಕ್ರಿಯೆ ಹೇಗೆ ನಡೆಯುತ್ತದೆ?

  • ಸ್ವಯಂಪ್ರೇರಿತ ಕ್ರಮ: ರಸ್ತೆಗಳು ಕಳಪೆ ಸ್ಥಿತಿಯಲ್ಲಿದ್ದಾಗ ಅಧಿಕಾರಿಗಳು ತಾವಾಗಿಯೇ (Suo Motu) ಈ ಪ್ರಕ್ರಿಯೆಯನ್ನು ಆರಂಭಿಸಬಹುದು.

  • ಮಾಲೀಕರ ಮನವಿ: ಅಥವಾ ಆ ಖಾಸಗಿ ರಸ್ತೆಯ ಸೈಟು ಮಾಲೀಕರು ಒಟ್ಟಾಗಿ ತಮ್ಮ ರಸ್ತೆಯನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸುವಂತೆ ನಗರಸಭೆ ಅಥವಾ ಪಾಲಿಕೆಗೆ ಮನವಿ ಸಲ್ಲಿಸಬಹುದು. 

ಭೂಮಾಲೀಕರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ!

ಈ ಮಸೂದೆಯ ಅತ್ಯಂತ ಪ್ರಮುಖ ಮತ್ತು ಕಠಿಣ ನಿಯಮ ಅಂದರೆ, ಒಮ್ಮೆ ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸಿದ ಬಳಿಕ, ಆ ರಸ್ತೆ ನಿರ್ಮಿಸಲಾದ ಜಾಗದ ಮೂಲ ಮಾಲೀಕರು ಯಾವುದೇ ರೀತಿಯ ಹಣಕಾಸಿನ ಪರಿಹಾರವನ್ನು ಸರ್ಕಾರದಿಂದ ಪಡೆಯಲು ಅರ್ಹರಾಗಿರುವುದಿಲ್ಲ. ಜೊತೆಗೆ, ಭೂಮಾಲೀಕರು ಇಂತಹ ಜಾಗಗಳಿಗೆ ಬದಲಾಗಿ ಅಭಿವೃದ್ಧಿ ಹಕ್ಕು ಪ್ರಮಾಣಪತ್ರ ಅಥವಾ ಟಿಡಿಆರ್ ಅನ್ನು ಕೂಡ ಕ್ಲೈಮ್ ಮಾಡುವಂತಿಲ್ಲ.

ಮುಂದುವರೆದು, ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಮತ್ತು ಜೆಡಿಎಸ್, ಜನರ ಖಾಸಗಿ ಆಸ್ತಿಯನ್ನು ಯಾವುದೇ ಪರಿಹಾರ ನೀಡದೆ ಸರ್ಕಾರ ವಶಪಡಿಸಿಕೊಳ್ಳುವುದು ಕಾನೂನುಬಾಹಿರ ಮತ್ತು ಇದು ಮಾಲೀಕರ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿದೆ. ಇದರೊಂದಿಗೆ, ಅಧಿಕಾರಿಗಳು ತಮಗೆ ಬೇಕಾದ ಖಾಸಗಿ ಲೇಔಟ್‌ಗಳು ಅಥವಾ ಟೆಕ್ ಪಾರ್ಕ್‌ಗಳ ರಸ್ತೆಗಳನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.