ಕಾಡಿಗೆ ಬೆಂಕಿ ಹಚ್ಚಿ, ಶಿಬಿರಗಳನ್ನೇ ಸ್ಫೋಟಿಸಿದ ಕಳ್ಳಬೇಟೆಗಾರರು: ಚಾಮರಾಜನಗರ ಎನ್‌ಕೌಂಟರ್ ಪ್ರತಿಕಾರಕ್ಕೆ 10 ಎಕರೆ ಅರಣ್ಯವೇ ನಾಶ!
ಎನ್‌ಕೌಂಟರ್ ನಂತರ ಕಳ್ಳಬೇಟೆಗಾರರು ಅರಣ್ಯ ಇಲಾಖೆಯನ್ನು ಗುರಿಯಾಗಿಸಿಕೊಂಡು ಸರಣಿ ಕೃತ್ಯಗಳನ್ನು ಎಸಗುತ್ತಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ವನ್ಯಜೀವಿ ವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಎನ್‌ಕೌಂಟರ್ ಗೆ ಮೂವರು ಬಲಿಯಾಗಿದ್ದು, ಇದರಿಂದ ಆಕ್ರೋಶಗೊಂಡಿರುವ ಕಳ್ಳಬೇಟೆಗಾರರು ಕಾಡಿಗೆ ಬೆಂಕಿ ಹಚ್ಚಿ ಶಿಬಿರಗಳನ್ನೇ ಸ್ಫೋಟಿಸಿದ್ದಾರೆ.
ಎನ್‌ಕೌಂಟರ್ ನಂತರ ಕಳ್ಳಬೇಟೆಗಾರರು ಅರಣ್ಯ ಇಲಾಖೆಯನ್ನು ಗುರಿಯಾಗಿಸಿಕೊಂಡು ಸರಣಿ ಕೃತ್ಯಗಳನ್ನು ಎಸಗುತ್ತಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.
ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮಗಳಲ್ಲಿ ಅರಣ್ಯ ಸಿಬ್ಬಂದಿಯನ್ನು ಟಾರ್ಗೆಟ್ ಮಾಡುತ್ತಿರುವ ದುಷ್ಕರ್ಮಿಗಳು, ಇದೀಗ ಮಲೆ ಮಹದೇಶ್ವರ ವನ್ಯಜೀವಿಧಾಮದ ಸುಮಾರು 10 ಎಕರೆ (2.5 ಹೆಕ್ಟೇರ್) ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.
ಚಾಮರಾಜನಗರ ಜಿಲ್ಲೆಯ ಶಿಲುಬೆಪುರ ಅರಣ್ಯ ಪ್ರದೇಶದಲ್ಲಿ ಬೇಟೆ ತಡೆ ಶಿಬಿರವನ್ನು ಸ್ಫೋಟಿಸಿದ ಕೆಲವು ದಿನಗಳ ನಂತರ, ದುಷ್ಕರ್ಮಿಗಳು ಇದೀಗ ಕಾಡಿಗೆ ಬೆಂಕಿ ಹಚ್ಚಿದ್ದು, ಸುಮಾರು 10 ಎಕರೆ ಅರಣ್ಯ ಸಂಪೂರ್ಣವಾಗಿ ಭಸ್ಮವಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ಗುರುವಾರ ತಿಳಿಸಿವೆ.
ಆಗಸ್ಟ್ 15 ರಂದು ಚಾಮರಾಜನಗರದಲ್ಲಿ ಮೂವರು ಶಂಕಿತ ಬೇಟೆಗಾರರ ಹತ್ಯೆಗೆ ಪ್ರತೀಕಾರವಾಗಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ.
10 ಎಕರೆ ಕಾಡಿಗೆ ಬೆಂಕಿ!
ಕೊಳ್ಳೇಗಾಲ ತಾಲೂಕಿನ ಶಿಲುವೆಪುರ ಅರಣ್ಯ ವ್ಯಾಪ್ತಿಗೆ ನುಗ್ಗಿರುವ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿದ್ದು, ಸುಮಾರು 10 ಎಕರೆಗೂ ಹೆಚ್ಚು ಅರಣ್ಯ ಸಂಪತ್ತು ಸುಟ್ಟು ಕರಕಲಾಗಿದೆ. ಇದರ ಜೊತೆಗೆ ಜಾಗೇರಿ ಬಳಿಯಿದ್ದ ಕಳ್ಳಬೇಟೆ ತಡೆ ಶಿಬಿರವನ್ನೂ ಧ್ವಂಸಗೊಳಿಸಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಈ ದುಷ್ಕೃತ್ಯದ ವಿಡಿಯೋಗಳನ್ನು ಒಂದೊಂದಾಗಿ ಬಿಡುಗಡೆ ಮಾಡುತ್ತಿದ್ದು, ಮಲೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳಲ್ಲಿ ತೀವ್ರ ಆತಂಕ ಮನೆಮಾಡಿದೆ.
ಡೈನಮೈಟ್, ಜಿಲೆಟಿನ್ ಕಡ್ಡಿ ಬಳಸಿ ಶಿಬಿರಗಳ ಸ್ಫೋಟ
ಕೊತ್ತನೂರು ವಲಯದಲ್ಲಿರುವ ಮಿಂಚಿನರೆಹಳ್ಳ ಅಕ್ರಮ ಬೇಟೆ ತಡೆ ಶಿಬಿರವನ್ನು ಡೈನಮೈಟ್ ಹಾಗೂ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಸ್ಫೋಟದ ತೀವ್ರತೆಗೆ ಶಿಬಿರದ ಗೋಡೆಗಳು ಹಾನಿಗೊಂಡಿದ್ದು, ಒಳಗೆ ಇರಿಸಲಾಗಿದ್ದ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಲ್ಲಿ ಯಾವುದೇ ವ್ಯಕ್ತಿಗೆ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



