ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿ.ಕೆ ಶಿವಕುಮಾರ್ ನಿರ್ಧಾರ..!
ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನಮಾನ ನೀಡುವುದು ಹಾಗೂ ಅವರ ಕ್ಷೇತ್ರಗಳಿಗೆ ಸಮರ್ಪಕ ಅನುದಾನ ಒದಗಿಸುವ ಭರವಸೆಯನ್ನೂ ಮುಖ್ಯಮಂತ್ರಿ ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರ ಮನವೊಲಿಕೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.
ಪಕ್ಷದೊಳಗಿನ ಅಸಮಾಧಾನ ಹಾಗೂ ಭಿನ್ನಮತಕ್ಕೆ ಅವಕಾಶ ನೀಡದಂತೆ ಪ್ರತಿ ಜಿಲ್ಲೆಯ ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತವಾಗಿ ಉಪಾಹಾರ ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸುವ ಯೋಜನೆಯನ್ನು ಸಿಎಂ ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರಿಗೆ ನಿಗಮ-ಮಂಡಳಿಗಳಲ್ಲಿ ಸ್ಥಾನಮಾನ ನೀಡುವುದು ಹಾಗೂ ಅವರ ಕ್ಷೇತ್ರಗಳಿಗೆ ಸಮರ್ಪಕ ಅನುದಾನ ಒದಗಿಸುವ ಭರವಸೆಯನ್ನೂ ಮುಖ್ಯಮಂತ್ರಿ ನೀಡಿದ್ದಾರೆ ಎನ್ನಲಾಗಿದೆ.
ಸೋಮವಾರ ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕರ ನಿಯೋಗದೊಂದಿಗೆ ನಡೆದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಈ ಭರವಸೆಗಳನ್ನು ನೀಡಿದ್ದಾರೆಂದು ತಿಳಿದುಬಂದಿದೆ.
ಸಭೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಕೆ.ವೈ. ನಂಜೇಗೌಡ ಅವರು, ಈ ಹಿಂದೆ ನೀಡಿದ್ದ ಭರವಸೆಯಂತೆ ತಮಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.
ಈ ಹುದ್ದೆಯ ಮೇಲೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಿರಿಯ ಸಹೋದರ ಹಾಗೂ ಮಾಜಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಮತ್ತು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರೂ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಸಭೆಯಲ್ಲಿ ಎತ್ತಿನಹೊಳೆ ಯೋಜನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್, ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಕೋಲಾರ ಶಾಸಕ ಕೊತ್ತನೂರು ಮಂಜುನಾಥ್, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ಗೌರಿಬಿದನೂರು ಶಾಸಕ ಪುಟ್ಟಸ್ವಾಮಿ ಗೌಡ, ಕೋಲಾರ ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



