ಮೊಳಕಾಲ್ಮೂರನ್ನು ಆಂಧ್ರಪ್ರದೇಶಕ್ಕೆ ಸೇರಿಸಿ; ಸಚಿವ ಸ್ಥಾನ ಸಿಗದಿದ್ದಕ್ಕೆ ಕಾಂಗ್ರೆಸ್ ಶಾಸಕ NY ಗೋಪಾಲಕೃಷ್ಣ ಹೇಳಿಕೆ
ಮೊಳಕಾಲ್ಮೂರು ಕ್ಷೇತ್ರವನ್ನು ಪಕ್ಕದ ಆಂಧ್ರಪ್ರದೇಶಕ್ಕೆ ಸೇರಿಸಬೇಕು ಎಂದು ಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ನೀಡಿರುವ ಒಂದು ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಮೊಳಕಾಲ್ಮೂರು (ಚಿತ್ರದುರ್ಗ): ರಾಜಕೀಯದಲ್ಲಿ ಅಧಿಕಾರ ಮತ್ತು ಸ್ಥಾನಮಾನದ ಬಗ್ಗೆಗಿನ ಅಸಮಾಧಾನಗಳು ಆಗಾಗ ಹೊಸ ಸಂಚಲನ ಸೃಷ್ಟಿಸುತ್ತಲೇ ಇರುತ್ತವೆ. ಆದರೆ ಆಡಳಿತ ಪಕ್ಷದ ಹಿರಿಯ ಶಾಸಕರೊಬ್ಬರು ತಮ್ಮದೇ ಸರ್ಕಾರದ ವಿರುದ್ಧ ಅಸಹಾಯಕತೆ ತೋಡಿಕೊಂಡು, ತಮ್ಮ ಕ್ಷೇತ್ರವನ್ನೇ ನೆರೆಯ ರಾಜ್ಯಕ್ಕೆ ಸೇರಿಸಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದು ಈಗ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಮೊಳಕಾಲ್ಮೂರನ್ನು ಆಂಧ್ರಕ್ಕೆ ಸೇರಿಸಿ!
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಹಿರಿಯ ಕಾಂಗ್ರೆಸ್ ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ನೀಡಿರುವ ಒಂದು ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅದುವೇ, "ಮೊಳಕಾಲ್ಮೂರು ಕ್ಷೇತ್ರವನ್ನು ಪಕ್ಕದ ಆಂಧ್ರಪ್ರದೇಶಕ್ಕೆ ಸೇರಿಸಬೇಕು" ಎಂದು ಅವರು ಸಾರ್ವಜನಿಕವಾಗಿ ಹೇಳಿದ್ದಾರೆ.
ಅಸಮಾಧಾನಕ್ಕೆ ಕಾರಣವೇನು?
ಎನ್.ವೈ. ಗೋಪಾಲಕೃಷ್ಣ ಅವರು ಒಟ್ಟು 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ, ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರಲಿಲ್ಲ. ಹಿರಿತನಕ್ಕೆ ಮಣೆ ಹಾಕದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಹೈಕಮಾಂಡ್ ಹಾಗೂ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ. ಅದರಂತೆ, ಮೊಳಕಾಲ್ಮೂರಿನ ಅಂಬೇಡ್ಕರ್ ಭವನದ ಸ್ಥಳ ಪರಿಶೀಲನೆ ನಡೆಸುವಾಗ ಅವರ ಆಕ್ರೋಶ ಹೊರಬಂದಿದೆ. "ಮೊಳಕಾಲ್ಮೂರು ಕ್ಷೇತ್ರವು ರಾಜ್ಯದ ಯಾವುದೋ ಮೂಲೆಯಲ್ಲಿದೆ, ಹೀಗಾಗಿ ದೊಡ್ಡ ದೊಡ್ಡ ನಾಯಕರಿಗೆ ಇದು ಕಾಣಿಸುವುದೇ ಇಲ್ಲ. ಇಲ್ಲಿನ ಶಾಸಕರಿಗೆ ಮತ್ತು ಕ್ಷೇತ್ರಕ್ಕೆ ಗೌರವ ಸಿಗುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂದುವರೆದು, ಮೊಳಕಾಲ್ಮೂರು ಕ್ಷೇತ್ರದ ಹಣೆಬರಹ ಎಲ್ಲಿತ್ತೋ ಅಲ್ಲೇ ಇದೆ. ಅಭಿವೃದ್ಧಿ ಕಾಣದ ಈ ಕ್ಷೇತ್ರವನ್ನು ಪಕ್ಕದ ಆಂಧ್ರಪ್ರದೇಶಕ್ಕೆ ಅಥವಾ ಚಳ್ಳಕೆರೆಗೆ ಸೇರಿಸಿ ಬಿಡಲಿ ಎಂದು ಹೇಳಿಕೆ ನೀಡಿದ್ದಾರೆ.ಇದರ ಬೆನ್ನಲ್ಲೇ, ಶಕ್ತಿಯಿದ್ದರೆ ಗುದ್ದಬೇಕು, ಇಲ್ಲದಿದ್ದರೆ ಹೊಂದಿಕೊಳ್ಳಬೇಕು. ನಮಗೆ ಸದ್ಯ ಶಕ್ತಿ ಸಾಲದು, ಹೀಗಾಗಿ ಹೊಂದಿಕೊಂಡು ಹೋಗಿ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡೋಣ ಎಂದೂ ಮಾರ್ಮಿಕವಾಗಿ ನುಡಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



