ಸಿಂಗಟಾಲೂರು ಯೋಜನೆ ಸಂತ್ರಸ್ತ ರೈತರಿಗೆ 2 ದಶಕದಿಂದ ಭೂ ಪರಿಹಾರ ಬಾಕಿ; ಗದಗ ಡಿಸಿ ಕಾರು ಜಪ್ತಿಗೆ ಕೋರ್ಟ್ ಆದೇಶ
ಅನ್ನದಾತರು ಅಲ್ವಾ, ಸರಕಾರ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದಿದ್ದರೆ, ಏನು ಮಾಡುತ್ತಾರೆ? ಎಂದುಕೊಂಡರು ಅನಿಸುತ್ತೆ ಗದಗ ಜಿಲ್ಲಾಧಿಕಾರಿಗಳು! ಆದ್ರೆ, ಅದೇ ರೈತರು, ನ್ಯಾಯಾಂಗದ ಮೂಲಕ ಜಿಲ್ಲೆಯ ಪ್ರಥಮ ಪ್ರಜೆಗೆ ಸರಿಯಾದ ಪಾಠ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಗದಗ: ಅನ್ನದಾತರು ಅಲ್ವಾ, ಸರಕಾರ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದಿದ್ದರೆ, ಏನು ಮಾಡುತ್ತಾರೆ? ಎಂದುಕೊಂಡರು ಅನಿಸುತ್ತೆ ಗದಗ ಜಿಲ್ಲಾಧಿಕಾರಿಗಳು! ಆದ್ರೆ, ಅದೇ ರೈತರು, ನ್ಯಾಯಾಂಗದ ಮೂಲಕ ಜಿಲ್ಲೆಯ ಪ್ರಥಮ ಪ್ರಜೆಗೆ ಸರಿಯಾದ ಪಾಠ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಭಾಗದಲ್ಲಿ, ಬಿಡನಾಳ, ಶೀರನಹಳ್ಳಿ, ಬರದೂರು, ಮೇವುಂಡಿ ಸೇರಿದಂತೆ 10ಕ್ಕೂ ಅಧಿಕ ಗ್ರಾಮಗಳ ರೈತರು ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣಕ್ಕಾಗಿ ಸುಮಾರು 300 ಎಕರೆ ರೈತರ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಆದರೆ, ಈ ಯೋಜನೆಗಾಗಿ ಜಮೀನು ಕಳೆದುಕೊಂಡು ಸುಮಾರು 20 ವರ್ಷಗಳು ಕಳೆದರೂ ಜಿಲ್ಲಾಡಳಿತ ಹಾಗೂ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ರೈತರಿಗೆ ನೀಡಬೇಕಾದ ಸೂಕ್ತ ಪರಿಹಾರದ ಹಣವನ್ನು ಬಿಡುಗಡೆ ಮಾಡದೆ ವಿಳಂಬ ಧೋರಣೆ ಅನುಸರಿಸಿದ್ದರು. ಈ ವಿಳಂಬದಿಂದ ಬೇಸತ್ತ ಗದಿಗೆಪ್ಪ ಎಂಬ ರೈತರು, ತಮಗೆ ನ್ಯಾಯ ಸಿಗಬೇಕೆಂದು 2015 ರಲ್ಲಿಯೇ ಗದಗ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇನ್ನು ಆರಂಭದಲ್ಲಿ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ನೀಡುವಂತೆ ಘೋಷಣೆ ಮಾಡಲಾಗಿತ್ತು. ಆದ್ರೆ ಪರಿಹಾರ ಮೊತ್ತ ಹೆಚ್ಚಿಸಬೇಕು ಎಂದು ರೈತರು 2017ರಲ್ಲಿ ಬೇಡಿಕೆ ಸಲ್ಲಿಸಿದ್ದರು. ಹಲವು ವರ್ಷಗಳ ಕಾಲ ನಡೆದ ಕಾನೂನು ಪ್ರಕ್ರಿಯೆಯ ಬಳಿಕ 2024ರಲ್ಲಿ ಎಕರೆಗೆ 40 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶ ಹೊರಡಿಸಿತ್ತು. ಆದ್ರೆ ಕೋರ್ಟ್ ಆದೇಶವಾಗಿ ಎರಡು ವರ್ಷ ಕಳೆದರೂ ಪರಿಹಾರ ಮಾತ್ರ ಸಿಕ್ಕಿಲ್ಲ.
ಮುಂದುವರೆದು, ರೈತನ ಅರ್ಜಿಯನ್ನು ಪುರಸ್ಕರಿಸಿದ ಗದಗ ಜಿಲ್ಲಾ ನ್ಯಾಯಾಲಯವು, ಬಾಕಿ ಇರುವ ಬೃಹತ್ ಪರಿಹಾರ ಮೊತ್ತವನ್ನು ಪಾವತಿಸದ ಕಾರಣ ಜಿಲ್ಲಾಧಿಕಾರಿ ಕಚೇರಿಯ ಆಸ್ತಿ ಹಾಗೂ ಕಾರನ್ನು ಜಪ್ತಿ ಮಾಡಲು ಆದೇಶಿಸಿತು. ಅದರಂತೆ, ನ್ಯಾಯಾಲಯದ ಆದೇಶದ ಪ್ರತಿ ಹಾಗೂ ಜಪ್ತಿ ಮಾಡುವ ಅಧಿಕಾರ ಹೊಂದಿದ್ದ ಕೋರ್ಟ್ ಸಿಬ್ಬಂದಿ ಮತ್ತು ವಕೀಲರು ನೇರವಾಗಿ ಗದಗ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ಜಿಲ್ಲಾಧಿಕಾರಿಗಳ ಅಧಿಕೃತ ಸರ್ಕಾರಿ ವಾಹನವನ್ನು (ಕಾರು) ಕೂಡ ಕೋರ್ಟ್ ಆದೇಶದ ಅನ್ವಯ ವಶಪಡಿಸಿಕೊಂಡರು. ಇದರೊಂದಿಗೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿದ್ದ ಕಂಪ್ಯೂಟರ್ಗಳು, ಮಾನಿಟರ್ಗಳು, ಜೆರಾಕ್ಸ್ ಯಂತ್ರಗಳು ಮತ್ತು ಪ್ರಮುಖ ಕಚೇರಿ ಪೀಠೋಪಕರಣಗಳನ್ನು ಸಿಬ್ಬಂದಿ ಅಧಿಕೃತವಾಗಿ ಜಪ್ತಿ ಮಾಡಿಕೊಂಡರು.
ಏತನ್ಮಧ್ಯೆ, ಈ ಯೋಜನೆಯಡಿ ಭೂಮಿ ಕಳೆದುಕೊಂಡಿರುವ ಸುಮಾರು 600ಕ್ಕೂ ಹೆಚ್ಚು ರೈತ ಕುಟುಂಬಗಳು ಕಳೆದ ಎರಡು ದಶಕಗಳಿಂದ ಇಂದಿಗೂ ಸೂಕ್ತ ಪರಿಹಾರ ಸಿಗದೆ ಕಷ್ಟ ಅನುಭವಿಸುತ್ತಿದ್ದಾರೆ. ಆದ್ರೆ, ಪ್ರಕರಣವು ಹೈಕೋರ್ಟ್ನಲ್ಲಿದೆ ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ಸುಳ್ಳು ನೆಪಗಳನ್ನು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ರೈತ ಸಂಘಟನೆಗಳು ಆಕ್ರೋಶ ಹೊರಹಾಕಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



