ರಾಜ್ಯ

ಬೆಂಗಳೂರು ಗ್ರಾಮಾಂತರಕ್ಕೆ ಹೇಮಾವತಿ ನೀರು ಆರೋಪ: ತುಮಕೂರಿನಲ್ಲಿ ರೈತರ ಆಕ್ರೋಶ; DCM ಪರಮೇಶ್ವರ್ ಕಾರಿಗೆ ಮುತ್ತಿಗೆ..!

ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸಿದ ಉಪಮುಖ್ಯಮಂತ್ರಿ ಪರಮೇಶ್ವರ್‌, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ರೈತರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.

ಬೆಂಗಳೂರು ಗ್ರಾಮಾಂತರಕ್ಕೆ ಹೇಮಾವತಿ ನೀರು ಆರೋಪ: ತುಮಕೂರಿನಲ್ಲಿ ರೈತರ ಆಕ್ರೋಶ; DCM ಪರಮೇಶ್ವರ್ ಕಾರಿಗೆ ಮುತ್ತಿಗೆ..!
ಪ್ರತಿಭಟನೆ ನಡೆಸುತ್ತಿರುವ ಜನತೆ.
Published On :

ತುಮಕೂರು: ತುಮಕೂರು ಜಿಲ್ಲೆ ಪಾಲಿನ ಹೇಮಾವತಿ ನೀರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಅಕ್ರಮವಾಗಿ ತಿರುಗಿಸಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲೆಯ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಮಂಗಳವಾರ ಕುಣಿಗಲ್‌ನಲ್ಲಿ ಉದ್ರಿಕ್ತ ರೈತರು ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರ ವಾಹನವನ್ನು ತಡೆದು, ಮುತ್ತಿಗೆ ಹಾಕುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬರಪೀಡಿತ ಪ್ರದೇಶಗಳ ಪರಿಶೀಲನೆಗೆ ತೆರಳುತ್ತಿದ್ದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರ ಕಾರನ್ನು ತಡೆದ ರೈತರು, ಕಾರಿನ ಮುಂದೆ ಮಲಗಿ ಪ್ರತಿಭಟನೆ ನಡೆಸಿದರು.

ಈ ವೇಳೆ ಪರಮೇಶ್ವರ್‌ ಅವರೊಂದಿಗೆ ಯೋಜನೆಯನ್ನು ವಿರೋಧಿಸುತ್ತಿರುವ ತುರುವೇಕೆರೆ ಜೆಡಿಎಸ್‌ ಶಾಸಕ ಎಂ.ಟಿ. ಕೃಷ್ಣಪ್ಪ ಕೂಡ ಇದ್ದರು ಎಂದು ಮೂಲಗಳು ತಿಳಿಸಿವೆ.

ಪ್ರತಿಭಟನೆ ನಡೆಸಿದವರು ಡಿ.ಕೆ. ಶಿವಕುಮಾರ್‌ ಅವರ ಸಂಬಂಧಿ ಹಾಗೂ ಶಾಸಕ ಎಚ್‌.ಡಿ. ರಂಗನಾಥ್‌ ಅವರ ಬೆಂಬಲಿಗರು ಎಂದು ಮೂಲಗಳು ಹೇಳಿವೆ.

ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸಿದ ಉಪಮುಖ್ಯಮಂತ್ರಿ ಪರಮೇಶ್ವರ್‌, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ರೈತರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕುಣಿಗಲ್‌ ಹೊರತುಪಡಿಸಿ, ತುಮಕೂರು ಜಿಲ್ಲೆಯಾದ್ಯಂತ ರೈತರು ಹೇಮಾವತಿ ಲಿಂಕಿಂಗ್‌ ಎಕ್ಸ್‌ಪ್ರೆಸ್‌ ಕೆನಾಲ್‌ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಕಳೆದ ಹಲವು ತಿಂಗಳಿಂದ ಯೋಜನೆ ವಿರುದ್ಧ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ನಡುವೆ, ಯೋಜನೆಯ ಕಾಮಗಾರಿಯನ್ನು ಆರಂಭಿಸಬೇಕು ಎಂದು ಕುಣಿಗಲ್‌ ಭಾಗದ ರೈತರು ಒತ್ತಾಯಿಸುತ್ತಿರುವುದು ವಿವಾದಕ್ಕೆ ಮತ್ತಷ್ಟು ತಿರುವು ನೀಡಿದೆ.

ತೆರೆದ ಕಾಲುವೆಗಳ ಬದಲಾಗಿ ಭೂಗತ ಪೈಪ್‌ಲೈನ್ (ಕೊಳವೆಮಾರ್ಗ) ಮೂಲಕ ನೀರನ್ನು ಕೊಂಡೊಯ್ಯುವ ಸರ್ಕಾರದ ನಿರ್ಧಾರಕ್ಕೆ ಕೃಷಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಪೈಪ್‌ಲೈನ್ ಮಾಡುವುದರಿಂದ ದಾರಿಯುದ್ದಕ್ಕೂ ಇರುವ ಗುಬ್ಬಿ ಮುಂತಾದ ಮಧ್ಯದ ತಾಲೂಕುಗಳಲ್ಲಿ ಅಂತರ್ಜಲ ಮರುಪೂರಣವಾಗುವುದಿಲ್ಲ. ಇದರಿಂದ ಇಡೀ ಕೃಷಿ ಭೂಮಿ ಬಂಜರಾಗಲಿದ್ದು, ಜಾನುವಾರುಗಳ ಕುಡಿಯುವ ನೀರಿಗೂ ತತ್ವಾರ ಎದುರಾಗಲಿದೆ ಎಂದು ರೈತ ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ಸಮಯದಿಂದ ನೆನೆಗುದಿಗೆ ಬಿದ್ದಿದ್ದ 615 ಕೋಟಿ ರೂ. ವೆಚ್ಚದ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ನಾಲಾ ಯೋಜನೆಗೆ ರಾಜ್ಯ ಸರ್ಕಾರ ಇತ್ತೀಚೆಗೆ ಮರುಜೀವ ನೀಡಿದೆ. ಆದರೆ, ಈ ಯೋಜನೆಯ ಹಿಂದೆ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಹಿತಾಸಕ್ತಿ ಅಡಗಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪವಾಗಿದೆ.

ತಮ್ಮ ಭದ್ರಕೋಟೆಯಾಗಿರುವ ಮಾಗಡಿ ಮತ್ತು ರಾಮನಗರ ಭಾಗಕ್ಕೆ ತುಮಕೂರಿನ 24 ಟಿಎಂಸಿ ಪಾಲಿನ ನೀರನ್ನು ಸಾಗಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ರೈತರು ಹಾಗೂ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಗಂಭೀರವಾಗಿ ಹರಿಹಾಯ್ದಿವೆ.

ಆದರೆ ಈ ಆರೋಪಗಳನ್ನು ತಳ್ಳಿಹಾಕಿರುವ ಕಾಂಗ್ರೆಸ್ ಸರ್ಕಾರ ಮತ್ತು ಜಿಲ್ಲಾಡಳಿತ, ಈ ನಾಲೆಯು ಕುಣಿಗಲ್ ತಾಲೂಕಿಗೆ ಸಿಗಬೇಕಾದ 3 ಟಿಎಂಸಿ ನೀರನ್ನು ತಲುಪಿಸಲು ಮಾತ್ರ ರೂಪಿಸಲಾಗಿದೆ. ಮಾಗಡಿಯಂತಹ ಗಡಿ ಭಾಗಗಳಿಗೆ ಕೇವಲ ಕುಡಿಯುವ ನೀರನ್ನು ಮಾತ್ರ ನೀಡಲಾಗುತ್ತಿದೆ. ವಿರೋಧ ಪಕ್ಷಗಳು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ" ಎಂದು ಪ್ರತಿಪಾದಿಸಿದೆ.

ಹಿಂದೆ ಮೇ 2025 ರಲ್ಲೂ ಭಾರಿ ಹಿಂಸಾತ್ಮಕ ಪ್ರತಿಭಟನೆ ನಡೆದು 10 ತಿಂಗಳು ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ಮತ್ತೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುತ್ತಿದ್ದಂತೆ ಜಿಲ್ಲೆಯಾದ್ಯಂತ ಪ್ರತಿಭಟನೆಯ ಕಿಚ್ಚು ಜೋರಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.