Video: ಮಾರ್ಗಮಧ್ಯೆ ಮಹಿಳೆಗೆ ಹೃದಯಾಘಾತ; ಆಸ್ಪತ್ರೆಗೆ ಬಸ್ ತಿರುಗಿಸಿ ಜೀವ ಉಳಿಸಲು KSRTC ಚಾಲಕ ಹರಸಾಹಸ, ವ್ಯಾಪಕ ಮೆಚ್ಚುಗೆ.. ಆದ್ರೆ!
ಮಹಿಳೆಯ ಆರೋಗ್ಯ ಗಂಭೀರವಾಗಿರುವುದನ್ನು ತಿಳಿದ ಬಸ್ ಚಾಲಕ ಸಮಯಪ್ರಜ್ಞೆ ಮೆರೆದು, ನಿಗದಿತ ಮಾರ್ಗವನ್ನು ಮುಂದುವರಿಸದೆ ತಕ್ಷಣವೇ ತುಮಕೂರು–ಮಧುಗಿರಿ ರಸ್ತೆಯಲ್ಲಿರುವ ಆಸ್ಪತ್ರೆಗೆ ಬಸ್ ಅನ್ನು ತಿರುಗಿಸಿದ್ದಾರೆ.

ತುಮಕೂರು: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಏಕಾಏಕಿ ಹೃದಯಾಘಾತ ಸಂಭವಿಸಿದ್ದು, ಸಮಯಪ್ರಜ್ಞೆ ಮೆರೆದ ಚಾಲಕ ಹಾಗೂ ಸಿಬ್ಬಂದಿ ಬಸ್‌ನ್ನು ಸಮೀಪದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತಿರುಗಿಸಿ ಪ್ರಯಾಣಿಕನ ಜೀವ ಉಳಿಸಲು ಪ್ರಯತ್ನಿಸಿದ್ದಾರೆ.
ತುಮಕೂರಿನಿಂದ ಮಧುಗಿರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಮಾರ್ಗ ಮಧ್ಯೆ ಏಕಾಏಕಿ ಹೃದಯಾಘಾತ (Heart Attack) ಸಂಭವಿಸಿದೆ.
ಈ ವೇಳೆ ಮಹಿಳೆಯ ಆರೋಗ್ಯ ಗಂಭೀರವಾಗಿರುವುದನ್ನು ತಿಳಿದ ಬಸ್ ಚಾಲಕ ಸಮಯಪ್ರಜ್ಞೆ ಮೆರೆದು, ನಿಗದಿತ ಮಾರ್ಗವನ್ನು ಮುಂದುವರಿಸದೆ ತಕ್ಷಣವೇ ತುಮಕೂರು–ಮಧುಗಿರಿ ರಸ್ತೆಯಲ್ಲಿರುವ ಆಸ್ಪತ್ರೆಗೆ ಬಸ್ ಅನ್ನು ತಿರುಗಿಸಿದ್ದಾರೆ.
ಸಮೀಪದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ದ್ವಾರದವರೆಗೂ ಬಸ್ ಅನ್ನು ಕೊಂಡೊಯ್ದ ಚಾಲಕ, ಯಾವುದೇ ವಿಳಂಬವಾಗದಂತೆ ಮಹಿಳೆಯನ್ನು ಇತರ ಪ್ರಯಾಣಿಕರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು.
ತುರ್ತು ಚಿಕಿತ್ಸೆಗೆ ಒಳಪಡಿಸಿದ ಪರಿಣಾಮ ಮಹಿಳೆಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ದೊರೆಯಿತು. ಆಸ್ಪತ್ರೆಗೆ ತಲುಪಿದ ಬಳಿಕ ವೈದ್ಯಕೀಯ ಸಿಬ್ಬಂದಿ ತಕ್ಷಣ ಪ್ರಯಾಣಿಕನಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.
ವ್ಯಾಪಕ ಮೆಚ್ಚುಗೆ
ಚಾಲಕ ಮತ್ತು ನಿರ್ವಾಹಕರ ಸಮಯಪ್ರಜ್ಞೆ ಹಾಗೂ ಮಾನವೀಯ ನಡೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಚಾಲಕ ಬಸ್‌ನ ಮಾರ್ಗ ಬದಲಿಸಿ ಆಸ್ಪತ್ರೆಗೆ ಕರೆದೊಯ್ದಿರುವುದು ಪ್ರಯಾಣಿಕರ ಸುರಕ್ಷತೆಗೆ ನೀಡಿದ ಆದ್ಯತೆಯನ್ನು ತೋರಿಸಿದೆ.
ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಗಿದ್ದೇನು?
ಮೂಲಗಳ ಪ್ರಕಾರ ಮೂಲತಃ ಕಲಬುರಗಿ ಜಿಲ್ಲೆಯ 62 ವರ್ಷದ ಗಾಯತ್ರಿ ದೇವಿ ಎಂಬ ಮಹಿಳೆ, ಗುಬ್ಬಿ ಪಟ್ಟಣದಲ್ಲಿ ವಾಸವಾಗಿದ್ದರು. ಮಧುಗಿರಿಯಲ್ಲಿರುವ ಸಂಬಂಧಿಕರ ಮನೆಗೆ ತೆರಳಲು ತುಮಕೂರಿನಿಂದ ಪಾವಗಡ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.
ಬಸ್ ತುಮಕೂರು ನಗರದ ಆಂಜನೇಯ ಸ್ವಾಮಿ ಪ್ರತಿಮೆ ಸಮೀಪದ ಸಿಗ್ನಲ್ ಬಳಿ ತಲುಪುತ್ತಿದ್ದಂತೆ ಗಾಯತ್ರಿ ದೇವಿ ಅವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಸ್ ಚಾಲಕ ಹಾಗೂ ನಿರ್ವಾಹಕರು ಸಮಯ ವ್ಯರ್ಥ ಮಾಡದೆ ಬಸ್ ಅನ್ನು ನೇರವಾಗಿ ಮಧುಗಿರಿ–ಗೌರಿಬಿದನೂರು ರಸ್ತೆಯಲ್ಲಿರುವ ಸಾಚಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕೊಂಡೊಯ್ದು ಮಹಿಳೆಯನ್ನು ದಾಖಲಿಸಿದರು.
ಚಾಲಕನ ಶ್ರಮ ವ್ಯರ್ಥ, ಮಹಿಳೆ ಸಾವು
ಪ್ರಾಥಮಿಕ ಚಿಕಿತ್ಸೆ ಬಳಿಕ ವೈದ್ಯರ ಸಲಹೆ ಮೇರೆಗೆ ಗಾಯತ್ರಿ ದೇವಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಮಿಡಿತ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ದುರಾದೃಷ್ಟಶಾತ್ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದ್ದು, ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಯಾಣಿಕರ ಜೀವ ಉಳಿಸಲು ಚಾಲಕ ಮತ್ತು ನಿರ್ವಾಹಕರು ತೋರಿದ ಮಾನವೀಯತೆ ಹಾಗೂ ಸಮಯಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



