ತುಂಬುತ್ತಿರುವ ಕಬಿನಿ ಜಲಾಶಯದ ನೀರನ್ನು ಹಿಡಿದಿಡಲು ಹೇಗೆ ಸಾಧ್ಯ? ನೀರು ಬಿಡಲೇಬೇಕಾಗುತ್ತದೆ; ಸಿಎಂ ಡಿಕೆ ಶಿವಕುಮಾರ್
ನಾವು ನೀರು ಬಿಡುಗಡೆ ಮಾಡಲ್ಲ ಎಂದು ತೀರ್ಮಾನ ಮಾಡಿದರೂ, ಜಲಾಶಯ ತುಂಬಿದಾಗ ನೀರನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಹೋರಾಟಗಾರರು ನೀರು ಬಿಡುವ ಕಡೆ ಹೋಗಬಾರದು. ನೀರಿನ ರಭಸಕ್ಕೆ ನೀವು ಕೊಚ್ಚಿ ಹೋಗಬಹುದು.

ಮೈಸೂರು: ಕಬಿನಿ ಜಲಾಶಯ ಭರ್ತಿಯಾಗುತ್ತಿದೆ. ಅಣೆಕಟ್ಟು ತುಂಬಿದಾಗ ನೀರು ಹರಿಸಲೇಬೇಕಾಗುತ್ತದೆ. ಅದನ್ನು ಹಿಡಿದಿಡಲು ಸಾಧ್ಯವಿಲ್ಲ. ನೀರು ಬಿಡಬಾರದು ಎಂದು ಹೋರಾಟ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ನಮ್ರತೆಯಿಂದ ಮನವಿ ಮಾಡುತ್ತೇನೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. ಕಾವೇರಿ ನೀರು ಹರಿಸುವ ವಿಚಾರವಾಗಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ಕಬಿನಿ ಜಲಾಶಯದ ನೀರಿನ ಸಂಗ್ರಹಣೆ ಬಗ್ಗೆ ಅಧಿಕಾರಿಗಳು ಪ್ರತಿ ಗಂಟೆಯೂ ಮಾಹಿತಿ ನೀಡುತ್ತಿದ್ದಾರೆ.
ಒಳಹರಿವು 40 ಸಾವಿರ ಕ್ಯೂಸೆಕ್ಸ್ ಮುಟ್ಟಿದೆ. ಪ್ರಕೃತಿ ಯಾರ ಸ್ವತ್ತೂ ಅಲ್ಲ. ಪ್ರಕೃತಿಯ ಅಣತಿಯಂತೆ ನಾವು ಬದುಕುತ್ತಿದ್ದೇವೆ. ನಾವು ನೀರು ಬಿಡುಗಡೆ ಮಾಡಲ್ಲ ಎಂದು ತೀರ್ಮಾನ ಮಾಡಿದರೂ, ಜಲಾಶಯ ತುಂಬಿದಾಗ ನೀರನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಹೋರಾಟಗಾರರು ನೀರು ಬಿಡುವ ಕಡೆ ಹೋಗಬಾರದು. ನೀರಿನ ರಭಸಕ್ಕೆ ನೀವು ಕೊಚ್ಚಿ ಹೋಗಬಹುದು. ಯಾರೂ ನೀರಿಗೆ ಅಡ್ಡ ಮಲಗಲು ಹೋಗಬೇಡಿ ಎಂದು ಮನವಿ ಮಾಡಿದರು.
ನಮ್ಮ ಸ್ನೇಹಿತರು ತಮಿಳುನಾಡಿಗೆ ನೀರು ಹರಿಸಬಾರದಾಗಿ ಹೋರಾಟ, ಬಂದ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಒಂದು ಹೋರಾಟಕ್ಕೆ ಹಿನ್ನೆಲೆ ಇರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಹೋರಾಟಕ್ಕೂ ಗೌರವವಿದೆ.
ಆದರೆ ಈಗ ಪ್ರತಿಭಟನೆ ಬೇಡ. ಕಾನೂನು ಚೌಕಟ್ಟಿಗೆ ಏನೂ ತೊಂದರೆಯಾಗಬಾರದು, ಜನಜೀವನಕ್ಕೆ ತೊಂದರೆಯಾಗಬಾರದು. ಈ ರಾಜ್ಯದಲ್ಲಿ ಎಲ್ಲಾ ಜನರು ಬದುಕುತ್ತಿದ್ದಾರೆ. ಎಲ್ಲರನ್ನೂ ಸಂತೋಷದಿಂದ ಸ್ವೀಕಾರ ಮಾಡಿದ್ದೇವೆ. ತಮಿಳುನಾಡು ಸೇರಿದಂತೆ ನಾವೆಲ್ಲರೂ ಒಂದೇ ದೇಶದ ಪ್ರಜೆಗಳು" ಎಂದು ತಿಳಿಸಿದರು.
ಬಂಗಾರಪ್ಪ, ಎಸ್ ಎಂ ಕೃಷ್ಣ, ಸಿದ್ದರಾಮಯ್ಯ, ದೇವೇಗೌಡರ ಕಾಲದಲ್ಲೂ ಸಂಕಷ್ಟ ಎದುರಾದಾಗ ಅಂದಿನ ಸಂದರ್ಭಕ್ಕೆ ತಕ್ಕಂತೆ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ನಾವು ಮಾಡಿದ್ದು ಸರಿ, ಅವರುಗಳು ಮಾಡಿದ್ದು ತಪ್ಪು ಎಂದು ನಾವು ಹೇಳುವುದಿಲ್ಲ.
ತಮಿಳುನಾಡಿಗೆ 177 ಟಿಎಂಸಿ ನೀರನ್ನು ಹರಿಸಬೇಕು ಎಂದು ಆದೇಶವಿದೆ. ಇದಕ್ಕೆ ಸುಪ್ರೀಂಕೋರ್ಟ್ ಕೂಡ ಬಲ ನೀಡಿದೆ. ನಾವು ನ್ಯಾಯಾಲಯದ ಆದೇಶಕ್ಕೆ ಗೌರವ ನೀಡಬೇಕು. ಜೊತೆಗೆ ನಮ್ಮ ರೈತರನ್ನೂ ಕಾಪಾಡಬೇಕು. ನಮ್ಮ ರೈತರ ಹಿತವನ್ನು ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಆದೇಶ ಎರಡೂ ರಾಜ್ಯಕ್ಕೆ ವರ" ಎಂದು ಅಭಿಪ್ರಾಯಪಟ್ಟರು.
"ಎರಡೂ ರಾಜ್ಯಗಳನ್ನೂ ಕಾಪಾಡುವ ತೀರ್ಪನ್ನು ಈ ಹಿಂದೆ ನೀಡಲಾಗಿದೆ. ಮಾಧ್ಯಮವೊಂದರಲ್ಲಿ ಸಮತೋಲಿತ ಅಣೆಕಟ್ಟು ನಿರ್ಮಾಣ ಮಾಡುವುದರಿಂದ ಏನೆಲ್ಲಾ ಅನುಕೂಲವಾಗಲಿದೆ ಎಂದು ಚೆನ್ನಾಗಿ ವಿಶ್ಲೇಷಣೆ ಮಾಡಲಾಗಿದೆ.
ಕಾವೇರಿ ನೀರಿನ ವಿಚಾರವಾಗಿ ದೆಹಲಿಯಲ್ಲಿ ಪ್ರಹ್ಲಾದ್ ಜೋಶಿ ಅವರು, ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಅನೇಕರು ಅವರ ಕೈಲಾದ ಪ್ರಯತ್ನ ಮಾಡಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದವರಿಗೂ ಯಾವ್ಯಾವ ಜಲಾಶಯಗಳಲ್ಲಿ ಎಷ್ಟೆಷ್ಟು ನೀರಿದೆ ಎನ್ನುವ ಮಾಹಿತಿ ಕೂಡ ಇದೆ. ಬೇರೆ ಸಂದರ್ಭಗಳಿಗೆ ಹೋಲಿಸಿದರೆ ಅರ್ಧ ನೀರನ್ನೂ ಬಿಡುಗಡೆ ಮಾಡಿಲ್ಲ ಎಂದು ನಮ್ಮ ಮನವಿ ತಿರಸ್ಕರಿಸಿದ್ದಾರೆ" ಎಂದು ಹೇಳಿದರು.
"ಬಿಜೆಪಿಯವರ ಕಾವೇರಿ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯನ್ನೂ ಸಹ ನಾನು ಗಮನಿಸಿದ್ದೇನೆ. ತಮಿಳುನಾಡಿನ ಸಂಸದರು, ವಿವಿಧ ಪಕ್ಷಗಳ ನಾಯಕರು ಅವರ ರಾಜಕೀಯ ಅಸ್ತಿತ್ವಕ್ಕೆ ಹೋರಾಟ ಮಾಡುತ್ತಿದ್ದಾರೆ. ಅವರಿಗೂ ಎಲ್ಲಾ ಅರಿವಿದೆ. ಈ ಹಿಂದೆ ನಿಮ್ಮ ಸುಪರ್ಧಿಯಲ್ಲಿ ಅಣೆಕಟ್ಟು ಕಟ್ಟಿಕೊಳ್ಳಬಹುದು ಎಂದು ಹೇಳಿದ್ದರು. ಇದಕ್ಕೆ ದಾಖಲೆಗಳೂ ಸಹ ಇವೆ” ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




