ಒಳ ಮೀಸಲಾತಿಗೆ ಮೂರು ಸೂತ್ರ: ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ; ಯಾರಿಗೆ ಎಷ್ಟು?
ಎಡಗೈ ಹಾಗೂ ಬಲಗೈ ಸಮುದಾಯಕ್ಕೆ ತಲಾ ಶೇ. 5.25 ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಮತ್ತು ಇತರರಿಗೆ ಶೇ. 4.5 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

ಬೆಂಗಳೂರು: ರಾಜ್ಯದ ದಲಿತ ಸಮುದಾಯದ ಬಹುಕಾಲದ ಬೇಡಿಕೆಯಾದ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ವಿಶೇಷ ಸಚಿವ ಸಂಪುಟ ಸಭೆ ಶುಕ್ರವಾರ ಮಹತ್ವದ ನಿರ್ಣಯ ಕೈಗೊಂಡಿದೆ.
ಎಡಗೈ ಹಾಗೂ ಬಲಗೈ ಸಮುದಾಯಕ್ಕೆ ತಲಾ ಶೇ. 5.25 ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಮತ್ತು ಇತರರಿಗೆ ಶೇ 4.5 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಎಸ್ ಸಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ತಾಂತ್ರಿಕ ಸಮಿತಿ ಮಾಡಬೇಕೆಂದು ಕಳೆದ ಸಂಪುಟ ಸಭೆಯಲ್ಲಿ ತೀರ್ಮಾನ ಆಗಿತ್ತು. ಆ ಸಮಿತಿ ಶುಕ್ರವಾರ ವರದಿ ನೀಡಿದೆ. ಇದೀಗ ಶೇ. 15 ಪ್ರಮಾಣದಂತೆ ದಲಿತ ಎಡಗೈ ಸಮುದಾಯಕ್ಕೆ 5.3, ಬಲಗೈ ಸಮುದಾಯಕ್ಕೆ 5.3 ಹಾಗೂ ಇತರರಿಗೆ 4.4 ಹಂಚಿಕೆ ಮಾಡುವಂತೆ ವರದಿ ನೀಡಿತ್ತು. ಆದರೆ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದ ಬಳಿಕ ಮೀಸಲಾತಿ ಪ್ರಮಾಣವನ್ನು 5.25, 5.25 ಹಾಗೂ 4.5 ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಏಪ್ರಿಲ್ 16ರಂದು ನಡೆದಿದ್ದ ಸಂಪುಟ ಸಭೆಯಲ್ಲೂ ಒಳಮೀಸಲು ವಿಚಾರವಾಗಿ ಚೆರ್ಚೆಯಾಗಿತ್ತು. ಒಳಮೀಸಲು ಹಂಚಿಕೆ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪರಿಶಿಷ್ಟ ಎಡಗೈ ಸಮುದಾಯದ ಸಚಿವರು ಅಂದಿನ ಸಭೆಯಲ್ಲಿ ಒತ್ತಾಯಿಸಿದ್ದರು. ಹೀಗಾಗಿ ಮುಖ್ಯಕಾರ್ಯದರ್ಶಿ ಶಲಿನಿ ರಜನೀಶ್ ನೇತೃತ್ವದಲ್ಲಿ ತಾಂತ್ರಿಕ ಮತ್ತಯ ಕಾನೂನಾತ್ಮಕ ಅಂಶಗಳ ಪರಾಮರ್ಶೆಗೆ ತಾಂತ್ರಿಕ ಸಮಿತಿ ರಚಿಸಸಲಾಗಿತ್ತು. ಕಾನೂನು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು ಮತ್ತು ಅಡ್ವೋಕೇಟ್ ಜನರಲ್ ಈ ಸಮಿತಿಯಲ್ಲಿದ್ದರು.
ಹೊಸ ಮೀಸಲಾತಿಯೊಂದಿಗೆ ನೇಮಕಾತಿ
ಅಂತಿಮವಾಗಿ ನಾವು ಸಂಪುಟದಲ್ಲಿ ಒಂದು ನಿರ್ಧಾರ ಕೈಗೊಂಡಿದ್ದೇವೆ. ಎಸ್ ಸಿ ಒಳ ಮೀಸಲಾತಿಯಲ್ಲಿ ಪ್ರವರ್ಗ ಎ-5.25, ಬಿ-5.25, ಸಿ-4.5 ಎಂದು ನಿರ್ಧಾರ ಮಾಡಿದ್ದು, ಇದನ್ನು ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿದೆ. ಯಾವುದೇ ಅಪಸ್ವರ ಇಲ್ಲದೆಯೇ ಸಂಪುಟದಲ್ಲಿ ಒಪ್ಪಿಕೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.
ನ್ಯಾಯಾಲಯದ ಮುಂದಿನ ಆದೇಶದವರೆಗೆ ಇದೇ ಅನುಪಾತ ಅನ್ವಯವಾಗಲಿದ್ದು, ನೇಮಕಾತಿ ವೇಳೆ ಪ್ರವರ್ಗ ಎ-5.25, ಬಿ-5.25, ಸಿ-4.5 ಮೀಸಲಾತಿಯೊಂದಿಗೆ ಅಧಿಸೂಚನೆಯನ್ನು ಮತ್ತೊಮ್ಮೆ ಪ್ರಕಟ ಮಾಡುತ್ತೇವೆ.
ಬಜೆಟ್ನಲ್ಲಿ 56,432 ಹುದ್ದೆಗಳ ಭರ್ತಿ ಮಾಡುವುದಾಗಿ ಘೋಷಿಸಿದ್ದೇವೆ. ಈ 56,432 ಹುದ್ದೆಗಳ ಭರ್ತಿ ವೇಳೆ ಇದೇ ಮೀಸಲಾತಿ ಅನುಪಾತ ಅನ್ವಯವಾಗಲಿದೆ. ವಿಶೇಷ ಸಂಪುಟ ಸಭೆಯಲ್ಲಿ ನಿರ್ಧರಿಸಿದ ಅನುಪಾತ ಮುಂದುವರಿಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



