ರಾಜ್ಯಕ್ಕೆ ಬೇಸಿಗೆ ಬಿಸಿಲ ಬರೆ: KRS ಸೇರಿದಂತೆ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆ; ಬೆಂಗಳೂರಿಗೆ ಜಲ ಕಂಟಕ?
ಬೆಂಗಳೂರಿನ ಹಲವೆಡೆ ಈಗಾಗಲೇ ನೀರಿನ ಸಮಸ್ಯೆ ಶುರುವಾಗಿದ್ದು, ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವುದು ಇನ್ನಷ್ಟು ಸಮಸ್ಯೆಗೆ ಕಾರಣವಾಗಲಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಸದ್ಯ ಕೇವಲ 22 ಟಿಎಂಸಿ ಮಾತ್ರ ನೀರು ಶೇಖರಣೆ ಇದೆ.

ಬೆಂಗಳೂರು: ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕನ್ನಂಬಾಡಿ ಕಟ್ಟೆ ಜಲಾಶಯದಲ್ಲಿ ನೀರಿನ ಮಟ್ಟ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 100 ಅಡಿಗಿಂತ ಕೆಳಕ್ಕೆ ಅಂದರೆ 99 ಅಡಿಗೆ ಕುಸಿದಿದ್ದು, ಮಳೆಗಾಲ ವಿಳಂಬವಾದರೆ ಕುಡಿಯುವ ನೀರಿಗಾಗಿ ದೊಡ್ಡ ಮಟ್ಟದ ಹಾಹಾಕಾರ ಎದುರಾಗುವ ಭೀತಿ ಆವರಿಸಿದೆ.
ಬೆಂಗಳೂರಿನ ಹಲವೆಡೆ ಈಗಾಗಲೇ ನೀರಿನ ಸಮಸ್ಯೆ ಶುರುವಾಗಿದ್ದು, ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವುದು ಇನ್ನಷ್ಟು ಸಮಸ್ಯೆಗೆ ಕಾರಣವಾಗಲಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಸದ್ಯ ಕೇವಲ 22 ಟಿಎಂಸಿ ಮಾತ್ರ ನೀರು ಶೇಖರಣೆ ಇದೆ. ಇದರಲ್ಲಿ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಲಭ್ಯವಿರುವುದು ಕೇವಲ 15 ಟಿಎಂಸಿ ಮಾತ್ರ. ಪ್ರಸ್ತುತ ಜಲಾಶಯಕ್ಕೆ 66 ಕ್ಯೂಸೆಕ್ ಒಳಹರಿವು ಇದ್ದರೆ, ಹೊರಹರಿವು 4,388 ಕ್ಯೂಸೆಕ್ ಇದೆ.
ಕಾವೇರಿ ನೀರನ್ನೇ ನಂಬಿಕೊಂಡಿರುವ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ ಮತ್ತು ಇತರ ನಗರಗಳಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.
ಸದ್ಯ ಲಭ್ಯವಿರುವ ನೀರನ್ನು ಕಟ್ಟು ಪದ್ಧತಿಯಲ್ಲಿ ಬೆಳೆಗೆ ನೀಡಬೇಕಿದೆ ಮತ್ತು ಕುಡಿಯಲು ಮೀಸಲಿಡಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ. ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ತಡವಾದರೆ ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ಕಾವೇರಿ ನೀರು ಅವಲಂಬಿತ ಜನರಿಗೆ ನೀರಿನ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.
ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿತ ಕಂಡಿರುವುದು ಮುಂದೆ ಅನಾವೃಷ್ಟಿ ಪರಿಸ್ಥಿತಿ ಎದುರಾಗುತ್ತಾ ಎಂಬ ಆತಂಕ ಕಾಡುತ್ತಿದೆ. ಪ್ರಸ್ತುತ ಪ್ರಮುಖ ಜಲಾಶಯಗಳಲ್ಲಿ ಶೇ.36ಎಷ್ಟು ಮಾತ್ರ ನೀರು ಸಂಗ್ರಹವಿದೆ. ಸದ್ಯ ಪ್ರಮುಖ ಜಲಾಶಯಗಳಲ್ಲಿ 321 ಟಿಎಂಸಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 330 ಟಿಎಂಸಿ ನೀರಿತ್ತು ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಜಲಸಂಪನ್ಮೂಲ ಇಲಾಖೆಯ ಅಂಕಿಅಂಶದ ಪ್ರಕಾರ ರಾಜ್ಯದ ಪ್ರಮುಖ ಜಲವಿದ್ಯುತ್ ಜಲಾಶಯಗಳಾದ ಲಿಂಗನಮಕ್ಕಿ, ಸೂಪ ಮತ್ತು ವರಾಹಿಯಲ್ಲಿ ಪ್ರಸ್ತುತ ಸುಮಾರು 107 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಏಪ್ರಿಲ್ ಎರಡನೇ ವಾರದ ಅವಧಿಗೆ ಸುಮಾರು 124 ಟಿಎಂಸಿ ನೀರು ಲಭ್ಯವಿತ್ತು.
ಈ ಮೂರು ಜಲಾಶಯಗಳ ಗರಿಷ್ಠ ಸಾಮರ್ಥ್ಯ 327.63 ಟಿಎಂಸಿ ಇದೆ. ಈ ಪೈಕಿ ಪ್ರಸ್ತುತ ಶೇಖರಣೆ ಇರುವುದು ಕೇವಲ ಶೇ.33ರಷ್ಟು ಮಾತ್ರ. ಲಿಂಗನಮಕ್ಕಿ ಜಲಾಶಯಕ್ಕೆ ಸುಮಾರು 50 ಕ್ಯುಸೆಕ್ ಒಳಹರಿವಿದೆ. ಉಳಿದ ಜಲಾಶಯಗಳಿಗೆ ಯಾವುದೇ ಒಳಹರಿವು ಇಲ್ಲ.
ಕಾವೇರಿ ಕಣಿವೆಯಲ್ಲಿನ ಪ್ರಮುಖ ಜಲಾಶಯಗಳಾದ ಹಾರಂಗಿ, ಹೇಮಾವತಿ, ಕೆ.ಆರ್.ಎಸ್, ಕಬಿನಿಯಲ್ಲಿ ಪ್ರಸ್ತುತ ಒಟ್ಟು ಸುಮಾರು 57 ಟಿಎಂಸಿ ನೀರಿ ಶೇಖರಣೆ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಜಲಾಶಯಗಳಲ್ಲಿ ಒಟ್ಟು ಸುಮಾರು 58 ಟಿಎಂಸಿ ನೀರು ಸಂಗ್ರಹ ಇತ್ತು. ಈ ನಾಲ್ಕು ಜಲಾಶಯಗಳ ಗರಿಷ್ಠ ಸಾಮರ್ಥ್ಯ 114.57 ಟಿಎಂಸಿ ಇದೆ. ಇದರ ಪೈಕಿ ಸುಮಾರು ಶೇ.46 ಮಾತ್ರ ನೀರಿನ ಸಂಗ್ರಹವಿದೆ ಎಂದು ಇಲಾಖೆ ಅಂಕಿಅಂಶ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



