ರಾಜ್ಯ

ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆ: SSLC ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕಗಳನ್ನೇ ನೀಡಿ; ಹೈಕೋರ್ಟ್ ಆದೇಶ

ನ್ಯಾಯಮೂರ್ತಿ ಇ.ಎಸ್. ಇಂಡಿರೇಶ್ ಅವರು, ಏಪ್ರಿಲ್ 15ರ ಆದೇಶವನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸುವ ಮೂಲಕ ಈ ಆದೇಶ ನೀಡಿದ್ದಾರೆ.

ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆ: SSLC ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕಗಳನ್ನೇ ನೀಡಿ; ಹೈಕೋರ್ಟ್ ಆದೇಶ
ಹೈಕೋರ್ಟ್
Published On :

ಬೆಂಗಳೂರು: 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮೂರನೇ ಭಾಷಾ ಪರೀಕ್ಷೆಯ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಏಪ್ರಿಲ್ 15ರಂದು ನೀಡಿದ್ದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಹೈಕೋರ್ಟ್ ಇಂದು ಮಂಗಳವಾರ ನಿರಾಕರಿಸಿದೆ. ರಾಜ್ಯ ಸರ್ಕಾರ ಪ್ರಸ್ತಾಪಿಸಿದ್ದ ಗ್ರೇಡಿಂಗ್ ಪದ್ಧತಿಗೆ ಬದಲಾವಣೆ ಮಾಡುವ ಬೇಡಿಕೆಯನ್ನು ನ್ಯಾಯಾಲಯ ತಳ್ಳಿ ಹಾಕಿ ತನ್ನ ಆದೇಶದ ಯಥಾಸ್ಥಿತಿ ಕಾಯ್ದುಕೊಂಡಿದೆ.

ನ್ಯಾಯಮೂರ್ತಿ ಇ.ಎಸ್. ಇಂಡಿರೇಶ್ ಅವರು, ಏಪ್ರಿಲ್ 15ರ ಆದೇಶವನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸುವ ಮೂಲಕ ಈ ಆದೇಶ ನೀಡಿದ್ದಾರೆ.

ಪರೀಕ್ಷೆಗಳ ಪ್ರಕಟಣೆಗೂ ಮುನ್ನ ಜಾರಿಯಲ್ಲಿದ್ದ ನಿಯಮಾವಳಿಗಳ ಪ್ರಕಾರ ಮೌಲ್ಯಮಾಪನ ವ್ಯವಸ್ಥೆಯನ್ನು ಮುಂದುವರಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಅದರಿಂದ ವಿಮುಖರಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಪುನರುಚ್ಚರಿಸಿದೆ.

ಏಪ್ರಿಲ್ 15ರ ಆದೇಶದಲ್ಲಿ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಅವರು ಕೇಳಿದ್ದ ಕೆಲವು ತಿದ್ದುಪಡಿಗಳನ್ನು ಪರಿಗಣಿಸಿ, ಅಗತ್ಯ ನಿಯಮಗಳಿಗೆ ಕಾನೂನುಬದ್ಧ ತಿದ್ದುಪಡಿ ಮಾಡಿ ಗ್ರೇಡಿಂಗ್ ಪದ್ಧತಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾದರೆ, ಅದಕ್ಕೆ ನ್ಯಾಯಾಲಯ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರವೇ 2025–26ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ಪರೀಕ್ಷಾ ಪ್ರಕಟಣೆ ದಿನಾಂಕದ ವೇಳೆಗೆ ಜಾರಿಯಲ್ಲಿದ್ದ ನಿಯಮಗಳ ಪ್ರಕಾರ ನಡೆಸಲಾಗುತ್ತದೆ ಎಂದು ತಿಳಿಸಿದ್ದ ಹಿನ್ನೆಲೆಯಲ್ಲಿ, ಏಪ್ರಿಲ್ 15ರಂದು ಹೈಕೋರ್ಟ್ ಅದನ್ನೇ ಅನುಸರಿಸಲು ನಿರ್ದೇಶನ ನೀಡಿತ್ತು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಮೂರನೇ ಭಾಷಾ ಮೌಲ್ಯಮಾಪನದಲ್ಲಿ ಗ್ರೇಡಿಂಗ್ ಪದ್ಧತಿ ಪರಿಚಯಿಸುವ ಕುರಿತು ನೀಡಿದ ಹೇಳಿಕೆಯಿಂದ ಆತಂಕಗೊಂಡ ಮೂವರು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ಮೇಲೆ ವಿಚಾರಣೆ ನಡೆಸಿ, ನ್ಯಾಯಾಲಯ ಈ ಆದೇಶ ನೀಡಿತ್ತು.

ಚಿಕ್ಕಮಗಳೂರು ಜಿಲ್ಲೆಯ ಸಹನಾ ಆರ್ ನಾಯ್ಕ್ ಹಾಗೂ ಉಡುಪಿ ಜಿಲ್ಲೆಯ ಅನುಷಾ ಮತ್ತು ಸುಧೀಕ್ಷಾ ಎಂಬ ವಿದ್ಯಾರ್ಥಿನಿಯರು, 2025ರ ಅಕ್ಟೋಬರ್ 28ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಹೊರಡಿಸಿದ್ದ ಸರ್ಕ್ಯೂಲರ್ ಪ್ರಕಾರ ಮೌಲ್ಯಮಾಪನ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಹೈಕೋರ್ಟ್‌ಗೆ ಮನವಿ ಮಾಡಿದ್ದರು.

ವಿಚಾರಣೆ ವೇಳೆ ಹೆಚ್ಚುವರಿ ಸರ್ಕಾರಿ ವಕೀಲರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ದಿನಾಂಕಕ್ಕೆ ಜಾರಿಯಲ್ಲಿದ್ದ ನಿಯಮಾವಳಿಗಳ ಪ್ರಕಾರವೇ ಮೌಲ್ಯಮಾಪನ ನಡೆಸಲಾಗುವುದು ಎಂದು ವಿವರಣೆ ನೀಡಿದರು.

ಅದನ್ನು ದಾಖಲಿಸಿಕೊಂಡ ನ್ಯಾಯಾಲಯ, 2025–26ನೇ ಸಾಲಿನ ಪರೀಕ್ಷೆಯ ಪ್ರಕಟಣೆ ದಿನಾಂಕದ ವೇಳೆಗೆ ಜಾರಿಯಲ್ಲಿದ್ದ ನಿಯಮಗಳನ್ನು ಅನುಸರಿಸಿ ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.