ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ CM ಸಿದ್ದರಾಮಯ್ಯ, ಏನಿದರ ವಿಶೇಷತೆ Video
ಭದ್ರಾ ಹಿನ್ನೀರಿನ ಹಂದೂರು ಬಳಿ 38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 58 ಮೀಟರ್ ಉದ್ದದ ಸೇತುವೆ ಇದಾಗಿದೆ. ಹತ್ತಾರು ಹಳ್ಳಿ ಗ್ರಾಮಸ್ಥರು 6 ದಶಕಗಳಿಂದ ಸೇತುವೆಗೆ ಬೇಡಿಕೆ ಇಟ್ಟಿದ್ದರು.

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಹಂದೂರು-ಹೊನ್ನೆಕೂಡಿಗೆ ಪ್ರದೇಶದಲ್ಲಿ ಹೊಸ ಸೇತುವೆಯನ್ನು ನಿನ್ನೆ ಸೋಮವಾರ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಈ ಸೇತವೆಗೆ ಸಿದ್ದರಾಮಯ್ಯ ಸೇತುವೆ ಎಂದು ನಾಮಕರಣ ಮಾಡಲಾಗಿದೆ. ಭದ್ರಾ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಈ ಸೇತುವೆಯು ಹಂದೂರು ಮತ್ತು ಎನ್ ಆರ್ ಪುರವನ್ನು ನೇರವಾಗಿ ಸಂಪರ್ಕಿಸುತ್ತದೆ.
ಭದ್ರಾ ಹಿನ್ನೀರಿನ ಹಂದೂರು ಬಳಿ 38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 58 ಮೀಟರ್ ಉದ್ದದ ಸೇತುವೆ ಇದಾಗಿದೆ. ಹತ್ತಾರು ಹಳ್ಳಿ ಗ್ರಾಮಸ್ಥರು 6 ದಶಕಗಳಿಂದ ಸೇತುವೆಗೆ ಬೇಡಿಕೆ ಇಟ್ಟಿದ್ದರು. ಸೇತುವೆ ನಿರ್ಮಾಣದಿಂದ 10ಕ್ಕೂ ಹೆಚ್ಚು ಹಳ್ಳಿಗಳಿಗೆ ವರದಾನವಾಗಿದೆ. ಗ್ರಾಮಸ್ಥರು ಪಟ್ಟಣಕ್ಕೆ ಬರಲು ಮೊದಲು 30 ಕಿಮೀ ಸುತ್ತಿ ಬರಬೇಕಿತ್ತು. ಈ ದೂರವನ್ನು ಸೇತುವೆ ಕೇವಲ 3 ಕಿಮೀಗೆ ಇಳಿಸಿದೆ.
ಎನ್ ಆರ್ ಪುರ ತಾಲೂಕಿನಲ್ಲಿ ನಿರ್ಮಾಣವಾಗಿರುವ ಜಿಲ್ಲೆಯ ಅತ್ಯಂತ ಉದ್ದವಾದ ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ಸೇತುವೆ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆಯೇ ಮಹಿಳೆಯರು ಪೂರ್ಣ ಕುಂಭ ಸ್ವಾಗತ ಕೋರಿದರು. ಬಳಿಕ ದೇವರಿಗೆ ಪೂಜೆ ಸಲ್ಲಿಸಿ ಟೇಪ್ ಕತ್ತರಿಸುವ ಮೂಲಕ ಸೇತುವೆಯನ್ನು ಸಿಎಂ ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನರಸಿಂಹರಾಜಪುರದಲ್ಲಿ ಸೇತುವೆ ನಿರ್ಮಾಣ ಬಹುದಿನದ ಬೇಡಿಕೆಯಾಗಿತ್ತು. ಈಗ ನನ್ನ ಅಧಿಕಾರಾವಧಿಯಲ್ಲಿಯೇ ಶಂಕುಸ್ಥಾಪನೆ ಮತ್ತು ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ. ಬಿಜೆಪಿಯವರ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕೆ ಯಾವುದೇ ಕ್ರಮವಾಗಿರಲಿಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಸೇತುವೆ ಸ್ಥಳೀಯ ಸಾರಿಗೆ, ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ದೊಡ್ಡ ಅನುಕೂಲವನ್ನು ಮಾಡಿಕೊಡಲಿದೆ. ಸೇತುವೆ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ಥಳಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಅನಾವರಣಗೊಳಿಸಿದರು. ಶಾಸಕ ಬಾಲಕೃಷ್ಣ, ಕೆಎಸ್ ಆನಂದ್, ಎಂ ಶ್ರೀನಿವಾಸ್, ಟಿಡಿ ರಾಜೇಗೌಡ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸೇತುವೆಗೆ ಸಿದ್ದರಾಮಯ್ಯ ಹೆಸರು: 504 ಮೀಟರ್ ಉದ್ಧದ ಈ ಸೇತುವೆಗೆ 'ಸಿದ್ದರಾಮಯ್ಯ' ಎಂದು ಹೆಸರಿಡಲಾಗಿದೆ. ಸುಮಾರು 38 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೇತುಗೆ 2017 ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಅವರೇ ಈ ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಸೇತುವೆಯಿಂದ ಹತ್ತಾರು ಹಳ್ಳಿಗಳಿಗೆ ಜೀವ ಬಂದಂತಾಗಿದೆ.
ಸೇತುವೆಯಿಂದ ತಪ್ಪಿದ ಸುತ್ತಾಟ: ಮಳೆಗಾಲದ ಸಂದರ್ಭದಲ್ಲಿ ಈ ಭಾಗದ ಅಂದೂರು ಹೊನ್ನೇ ಕುಡಿಗೆ ಗ್ರಾಮದ ರೈತರು ಎನ್ಆರ್ ಪುರಕ್ಕೆ ಬರಲು ಸುಮಾರು 30 ರಿಂದ 35 ಕಿಲೋ ಮೀಟರ್ ಸುತ್ತಾಡಿಕೊಂಡು ಬರಬೇಕಿತ್ತು. ಈಗ ಸೇತುವೆ ಮೂಲಕ ಕೇವಲ 3 ಕಿಮೀ ಅಂತರದಲ್ಲಿ ಎನ್ ಆರ್ ಪುರಕ್ಕೆ ಆಗಮಿಸಬಹುದಾಗಿದೆ.
ಪ್ರವಾಸಿ ತಾಣವಾದ ಸೇತುವೆ: ನೂತನ ಸೇತುವೆ ಈಗ ಸಾವಿರಾರು ಜನರಿಗೆ ಉಪಯೋಗ ಆಗುವ ಜೊತೆಗೆ ಒಂದು ರೀತಿಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಭದ್ರಾ ನೀರಿನಲ್ಲಿ ನಿರ್ಮಿಸಿರುವ ಈ ಸೇತುವೆಯನ್ನು ನೋಡಲು ಜಿಲ್ಲೆಯ ವಿವಿಧ ಭಾಗದಿಂದ ಜನರು ಸಂಜೆ ವೇಳೆ ಆಗಮಿಸುತ್ತಿದ್ದಾರೆ. ಸೇತುವೆ ಮೇಲೆ ನಿಂತು ಅದ್ಭುತ ನೋಟಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



