LDF ಆಡಳಿತದಲ್ಲಿ ಕೇರಳ ರಾಜ್ಯ ದಿವಾಳಿತನದ ದಿಕ್ಕಿನಲ್ಲಿ ಸಾಗುತ್ತಿದೆ: ಸಿಎಂ ಸಿದ್ದರಾಮಯ್ಯ
ಕರ್ನಾಟಕದಲ್ಲಿ ನಾವು ಜಾರಿಗೆ ತಂದ ಐದು ಗ್ಯಾರಂಟಿಗಳಂತೆ ಯುಡಿಎಫ್ ಕೂಡ ಜನಪರ ಯೋಜನೆಗಳನ್ನು ಜಾರಿಗೆ ತರಲಿದೆ. ಕಾಂಗ್ರೆಸ್ ಸದಾ ಬಡವರ ಪರ ನಿಂತಿದೆ.

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಎಲ್‌ಡಿಎಫ್ ಆಡಳಿತದಲ್ಲಿ ಕೇರಳ ರಾಜ್ಯ ದಿವಾಳಿತನದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಭಾನುವಾರ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಪರ ಪ್ರಚಾರ ಕಾರ್ಯ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಕರ್ನಾಟಕ ಮತ್ತು ಕೇರಳದ ಆರ್ಥಿಕ ಸ್ಥಿತಿಯನ್ನು ಹೋಲಿಕೆ ಮಾಡಿ ವಾಗ್ದಾಳಿ ನಡೆಸಿದರು. ಕರ್ನಾಟಕದಲ್ಲಿ ನಿರುದ್ಯೋಗ ದರ 2.5% ಇದ್ದರೆ, ಕೇರಳದಲ್ಲಿ ಅದು 8%ಕ್ಕೆ ಏರಿದೆ ಎಂದು ಹೇಳಿದರು.
ಅದೇ ರೀತಿ ದರ ಏರಿಕೆ (ಇನ್‌ಫ್ಲೇಷನ್) ಕೇರಳದಲ್ಲಿ ಶೇ.8 ಮೀರಿದ್ದು, ಕರ್ನಾಟಕಕ್ಕಿಂತ ದ್ವಿಗುಣವಾಗಿದೆ ಎಂದು ಆರೋಪಿಸಿದರು.
ಕೇರಳದ ಸಾಲ-ಜಿಡಿಪಿ ಅನುಪಾತ 35% ಇದ್ದು, ಶಿಫಾರಸು ಮಾಡಲಾದ 25% ಮಿತಿಯನ್ನು ಮೀರಿದೆ. ಹಣಕಾಸು ಕೊರತೆ (ಫಿಸ್ಕಲ್ ಡೆಫಿಸಿಟ್) ಕೂಡ 3.5% ಇದ್ದು, ಇದು ನಿಗದಿತ ಮಿತಿಗಿಂತಲೂ ಹೆಚ್ಚಾಗಿದೆ ಎಂದು ಟೀಕಿಸಿದರು.
ಬಳಿಕ ಯುಡಿಎಫ್ ಪರ ಮತಯಾಚನೆ ಮಾಡಿದ ಸಿದ್ದರಾಮಯ್ಯ ಅವರು, “ಕರ್ನಾಟಕದಲ್ಲಿ ನಾವು ಜಾರಿಗೆ ತಂದ ಐದು ಗ್ಯಾರಂಟಿಗಳಂತೆ ಯುಡಿಎಫ್ ಕೂಡ ಜನಪರ ಯೋಜನೆಗಳನ್ನು ಜಾರಿಗೆ ತರಲಿದೆ. ಕಾಂಗ್ರೆಸ್ ಸದಾ ಬಡವರ ಪರ ನಿಂತಿದೆ” ಎಂದು ಹೇಳಿದರು.
ಕರ್ನಾಟಕದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ಸುಮಾರು 52,000 ಕೋಟಿ ರೂಪಾಯಿ ವೆಚ್ಚವಾಗುತ್ತಿದ್ದರೂ, ಅದು ರಾಜ್ಯದ ಆರ್ಥಿಕತೆಯನ್ನು ಬಲಪಡಿಸಿದೆ ಎಂದು ಪ್ರತಿಪಾದಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧವೂ ಅವರು ಕಿಡಿಕಾರಿದ್ದು, “ಬಿಜೆಪಿ ಸಂವಿಧಾನ ವಿರೋಧಿ, ಬಡವರ ವಿರೋಧಿ, ದಲಿತರು ಮತ್ತು ಅಲ್ಪಸಂಖ್ಯಾತರ ವಿರುದ್ಧ ಕಾರ್ಯನಿರ್ವಹಿಸುವ ಪಕ್ಷ” ಎಂದು ಆರೋಪಿಸಿದರು. ಶ್ರೀಮಂತರು ಮತ್ತು ಕಾರ್ಪೊರೇಟ್ ವಲಯದ ಪರ ಬಿಜೆಪಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮಂಜೇಶ್ವರ ಕುರಿತು ಮಾತನಾಡಿ, “ಈ ಪ್ರದೇಶ ಕರ್ನಾಟಕದ ಭಾಗವಾಗಿರಬೇಕಾಗಿತ್ತು. ಇಲ್ಲಿ ಪ್ರತಿಯೊಂದು ಮಾತುಕತೆಯಲ್ಲೂ ಕನ್ನಡದ ಧ್ವನಿ ಕೇಳಿಸುತ್ತದೆ. ಕೇರಳದ ಭಾಗವಾಗಿದ್ದರೂ, ಇಲ್ಲಿ ಕನ್ನಡ ಭಾಷೆಯನ್ನು ಉಳಿಸಿಕೊಂಡು ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಹೇಳಿದರು.
ಮಂಜೇಶ್ವರವು ಗೋವಿಂದ ಪೈರಂತಹ ಅನೇಕ ಸಾಹಿತ್ಯ ದಿಗ್ಗಜರು ಈ ನೆಲದಿಂದ ಹೊರಹೊಮ್ಮಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಕೇರಳ ರಾಜ್ಯದಲ್ಲಿಯೂ ಕನ್ನಡದ ಉಳಿವಿಗೆ ಕಾರಣರಾಗಿರುವ ಇಲ್ಲಿನ ಜನರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಇದೇ ವೇಳೆ ಕಾಸರಗೋಡು ಕ್ಷೇತ್ರದಲ್ಲಿಯೂ ಪ್ರಚಾರ ನಡೆಸಿದ ಸಿದ್ದರಾಮಯ್ಯ ಅವರು, ಯುಡಿಎಫ್ ಅಭ್ಯರ್ಥಿ ಕಲ್ಲತ್ರ ಮಹಿನ್ ಪರ ಮತಯಾಚಿಸಿದರು. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದರೆ ಜನಪರ ಆಡಳಿತ ನೀಡಲಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



