Pavagada: ವರದಕ್ಷಿಣೆ ಕಿರುಕುಳ; ಇಬ್ಬರು ಪುಟ್ಟ ಮಕ್ಕಳ ಕೊಂದು ತಾಯಿ ಆತ್ಮಹತ್ಯೆ!
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಡಪನಕೆರೆಯಲ್ಲಿ ಈ ದುರಂತ ಘಟನೆ ನಡೆದಿದ್ದು, ಇಬ್ಬರು ಮುದ್ದು ಮಕ್ಕಳನ್ನು ಕೊಂದ ತಾಯಿ ತಾನೂ ನೇಣಿಗೆ ಶರಣಾಗಿದ್ದಾರೆ.

ತುಮಕೂರು: ರಾಜ್ಯದಲ್ಲಿ ಮತ್ತೊಂದು ಭೀಕರ ದುರಂತ ಸಂಭವಿಸಿದ್ದು, ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಪತ್ನಿ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಡಪನಕೆರೆಯಲ್ಲಿ ಈ ದುರಂತ ಘಟನೆ ನಡೆದಿದ್ದು, ಇಬ್ಬರು ಮುದ್ದು ಮಕ್ಕಳನ್ನು ಕೊಂದ ತಾಯಿ ತಾನೂ ನೇಣಿಗೆ ಶರಣಾಗಿದ್ದಾರೆ.
23 ವರ್ಷದ ಸರಿತಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಆತ್ಮಹತ್ಯೆಗೂ (Suicide) ಮುನ್ನ 4 ವರ್ಷದ ಮಗ ಕೌಶಿಕ್ ಹಾಗೂ 2 ವರ್ಷದ ಮಗು ಯುಕ್ತಿಯನ್ನು ಕೊಲೆ ಮಾಡಿದ್ದಾರೆ. ಬಳಿಕ ತಾವೂ ಸಾವನ್ನಪ್ಪಿದ್ದಾರೆ.
ಈ ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇಂದು ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸರಿತಾ ತನ್ನ ಇಬ್ಬರು ಮಕ್ಕಳ ಹತ್ಯೆಗೈದಿದ್ದು, ಬಳಿಕ ತಾನು ನೇಣಿಗೆ ಶರಣಾಗಿದ್ದಾರೆ.
ಏನಿದು ಘಟನೆ?
ಮೂಲತಃ ಕಡಪನಕೆರೆಯ ಸರಿತಾ ತನ್ನದೇ ಊರಿನ ಸಂತೋಷ್ ಜೊತೆ ವಿವಾಹವಾಗಿದ್ದರು. ಕಳೆದ 6 ವರ್ಷಗಳ ಹಿಂದೆ ಸಂತೋಷ್ ಜೊತೆ ವಿವಾಹವಾಗಿತ್ತು. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಸಂತೋಷ್ ಈ ಘಟನೆ ನಡೆದ ವೇಳೆ ಮನೆಯಲ್ಲಿರಲಿಲ್ಲ.
ಮದುವೆಯಾದಾಗಿನಿಂದ ಪತಿ ಹಾಗೂ ಆತನ ಕುಟುಂಬದಿಂದ ಸರಿತಾ ಅವರಿಗೆ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ವರದಕ್ಷಿಣೆ ಕಿರುಕುಳ ನೀಡಿದ್ದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ತಾಯಿ ಸರಿತಾ ನೊಂದು ಮಕ್ಕಳ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



