ಬೆಂಗಳೂರು: ಡಿ.ಕೆ ಶಿವಕುಮಾರ್ ನಿವಾಸದ ಬಳಿ ನಿಲ್ಲಿಸಿದ್ದ ನಿಗೂಢ ಕಾರಿನ ಮೂಲ ಪತ್ತೆ!
ಶಿವಕುಮಾರ್ ಅವರ ನಿವಾಸದ ಸಮೀಪದ 18ನೇ ಕ್ರಾಸ್ನಲ್ಲಿ ಸೆ.7ರಂದು ಕೆಎ-51 ಎಂಡಬ್ಲ್ಯು 6814 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಫಾರ್ಚೂನರ್ ಕಾರು ನಿಂತಿತ್ತು. ಅದರ ಮೂಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿವಾಸದ ಬಳಿ ನಕಲಿ ನಂಬರ್ಪ್ಲೇಟ್ ಅಳವಡಿಸಿದ್ದ ಫಾರ್ಚೂನರ್ ಕಾರಿನ ಪ್ರಕರಣ ತನಿಖೆ ಚುರುಕುಗೊಂಡಿದೆ.
ಅಚ್ಚರಿಯೆಂದರೆ ಫಾರ್ಚೂನರ್ ಕಾರು ಜಪ್ತಿ ಮಾಡಿ ಐದು ದಿನ ಕಳೆದರೂ ಯಾರೊಬ್ಬರೂ ಕಾರು ತಮ್ಮದು ಎಂದು ಪೊಲೀಸರ ಮುಂದೆ ಬಂದಿಲ್ಲ. ಕಾರು ಪುನಃ ತಮ್ಮ ವಶಕ್ಕೆ ಪಡೆದುಕೊಳ್ಳಲು ಯತ್ನಿಸಿಲ್ಲ. ಈ ನಿಟ್ಟಿನಲ್ಲಿ ಕಾರಿನ ಅಸಲಿ ಮಾಲೀಕರು ಯಾರು? ನಕಲಿ ನಂಬರ್ಪ್ಲೇಟ್ ಅಳವಡಿಸಿ ಬಳಕೆ ಮಾಡುತ್ತಿದ್ದದ್ದು ಏಕೆ ಎಂಬುದರ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಕಾರು, ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್ ಅವರ ಹೆಸರಿನಲ್ಲಿ ಇರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಆ ಕಾರನ್ನು ಕಾಂಗ್ರೆಸ್ ಕಾರ್ಯಕರ್ತ ಕೃಷ್ಣಮೂರ್ತಿ ಅವರು ಬಳಸುತ್ತಿರುವುದೂ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಶಿವಕುಮಾರ್ ಅವರ ನಿವಾಸದ ಸಮೀಪದ 18ನೇ ಕ್ರಾಸ್ನಲ್ಲಿ ಸೆ.7ರಂದು ಕೆಎ-51 ಎಂಡಬ್ಲ್ಯು 6814 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಫಾರ್ಚೂನರ್ ಕಾರು ನಿಂತಿತ್ತು. ಅದರ ಮೂಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಅರ್ಧ ದಿನ ಕಳೆದರೂ ಕಾರು ಸ್ಥಳದಲ್ಲೇ ನಿಂತಿದ್ದರಿಂದ ಬೇರೆ ವಾಹನಗಳ ಸಂಚಾರಕ್ಕೆ ಅಡಚಣೆ ಆಗಬಹುದು ಎಂದು ಸಂಚಾರ ಪೊಲೀಸರು ಅದನ್ನು ತೆರವುಗೊಳಿಸಲು ಮುಂದಾಗಿದ್ದರು.
ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಪರಿಶೀಲಿಸಿದಾಗ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೆಲಸಿರುವ ದೀಪಕ್ ಅವರ ಕಾರು ಎಂದು ಕಂಡುಬಂದಿತ್ತು. ಅವರಿಗೆ ಕರೆ ಮಾಡಿ, ಕಾರು ತೆರವುಗೊಳಿಸುವಂತೆ ಪೊಲೀಸರು ತಿಳಿಸಿದ್ದರು. ಆದರೆ, ದೀಪಕ್ ಅವರು ಕಾರು ತಮ್ಮ ಮನೆ ಮುಂದೆಯೇ ನಿಲ್ಲಿಸಲಾಗಿದೆ ಎಂದಿದ್ದರು.
ಅಚ್ಚರಿಗೊಂಡ ಪೊಲೀಸರು, ತನಿಖೆ ಆರಂಭಿಸಿದ್ದರು. ಈ ನಂಬರ್ ಪ್ಲೇಟ್ ಹಿಂದೆ ಮತ್ತೊಂದು ನಂಬರ್ ಪ್ಲೇಟ್ ಇರುವುದು ಪತ್ತೆಯಾಗಿತ್ತು. ಕೆಎ–42 ಪಿ 6606 ಸಂಖ್ಯೆಯ ನಂಬರ್ ಪ್ಲೇಟ್ ಪತ್ತೆಯಾಗಿತ್ತು.
ನಂತರ, ಕಾರನ್ನು ಠಾಣೆಗೆ ತೆಗೆದುಕೊಂಡು ಹೋಗಿ ತಪಾಸಣೆ ನಡೆಸಿದಾಗ ಮಾಗಡಿಯ ಮಾಜಿ ಶಾಸಕ ಎ.ಮಂಜುನಾಥ್ ಅವರ ಹೆಸರಿನಲ್ಲಿ ರಾಮನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿ ಆಗಿರುವುದು ಕಂಡುಬಂದಿತ್ತು. ಆ ಬಳಿಕ ಮಂಜುನಾಥ್ ಅವರಿಗೆ ನೋಟಿಸ್ ಕೊಟ್ಟು ಮಾಹಿತಿ ಕೇಳಲಾಗಿತ್ತು.
ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಕೃಷ್ಣಮೂರ್ತಿ ಎಂಬ ಕಾರ್ಯಕರ್ತನಿಗೆ ಈ ಕಾರನ್ನು ಕೊಡಲಾಗಿತ್ತು. ಈಗಲೂ ಅವರೇ ಕಾರು ಬಳಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



