ರಾಜ್ಯ

'ಕಾಂಗ್ರೆಸ್ಸಿಗರು ಮಾತನಾಡಿದರೂ ಕ್ರಮ.. ಕಾನೂನು ಎಲ್ಲರಿಗೂ ಒಂದೇ': Lakshmi Hebbalkar

ಕೋಮು ಸೌಹಾರ್ದತೆ ಕೆಡಿಸುವುದು ಬಿಜೆಪಿಯು ಹಿಂದಿನಿಂದಲೂ ನಡೆಸಿ ಬಂದ ಅಜೆಂಡಾ. ಯಾರು ಕೂಡ ಕಾನೂನು ಕೈಯಲ್ಲಿ ತೆಗೆದುಕೊಳ್ಳಬಾರದು.

'ಕಾಂಗ್ರೆಸ್ಸಿಗರು ಮಾತನಾಡಿದರೂ ಕ್ರಮ.. ಕಾನೂನು ಎಲ್ಲರಿಗೂ ಒಂದೇ': Lakshmi Hebbalkar
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
Published On :

ಉಡುಪಿ: ದ್ವೇಷಪೂರಿತ ಭಾಷಣ ಮಾಡಿದರೆ ಕ್ರಮ ಕೈಗೊಳ್ಳಲು ಅಸೆಂಬ್ಲಿಯಲ್ಲಿ ಶಾಸನ ತೆಗೆದುಕೊಂಡು ಬರಲಾಗಿದ್ದು, ಬಿಜೆಪಿ- ಕಾಂಗ್ರೆಸ್ ಯಾರೇ ಆಗಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಶುಕ್ರವಾರ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಬೈಲೂರಿನಲ್ಲಿ ನೀರೆ ಕಣಜಾರು ಗ್ರಾಮ ಪಂಚಾಯತ್‌ನ ನೂತನ ಆಡಳಿತ ಕಟ್ಟಡ ಗ್ರಾಮ ಸೌಧದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, 'ರಾಜ್ಯ ಸರ್ಕಾರವನ್ನು ಹಿಂದು ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಸರ್ಕಾರದ ವಿರುದ್ಧ ಆರೋಪ ಮಾಡಲು ವಿಪಕ್ಷಗಳಿಗೆ ಬೇರೆ ವಿಚಾರ ಇಲ್ಲ.

ಸರ್ಕಾರ ಬೀಳುತ್ತೆ ಎಂದು ಕಾದು ಕುಳಿತಿದ್ದಾರೆ. ಗ್ಯಾರಂಟಿ ಜಾರಿ ಆಗಲ್ಲ ಅಂದರು, ಗ್ಯಾರಂಟಿ ಯೋಜನೆ ನಾಲ್ಕೇ ತಿಂಗಳು ನಡೆಯುತ್ತೆ ಅಂದರು. ಆಮೇಲೆ ಆಪರೇಷನ್ ಕಮಲ ಅಂದ್ರು ಆದರೆ ಯಾವುದೂ ಕೈಗೂಡಲಿಲ್ಲ ಎಂದು ಕಿಡಿಕಾರಿದರು.

ಅಂತೆಯೇ ರಾಜ್ಯದ ಜನತೆಗೆ ನಾವೆಲ್ಲ ಅನುಕೂಲತೆ ಮಾಡಿದ್ದೇವೆ. ಕೋಮು ಸೌಹಾರ್ದತೆ ಕೆಡಿಸುವುದು ಬಿಜೆಪಿಯು ಹಿಂದಿನಿಂದಲೂ ನಡೆಸಿ ಬಂದ ಅಜೆಂಡಾ. ಯಾರು ಕೂಡ ಕಾನೂನು ಕೈಯಲ್ಲಿ ತೆಗೆದುಕೊಳ್ಳಬಾರದು. ಯಾವುದೇ ಸಮಾಜ ಕಾನೂನು ಕೈಗೆ ತೆಗೆದುಕೊಂಡರೆ ಖಂಡಿಸುತ್ತೇವೆ ಎಂದರು.

ಇದೇ ವೇಳೆ ಬಿಜೆಪಿ ನಾಯಕ ಸಿಟಿ ರವಿ ವಿರುದ್ಧ ಎಫ್ಐಆರ್ ದಾಖಲಿಸಿದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, 'ದ್ವೇಷಪೂರಿತ ಭಾಷಣ ಮಾಡಿದರೆ ಕ್ರಮ ಕೈಗೊಳ್ಳಲು ಅಸೆಂಬ್ಲಿಯಲ್ಲಿ ಶಾಸನ ತೆಗೆದುಕೊಂಡು ಬಂದಿದ್ದೇವೆ. ಬಿಜೆಪಿ- ಕಾಂಗ್ರೆಸ್ ಯಾರೇ ಆಗಲಿ ಕ್ರಮ ಕೈಗೊಳ್ಳಲಾಗುತ್ತದೆ.

ನಾಳೆ ಕಾಂಗ್ರೆಸ್ಸಿಗರು ಮಾತನಾಡಿದರೂ ಕ್ರಮ ಆಗುತ್ತದೆ. ಕಾನೂನು ಎಲ್ಲರಿಗೂ ಒಂದೇ ಅಲ್ವಾ!? ಶಾಂತಿಯನ್ನು ಕದಡುವ ಕೆಲಸ ಮಾಡಿದರೆ ಖಂಡಿತ ಎಫ್ ಐ ಆರ್ ಆಗುತ್ತೆ. ನಾಳೆ ನಾನು ಆ ಕೆಲಸ ಮಾಡಿದರೂ ಎಫ್ ಐ ಆರ್ ಆಗುತ್ತೆ ಎಂದರು.

ಭಾನು ಮುಷ್ತಾಕ್ ದಸರಾ ಉದ್ಘಾಟನೆ ವಿವಾದದ ಕುರಿತು ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಈ ಬಗ್ಗೆ ಮುಖ್ಯಮಂತ್ರಿಗಳು ಸಾಕಷ್ಟು ಬಾರಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರ ನಂತರ ನಾನು ಮಾತನಾಡುವುದು ಸರಿಯಲ್ಲ ಎಂದರು.

ಧರ್ಮಸ್ಥಳ ಎಸ್ಐಟಿ ತನಿಖೆ ನಿಧಾನಗೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 'ನಾನು ಈ ಮೊದಲೇ ಒಂದು ಮಾತನ್ನು ಹೇಳಿದ್ದೇನೆ. ಇವತ್ತಿಗೂ ನನ್ನದು ಅದೇ ಅಭಿಪ್ರಾಯ. ಧರ್ಮಸ್ಥಳ ನಮ್ಮೆಲ್ಲರ ಆರಾಧ್ಯ ಸ್ಥಳ. ಬಹಳಷ್ಟು ಭಕ್ತಿಯಿಂದ ನಡೆದುಕೊಳ್ಳುವ ಸ್ಥಳ. ಏನೆಲ್ಲಾ ಷಡ್ಯಂತ್ರ ಆಗಿದೆ ಅವೆಲ್ಲಾ ಹೊರ ಬರುತ್ತೆ. ಎಸ್ಐಟಿ ತನ್ನ ಕೆಲಸ ಏನು ಮಾಡುತ್ತಿದೆ ಎಂದು ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ. ಸ್ವಲ್ಪ ದಿನ ಕಾಯಿರಿ ಎಲ್ಲಾ ಸತ್ಯಾಸತ್ಯತೆ ಹೊರಬರುತ್ತದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.