ರಾಜ್ಯ

ಜವಳಿ ನೀತಿಗಾಗಿ ತಮಿಳುನಾಡು, ಮಧ್ಯಪ್ರದೇಶ ಮಾದರಿ ಅಧ್ಯಯನ: ಸಚಿವ ಶಿವಾನಂದ ಪಾಟೀಲ್

ನೆರೆ ರಾಜ್ಯಗಳ ಜವಳಿ ಉದ್ಯಮಿಗಳನ್ನು ಆಕರ್ಷಿಸಲು ಅಧ್ಯಯನ ವರದಿ ಅಗತ್ಯವಿದೆ. ಇತರೆ ರಾಜ್ಯಗಳು ಉದ್ಯಮಿಗಳಿಗೆ ಯಾವ ಸವಲತ್ತುಗಳನ್ನು ನೀಡುತ್ತಿವೆ ಎಂಬ ಮಾಹಿತಿಯ ಆಧಾರದಲ್ಲಿ ರಾಜ್ಯದ ನೀತಿಗಳನ್ನು ಬದಲಾವಣೆ ಮಾಡಲಾಗುವುದು ಎಂದರು.

ಜವಳಿ ನೀತಿಗಾಗಿ ತಮಿಳುನಾಡು, ಮಧ್ಯಪ್ರದೇಶ ಮಾದರಿ ಅಧ್ಯಯನ: ಸಚಿವ ಶಿವಾನಂದ ಪಾಟೀಲ್
ಸಚಿವ ಶಿವಾನಂದ ಪಾಟೀಲ್
Published On :

ಬೆಂಗಳೂರು: ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಜವಳಿ ನೀತಿಯನ್ನು ಅಧ್ಯಯನ ಮಾಡಿ, ಸಮಗ್ರ ವರದಿ ಸಿದ್ಧಪಡಿಸಲು ಜವಳಿ ಸಚಿವ ಶಿವಾನಂದ ಪಾಟೀಲ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕರ್ನಾಟಕ ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ ಅನುಷ್ಠಾನ ಕುರಿತ ಉನ್ನತ ಮಟ್ಟದ ಸಬಲೀಕರಣ ಸಮಿತಿ ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದ ಅವರು, ನೆರೆ ರಾಜ್ಯಗಳ ಜವಳಿ ಉದ್ಯಮಿಗಳನ್ನು ಆಕರ್ಷಿಸಲು ಅಧ್ಯಯನ ವರದಿ ಅಗತ್ಯವಿದೆ. ಇತರೆ ರಾಜ್ಯಗಳು ಉದ್ಯಮಿಗಳಿಗೆ ಯಾವ ಸವಲತ್ತುಗಳನ್ನು ನೀಡುತ್ತಿವೆ ಎಂಬ ಮಾಹಿತಿಯ ಆಧಾರದಲ್ಲಿ ರಾಜ್ಯದ ನೀತಿಗಳನ್ನು ಬದಲಾವಣೆ ಮಾಡಲಾಗುವುದು ಎಂದರು.

ಬಾಂಗ್ಲಾದೇಶದ ಪ್ರತಿಕೂಲ ಪರಿಸ್ಥಿತಿ ಪರಿಣಾಮ ಅಲ್ಲಿನ ಜವಳಿ ಉದ್ಯಮ ಬೇರೆಡೆಗೆ ಸ್ಥಳಾಂತರವಾಗುತ್ತಿದೆ. ಅಲ್ಲಿನ ಉದ್ಯಮಿಗಳನ್ನು ಕರ್ನಾಟಕಕ್ಕೆ ಸೆಳೆಯಲು ಯೋಜನೆ ರೂಪಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಉದ್ಯಮ ಸುಸ್ಥಿತಿಯಲ್ಲಿದೆ. ಬಹುತೇಕ ಉದ್ಯಮಿಗಳು ತಮಿಳುನಾಡಿನಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಅವರನ್ನು ಕರ್ನಾಟಕ ರಾಜ್ಯದತ್ತ ಸೆಳೆಯಲು ಏನು ಮಾಡಬೇಕು ಎನ್ನುವ ಕುರಿತು ಅಧ್ಯಯನ ಮಾಡಬೇಕಿದೆ.

ಮಹಾರಾಷ್ಟ್ರ ಸರ್ಕಾರ ವಿದ್ಯುತ್‌ ಬಿಲ್‌ನಲ್ಲೇ ಸಹಾಯಧನ ನೀಡುತ್ತಿದೆ. ನಮ್ಮಲ್ಲಿಯೂ ಈ ಪದ್ಧತಿ ಅನುಸರಿಸಿದರೆ ಮಹಾರಾಷ್ಟ್ರದ ಜವಳಿ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಸಿದ್ಧರಿದ್ದಾರೆ ಎಂದು ಮಾಹಿತಿ ನೀಡಿದರು.

ಉದ್ಯಮಿಗಳಿಂದ ಬರುವ ಪ್ರಸ್ತಾವಗಳಿಗೆ ಮಂಜೂರಾತಿ ನೀಡಲು ವಿಳಂಬ ಮಾಡಬಾರದು. ರಾಜ್ಯ ಸರ್ಕಾರ ಸವಲತ್ತುಗಳನ್ನು ನೀಡಲು ವಿಳಂಬ ಮಾಡಿದರೆ ಉದ್ಯಮಿಗಳು ನೆರೆ ರಾಜ್ಯಗಳತ್ತ ಗಮನ ಹರಿಸುತ್ತಾರೆ. ನೆರೆ ರಾಜ್ಯಗಳ ಉದ್ಯಮಿಗಳನ್ನು ಕರ್ನಾಟಕ್ಕೆ ಬರುವಂತೆ ಅಧಿಕಾರಿಗಳು ಆಸಕ್ತಿ ವಹಿಸಲು ಸೂಚಿಸಲಾಗಿದೆ ಎಂದರು.

"ವರದಿ ಸಿದ್ಧವಾದ ನಂತರ ನಾವು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮುಂಬರುವ ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನು ಕೋರುತ್ತೇವೆ" ಎಂದು ಅವರು ಹೇಳಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ರಿಯಾಯಿತಿಗಳನ್ನು ಪಡೆಯುವಲ್ಲಿ ಕಬ್ಬನ್‌ಪೇಟೆ ಮತ್ತು ಕಾಟನ್‌ಪೇಟೆಯ ನೇಕಾರರ ಸಮಸ್ಯೆಯನ್ನು ಸರ್ಕಾರ ಪರಿಹರಿಸಲಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.