ಬೆಂಗಳೂರು ಮೂಲಸೌಕರ್ಯ ವಿಚಾರ: ವಾಕ್ಸಮರ ಮರೆತು ಕುಟುಂಬ ಕಾರ್ಯಕ್ರಮಕ್ಕೆ CM-DCMಗೆ ಕಿರಣ್ ಶಾ ಆಹ್ವಾನ
ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ, ಮೂಲಸೌಕರ್ಯ ವಿಚಾರಕ್ಕೆ ರಾಜ್ಯ ಸರ್ಕಾರವನ್ನು ಟೀಕಿಸಿದ್ದ ಬಯೋಕಾನ್ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಬೆಂಗಳೂರು: ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ, ಮೂಲಸೌಕರ್ಯ ವಿಚಾರಕ್ಕೆ ರಾಜ್ಯ ಸರ್ಕಾರವನ್ನು ಟೀಕಿಸಿದ್ದ ಬಯೋಕಾನ್ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.
ಕಿರಣ್ ಶಾ ಹಾಗೂ ಉದ್ಯಮಿ ಮೋಹನ್ ದಾಸ್ ಪೈ ಸತತವಾಗಿ ಬೆಂಗಳೂರಿನ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರವನ್ನು ಟೀಕಿಸುತ್ತಿದ್ದು, ಇದಕ್ಕೆ ಸರ್ಕಾರದ ಪ್ರತಿನಿಧಿಗಳೂ ತಿರುಗೇಟು ನೀಡಿದ್ದರು.
ಈ ಬೆನ್ನಲ್ಲೇ ಕಿರಣ್ ಶಾ ಅವರು ಸಿಎಂ ಹಾಗೂ ಡಿಎಂರನ್ನು ಭೇಟಿ ಮಾಡಿದ್ದು, ಸೋದರಳಿಯನ ಮದುವೆಗೆ ಆಹ್ವಾನಿಸಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಮೊದಲಿಗೆ ಮುಖ್ಯಮಂತ್ರಿಗಳನ್ನು ಅವರ ಅಧಿಕೃತ ನಿವಾಸದಲ್ಲಿ ಕಿರಣ್ ಶಾ ಅವರು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ವಿಧಾನಪರಿತ್ತಿನ ಅಧ್ಯಕ್ಷ ಬಸವರಾಜ್ ಎಸ್ ಹೊರಟ್ಟಿ ಕೂಡ ಹಾಜರಿದ್ದರು.
ಸಿದ್ದರಾಮಯ್ಯ ಅವರೊಂದಿಗಿನ ಸಭೆ ತ್ವರಿತವಾಗಿದ್ದರೂ, ಸದಾಶಿವನಗರದ ನಿವಾಸದಲ್ಲಿ ಡಿಕೆ.ಶಿವಕುಮಾರ್ ಅವರನ್ನು ಬೇಟಿ ಮಾಡಿದ ಅವರು, ಹೆಚ್ಚಿನ ಸಮಯ ಕಳೆದರು ಎಂದು ತಿಳಿದುಬಂದಿದೆ.
ಸಭೆಯ ನಂತರ ಡಿಕೆ.ಶಿವಕುಮಾರ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಇಂದು ನನ್ನ ನಿವಾಸದಲ್ಲಿ ಉದ್ಯಮಿ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಶಾ ಅವರನ್ನು ಭೇಟಿಯಾಗಲು ಸಂತೋಷವಾಯಿತು. ಬೆಂಗಳೂರಿನ ಬೆಳವಣಿಗೆ, ನಾವೀನ್ಯತೆ ಮತ್ತು ಕರ್ನಾಟಕದ ಬೆಳವಣಿಗೆಯ ಮುಂದಿನ ಹಾದಿಯ ಕುರಿತು ನಾವು ಉತ್ತಮ ಚರ್ಚೆ ನಡೆಸಿದ್ದೆವು ಎಂದು ಹೇಳಿದ್ದಾರೆ.
ಡಿಕೆ.ಶಿವಕುಮಾರ್ ಅವರ ಭೇಟಿ ಬಳಿಕ ಕಿರಣ್ ಶಾ ಅವರು, ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದರು.
ಭೇಟಿ ಕುರಿತು ಮಾತನಾಡಿರುವ ಎಂಬಿ.ಪಾಟೀಲ್ ಅವರು, ನಗರದಲ್ಲಿ ಹೆಚ್ಚುತ್ತಿರುವ ಮೂಲಸೌಕರ್ಯ ಅಗತ್ಯಗಳನ್ನು ಪರಿಹರಿಸುವುದು, ಅದರ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು. ತಂತ್ರಜ್ಞಾನ ಮತ್ತು ಸಂಶೋಧನೆಯ ಮೂಲಕ ಕರ್ನಾಟಕದ ಬೆಳವಣಿಗೆಯನ್ನು ಮುನ್ನಡೆಸುವ ಕುರಿತು ಅವರು ಸಂಕ್ಷಿಪ್ತವಾಗಿ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಹೇಳಿದ್ದಾರೆ.
ನಂತರ ಕಿರಣ್ ಶಾ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಇತರ ನಾಯಕರನ್ನೂ ಕೂಡ ಭೇಟಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



