News headlines 30-11-2025 | ಮೆಟ್ರೋ ನಿಲ್ದಾಣ ಬಳಿ ವಿದ್ಯಾರ್ಥಿಗೆ ಚೂರಿ ಇರಿತ; ಐಫೋನ್ ದರೋಡೆ; ನಾನು ಬೆನ್ನಿಗೆ ಇರಿಯುವುದಿಲ್ಲ- DK Shivakumar; ಹಿರಿಯ ನಟ ಉಮೇಶ್ ನಿಧನ

1. ಅರೆಭಾಷೆ ಗೌಡರಿಗೆ ಮಡಿಕೇರಿಯಲ್ಲಿ ಜಮೀನು ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
ಕನ್ನಡ ಭಾಷೆ ರಾಜ್ಯದ ಅಸ್ಮಿತೆಯ ತಳಹದಿಯಾಗಿದ್ದರೆ, ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 2024ನೇ ಸಾಲಿನ ಅರೆ ಭಾಷೆ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಅರೆಭಾಷೆ ಗೌಡರು ಹೆಚ್ಚಾಗಿ ವಾಸಿಸುತ್ತಿದ್ದು, ಇವರ ಜನಸಂಖ್ಯೆ ಮೂರು ಲಕ್ಷಕ್ಕೂ ಹೆಚ್ಚಿದೆ ಎಂದರು.
1882ನೇ ಗೆಜೆಟ್ ಬಂದಾಗ ಇವರು ಸಕಲೇಶಪುರದಲ್ಲಿದ್ದು, ಬರಗಾಲದ ಸಂದರ್ಭದಲ್ಲಿ ಹೇಮಾವತಿ ನದಿ ಬತ್ತಿದಾಗ ಪಕ್ಕದ ಜಿಲ್ಲೆ ಸುಳ್ಯಕ್ಕೆ ಬಂದು ನೆಲೆಯೂರುತ್ತಾರೆ. ತುಳು, ಕೊಂಕಣಿ ಜೊತೆಗೆ ಕನ್ನಡ ಸೇರಿ ಅರೆಭಾಷೆಯಾಗಿದೆ. ಕರ್ನಾಟಕದಲ್ಲಿ ಸುಮಾರು 230 ಸಣ್ಣ ಭಾಷೆಗಳಿವೆ. ಇವೆಲ್ಲವೂ ಕನ್ನಡದಿಂದಲೇ ಹುಟ್ಟಿದ್ದು, ಅರೆಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಅಕಾಡೆಮಿ ಮಾಡಲಿ ಎಂದು ಆಶಿಸುತ್ತೇತ್ತೇನೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅರೆಭಾಷೆ ಗೌಡರಿಗೆ ಮಡಿಕೇರಿಯಲ್ಲಿ ಜಮೀನು ಕೊಡಬೇಕೆನ್ನುವ ಪ್ರಸ್ತಾವನೆ ಇದ್ದು, ಇದನ್ನು ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು
2. ನನ್ನ ರಾಜಕೀಯದ ಬ್ರ್ಯಾಂಡ್ ನೇರ; ನಾನು ಬೆನ್ನಿಗೆ ಇರಿಯುವುದಿಲ್ಲ- DK Shivakumar
ಕುರ್ಚಿ ಕದನದ ನಡೆವೆ, ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಾವು ಎಂದಿಗೂ ಬಣ ರಾಜಕೀಯದಲ್ಲಿ ತೊಡಗಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. "ನೀವು ಗಮನಿಸಿದಂತೆ, ನಾನು ದೆಹಲಿಗೆ ಒಬ್ಬಂಟಿಯಾಗಿ ಹೋಗುತ್ತೇನೆ. ನಾನು 8-10 ಶಾಸಕರನ್ನು ನನ್ನೊಂದಿಗೆ ಕರೆದುಕೊಂಡು ಹೋಗಬಹುದು, ಆದರೆ ನಾನು ಹಾಗೆ ಮಾಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ, ನಾನು ಎಲ್ಲರನ್ನೂ ಒಟ್ಟಿಗೆ ಮುನ್ನಡೆಸಬೇಕು. ಎಲ್ಲಾ 140 ಶಾಸಕರು ನಮ್ಮ ನಾಯಕರು. ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರದ ಅವಧಿಯಲ್ಲಿಯೂ ಸಹ, ನಾನು ಪ್ರಾಮಾಣಿಕನಾಗಿದ್ದೆ. ಕುಮಾರಸ್ವಾಮಿ ಸರ್ಕಾರ ಉಳಿಸುವುದಕ್ಕೆ ನಾನು ಎಷ್ಟು ಪ್ರಯತ್ನ ಮಾಡಿದ್ದೇನೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ತಿಳಿದಿದೆ. ನನ್ನ ರಾಜಕೀಯದ ಬ್ರ್ಯಾಂಡ್ ನೇರವಾಗಿದೆ. ನಾನು ಬೆನ್ನಿಗೆ ಇರಿಯುವುದಿಲ್ಲ" ಎಂದು ಅವರು ಹೇಳಿದ್ದಾರೆ.
3. ಹಿರಿಯ ನಟ ಉಮೇಶ್ ನಿಧನ
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ಹಿರಿಯ ನಟ ಎಂ.ಎಸ್.ಉಮೇಶ್ ಅವರು ಭಾನುವಾರ ನಿಧನರಾದರು. ಅನಾರೋಗ್ಯದಿಂದಾಗಿ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದ ಉಮೇಶ್, ಚಿಕಿತ್ಸೆ ಫಲಕಾರಿಯಾಗದೆ ಇಂದು ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಎಂ. ಎಸ್. ಉಮೇಶ್ ಮೈಸೂರಿನಲ್ಲಿ ಏಪ್ರಿಲ್ 22, 1945ರಲ್ಲಿ ಜನಿಸಿದರು. ರಂಗಭೂಮಿ ಮತ್ತು ಚಲನಚಿತ್ರ ನಟರಾಗಿ 1948ರಿಂದ ಸಕ್ರಿಯರಾಗಿದ್ದರು.
ಮಕ್ಕಳ ರಾಜ್ಯ, ಭಾಗ್ಯವಂತರು, ಕಿಲಾಡಿ ಜೋಡಿ, ಗುರು ಶಿಷ್ಯರು, ಭೂಮಿಗೆ ಬಂದ ಭಗವಂತ, ಸೇರಿದಂತೆ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ʻಕಥಾಸಂಗಮದʼ ಎಂಬ ಮೂರು ಕಥಾನಕಗಳ ಚಿತ್ರವಾದ ಮುನಿತಾಯಿಯಲ್ಲಿ ‘ತಿಮ್ಮರಾಯಿ’ ಪಾತ್ರಕ್ಕೆ ಉತ್ತಮ ಪೋಷಕನಟ ಪ್ರಶಸ್ತಿ, 1994ರಲ್ಲಿ ನಾಟಕ ಅಕಾಡಮಿ ಪ್ರಶಸ್ತಿ, 1997ರಲ್ಲಿ ಮಹಾನಗರ ಪಾಲಿಕೆ ಪ್ರಶಸ್ತಿ. ಆತ್ಮಚರಿತ್ರೆ ‘ಬಣ್ಣದ ಘಂಟೆ’ಗೆ ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಹಲವಾರು ಗೌರವಗಳಿಗೆ ಉಮೇಶ್ ಭಾಜನರಾಗಿದ್ದಾರೆ. ಬನಶಂಕರಿ ಚಿತಾಗಾರದಲ್ಲಿ ಉಮೇಶ್ ಅಂತ್ಯಕ್ರಿಯೆ ನಡೆಯಿತು.
4. ಮೆಟ್ರೋ ನಿಲ್ದಾಣದ ಬಳಿ ಎಂಬಿಎ ವಿದ್ಯಾರ್ಥಿಗೆ ಚೂರಿ ಇರಿತ; 5 ಲಕ್ಷ ರೂ. ಮೌಲ್ಯದ ಐಫೋನ್ ದರೋಡೆ
ಎಂಬಿಎ ವಿದ್ಯಾರ್ಥಿಗೆ ದುಷ್ಕರ್ಮಿಗಳ ಗುಂಪೊಂದು ಚೂರಿ ಇರಿದು ದರೋಡೆ ನಡೆಸಿರುವ ಘಟನೆ ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.
21 ವರ್ಷದ ನವೀನ್ ಸಂತ್ರಸ್ತ ಯುವಕನಾಗಿದ್ದು, ಘಟನೆ ಬುಧವಾರ ರಾತ್ರಿ 11.30 ರಿಂದ ರಾತ್ರಿ 11.55 ರ ಸುಮಾರಿಗೆ ನಡೆದಿದ್ದು, ಮರುದಿನ ದೂರು ದಾಖಲಾಗಿದೆ. ಪಿಜಿಯಿಂದ ಮೆಟ್ರೋ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಯನ್ನು ಸ್ಕೂಟರ್ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ತಡೆದು, ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. ಯುವಕನ ಮೇಲೆ ಹರಿತವಾದ ಚಾಕುವಿನಿಂದ ಹಲ್ಲೆ ನಡೆಸಲಾಗಿದ್ದು, ಎಡ ಕೆನ್ನೆಗೆ 22 ಹೊಲಿಗೆಗಳನ್ನು ಹಾಕಲಾಗಿದೆ. ದುಷ್ಕರ್ಮಿಗಳ ದಾಳಿಗೊಳಗಾದ ಯುವಕ ರಕ್ತದ ಮಡುವಿನಲ್ಲಿಯೂ ಪಿಜಿಗೆ ಓಡಿ ಹೋಗಿದ್ದು, ಸ್ನೇಹಿತರ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ದುಷ್ಕರ್ಮಿಗಳು ಯುವಕನ ಬಳಿಯಿದ್ದ 5 ಲಕ್ಷ ರೂ. ಮೌಲ್ಯದ ಐಫೋನ್ ಕಸಿದು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


