ಸಿದ್ದರಾಮಯ್ಯ ಕೇವಲ ಕುರುಬ ನಾಯಕರಲ್ಲ, ಶೋಷಿತ ವರ್ಗದ ನಾಯಕ; ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಪಕ್ಷದ ವಿರುದ್ಧ ಹೋರಾಟ: ಸಮುದಾಯ ಎಚ್ಚರಿಕೆ
ಯಾವುದೇ ಸಮುದಾಯದ ಸ್ವಾಮೀಜಿ ಮುಖ್ಯಮಂತ್ರಿ ಬದಲಾವಣೆಯ ವಿಷಯದಲ್ಲಿ ನಿಲುವು ತೆಗೆದುಕೊಳ್ಳುವುದು ತಪ್ಪು. ಆದರೆ, ನಾವು ಸಿದ್ದರಾಮಯ್ಯ ಕುರುಬ ಸಮುದಾಯದವರು ಎಂಬ ಕಾರಣಕ್ಕಾಗಿ ನಾವು ಅವರನ್ನು ಬೆಂಬಲಿಸುತ್ತಿಲ್ಲ.

ಬೆಂಗಳೂರು: ಸಿದ್ದರಾಮಯ್ಯ ಅವರು ಕೇವಲ ಕುರುಬ ನಾಯಕರಲ್ಲ, ಶೋಷಿತ ವರ್ಗದ ನಾಯಕರಾಗಿದ್ದಾರೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸದಿರಿ. ಒಂದು ಇಳಿಸಿದ್ದೇ ಆದರೆ, 2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸುತ್ತೇವೆಂದು ಕಾಂಗ್ರೆಸ್ ಪಕ್ಷಕ್ಕೆ ಕುರುಬ ಸಮುದಾಯ ಎಚ್ಚರಿಕೆ ನೀಡಿದೆ.
ತಿಂಥಿಣಿ ಮಠದ ಮುಖ್ಯಸ್ಥ ಶ್ರೀ ಸಿದ್ಧರಾಮಾನಂದಪುರಿ ಅವರ ಮಾರ್ಗದರ್ಶನದಲ್ಲಿ ಕುರುಬ ಸಮುದಾಯದ ಮುಖಂಡರು ಶುಕ್ರವಾರ ಬೆಂಗಳೂರಿನ ಕುರುಬ ಸಂಘದ ಕಚೇರಿಯಲ್ಲಿ ಸಭೆ ನಡೆಸಿ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ, 2028 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸುತ್ತೇವೆ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಕಠಿಣ ಎಚ್ಚರಿಕೆ ಸಂದೇಶವನ್ನು ರವಾನಿಸಿದರು.
ಇದು ಕೇವಲ ಕುರುಬ ಸಮುದಾಯದ ನಿಲುವಲ್ಲ. ಸಿದ್ದರಾಮಯ್ಯ ತಮ್ಮನ್ನು ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಸಂಕ್ಷಿಪ್ತ ರೂಪ) ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಆದ್ದರಿಂದ, ಹೈಕಮಾಂಡ್ ಸಮುದಾಯಕ್ಕೆ ಯಾವುದೇ ಹಾನಿಯಾಗದಂತೆ ನಿರ್ಧಾರ ಕೈಗೊಳ್ಳಬೇಕೆಂದು ಶ್ರೀಗಳು ಹೇಳಿದ್ದಾರೆ.
ಯಾವುದೇ ಸಮುದಾಯದ ಸ್ವಾಮೀಜಿ ಮುಖ್ಯಮಂತ್ರಿ ಬದಲಾವಣೆಯ ವಿಷಯದಲ್ಲಿ ನಿಲುವು ತೆಗೆದುಕೊಳ್ಳುವುದು ತಪ್ಪು. ಆದರೆ, ನಾವು ಸಿದ್ದರಾಮಯ್ಯ ಕುರುಬ ಸಮುದಾಯದವರು ಎಂಬ ಕಾರಣಕ್ಕಾಗಿ ನಾವು ಅವರನ್ನು ಬೆಂಬಲಿಸುತ್ತಿಲ್ಲ. ಬಡವರು ಮತ್ತು ದೀನದಲಿತರ ಪರವಾಗಿರುವುದರಿಂದ ನಾವು ಅವರನ್ನು ಬೆಂಬಲಿಸುತ್ತಿದ್ದೇನವೆಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 5 ವರ್ಷಗಳಿಗೆ ಆಯ್ಕೆ ಮಾಡಿ ರಾಜ್ಯದ ಜನತೆ ಮತ ನೀಡಿದ್ದಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಜನಪರ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಕಾಂಗ್ರೆಸ್ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಕಾಂಗ್ರೆಸ್ ಪಕ್ಷವನ್ನೇ ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಬಹಿಷ್ಕರಿಸುವುದು ಮಾತ್ರವಲ್ಲದೆ, ದೇಶಾದ್ಯಂತ ಇರುವ ಕುರುಬ ಸಮುದಾಯದ ಜತೆಗೂಡಿ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಜೈಲಿಗೆ ಹೋಗಿ ಬಂದವರು ಹಾಗೂ ಭ್ರಷ್ಟರನ್ನು ಮುಖ್ಯಮಂತ್ರಿ ಮಾಡಲು ಕೆಲ ಶಾಸಕರು ಹೊರಟಿದ್ದಾರೆ. 140 ಶಾಸಕರ ಪೈಕಿ ಅಂಥ ಶಾಸಕರ ವಿರುದ್ಧ ನಾವೇ ಪ್ರಚಾರ ಮಾಡಿ ಸೋಲಿಸುತ್ತೇವೆ. ಸಿದ್ದರಾಮಯ್ಯ ಅವರನ್ನು ಬದಲಿಸಿದರೆ ಕಾಂಗ್ರೆಸ್‌ಗೆ ಬಹಿಷ್ಕಾರ ಹಾಕುತ್ತೇವೆ ಎಂದರು. ಇದೇ ವೇಳೆ ಸಮಸ್ಯೆಯನ್ನು ಪರಿಹರಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



