ನಕಲಿ ನಂದಿನಿ ತುಪ್ಪ ದಂಧೆ ಬೇಧಿಸಿದ CCB ಪೊಲೀಸರು: ಕಿಂಗ್‌ಪಿನ್ ದಂಪತಿ ಬಂಧನ
ಬಂಧಿತ ಆರೋಪಿಗಳನ್ನು ಶಿವಕುಮಾರ್ ಮತ್ತು ಆತನ ಪತ್ನಿ ರಮ್ಯಾ ಎಂದು ಗುರುತಿಸಲಾಗಿದೆ. ಸಿಸಿಬಿ ಪೊಲೀಸರ ತನಿಖೆ ವೇಳೆ ಈ ದಂಪತಿಯೇ ನಕಲಿ ನಂದಿನಿ ಉತ್ಪನ್ನಗಳ ತಯಾರಿಕೆ ಘಟಕದ ಕಿಂಗ್‌ಪಿನ್‌ಗಳು ಎಂಬುದು ದೃಢಪಟ್ಟಿದೆ.

ಬೆಂಗಳೂರು: ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕಾ ಘಟಕವನ್ನು ಸ್ಥಾಪಿಸಿ ರಾಜ್ಯಾದ್ಯಂತ ನಕಲಿ ಉತ್ಪನ್ನಗಳನ್ನು ವಿತರಿಸುತ್ತಿದ್ದ ಪ್ರಮುಖ ಸೂತ್ರಧಾರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶಿವಕುಮಾರ್ ಮತ್ತು ಆತನ ಪತ್ನಿ ರಮ್ಯಾ ಎಂದು ಗುರುತಿಸಲಾಗಿದೆ. ಸಿಸಿಬಿ ಪೊಲೀಸರ ತನಿಖೆ ವೇಳೆ ಈ ದಂಪತಿಯೇ ನಕಲಿ ನಂದಿನಿ ಉತ್ಪನ್ನಗಳ ತಯಾರಿಕೆ ಘಟಕದ ಕಿಂಗ್‌ಪಿನ್‌ಗಳು ಎಂಬುದು ದೃಢಪಟ್ಟಿದೆ.
ಸಿಸಿಬಿ ಡಿಸಿಪಿ ಶ್ರೀಹರಿಬಾಬು ಅವರು ನೀಡಿರುವ ಮಾಹಿತಿ ಪ್ರಕಾರ, ಆರೋಪಿ ದಂಪತಿಗಳು ನೆರೆಯ ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕೆ ಘಟಕವನ್ನು ಸ್ಥಾಪಿಸಿದ್ದರು. ಈ ಘಟಕದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ, ನಕಲಿ ತುಪ್ಪ ತಯಾರಿಸಲು ಬಳಸುತ್ತಿದ್ದ ದೊಡ್ಡ ದೊಡ್ಡ ಹೈಟೆಕ್ ಮೆಷಿನರಿಗಳು ಮತ್ತು ಅತ್ಯಾಧುನಿಕ ಯಂತ್ರಗಳು ಪತ್ತೆಯಾಗಿವೆ.
ಈ ಯಂತ್ರಗಳನ್ನು ಬಳಸಿಕೊಂಡು ದಂಪತಿಗಳು ನಂದಿನಿ ಲೇಬಲ್‌ನ ನಕಲಿ ತುಪ್ಪಗಳನ್ನು ತಯಾರಿಸಿ, ರೀ-ಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಿದ್ದರು. ದಾಳಿ ವೇಳೆ ಪೊಲೀಸರು ಮೆಷಿನರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ನವೆಂಬರ್ 14 ರಂದು ಚಾಮರಾಜಪೇಟೆಯಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿ ನಂದಿನಿ ತುಪ್ಪವನ್ನು ವಶಪಡಿಸಿಕೊಂಡಿದ್ದರು. ಈ ನಕಲಿ ಉತ್ಪನ್ನಗಳನ್ನು ಕೆಲ ನಂದಿನಿ ಪಾರ್ಲರ್‌ಗಳು ಮತ್ತು ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆ ಸಮಯದಲ್ಲಿ ಪ್ರಕರಣ ದಾಖಲಿಸಿ, ವಿತರಣಾ ಜಾಲದಲ್ಲಿದ್ದ ಡಿಸ್ಟ್ರಿಬ್ಯೂಟರ್ ಮಹೇಂದ್ರ, ಆತನ ಮಗ ದೀಪಕ್, ಮತ್ತು ಮುನಿರಾಜು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿತ್ತು.
ಬಂಧಿತರಾಗಿರುವ ಶಿವಕುಮಾರ್ ಮತ್ತು ರಮ್ಯಾ ದಂಪತಿಗಳು ತಯಾರಿಸಿದ ನಕಲಿ ಉತ್ಪನ್ನಗಳನ್ನೇ ಈ ಮಹೇಂದ್ರ ಅಂಡ್ ಗ್ಯಾಂಗ್ ರಾಜ್ಯಾದ್ಯಂತ ವಿತರಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣದ ಗಂಭೀರತೆ ಅರಿತು ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ಆರೋಪಿ ದಂಪತಿಗಳ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 60 ಲಕ್ಷ ರೂಪಾಯಿ ಹಣವನ್ನು ಫ್ರೀಜ್ ಮಾಡಿದ್ದಾರೆ. ಅಲ್ಲದೆ, ನಕಲಿ ತುಪ್ಪದಲ್ಲಿ ಏನೆಲ್ಲಾ ಕಳಪೆ ವಸ್ತುಗಳನ್ನು ಮಿಶ್ರಣ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಲು, ವಶಪಡಿಸಿಕೊಂಡ ಮಾದರಿಗಳನ್ನು ಎಫ್‌ಎಸ್‌ಎಲ್ (FSL) ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



