ರಾಜ್ಯ

ತುಂಬಿ ಹರಿಯುತ್ತಿದ್ದಾಳೆ ಕನ್ನಡಿಗರ ಜೀವನಾಡಿ: 101 ಅಡಿ ತಲುಪಿದ KRS; ಕಬಿನಿ ಅಚುಕಟ್ಟಿನಲ್ಲಿ ಪ್ರವಾಹದ ಎಚ್ಚರಿಕೆ

ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡಿದ 5-6 ದಿನಗಳಲ್ಲೇ ಕಾವೇರಿ ಕಣಿವೆಯ ಕೇರಳದ ವಯನಾಡು, ಕೊಡಗಿನ ಕಾವೇರಿ ನದಿ ಪಾತ್ರದಲ್ಲಿ ವ್ಯಾಪಕ ಮಳೆ ಸುರಿದಿದೆ, ಇದರಿಂದಾಗಿ ಕೆ.ಆರ್.ಎಸ್ ಅಣೆಕಟ್ಟೆಯ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿತ್ತು.

ತುಂಬಿ ಹರಿಯುತ್ತಿದ್ದಾಳೆ ಕನ್ನಡಿಗರ ಜೀವನಾಡಿ: 101 ಅಡಿ ತಲುಪಿದ KRS; ಕಬಿನಿ ಅಚುಕಟ್ಟಿನಲ್ಲಿ ಪ್ರವಾಹದ ಎಚ್ಚರಿಕೆ
KRS ಜಲಾಶಯ
Published On :

ಮೈಸೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ-ಮೈಸೂರು ಸೇರಿದಂತೆ ಹಳೇ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ 101 ಅಡಿಯನ್ನು ದಾಟಿದೆ.

ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡಿದ 5-6 ದಿನಗಳಲ್ಲೇ ಕಾವೇರಿ ಕಣಿವೆಯ ಕೇರಳದ ವಯನಾಡು, ಕೊಡಗಿನ ಕಾವೇರಿ ನದಿ ಪಾತ್ರದಲ್ಲಿ ವ್ಯಾಪಕ ಮಳೆ ಸುರಿದಿದೆ, ಇದರಿಂದಾಗಿ ಕೆ.ಆರ್.ಎಸ್ ಅಣೆಕಟ್ಟೆಯ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿತ್ತು.

ಕಳೆದ ಆರೇಳು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಅಬ್ಬರದಿಂದ ಆರ್ಭಟಿಸಿದ್ದು, ಕಾವೇರಿ ನದಿಯ ಜೀವಕಳೆ ಪಡೆದು ತುಂಬಿಹರಿಸುತ್ತಿದೆ. ಅಣೆಕಟ್ಟೆಯ ನೀರಿನ ಮಟ್ಟ 101 ಅಡಿಗೆ ಏರಿಕೆಯಾಗಿದೆ.

ಇನ್ನು ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯ ಭರ್ತಿಯಾಗುವ ಹಂತಕ್ಕೆ ಬಂದಿದೆ. 2,284 ಅಡಿ ಸಾಮರ್ಥ್ಯ ಇರುವ ಜಲಾಶಯದಲ್ಲಿ ಸದ್ಯ 2,277.69 ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 18,018 ಕ್ಯೂಸೆಕ್‌ ಒಳ ಹರಿವು ಇದ್ದು, ಪ್ರಸ್ತುತ ಜಲಾಶಯದಲ್ಲಿ 15.74 ಟಿಎಂಸಿ ನೀರಿದ್ದು, ಒಟ್ಟು ಸಾಮರ್ಥ್ಯ 19.52 ಟಿಎಂಸಿ ಇದೆ.

ಮೂರು ದಿನದಲ್ಲಿ 6 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದ್ದು, ನೀರಿನ ಒಳ ಹರಿವಿನ ಪ್ರಮಾಣ ಹೆಚ್ಚಿರುವುದರಿಂದ ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ.

ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಹಾಗೂ ವರ್ಷಕ್ಕೆ ಎರಡು ಬಾರಿ ಭರ್ತಿಯಾಗುವ ಜಲಾಶಯ. ಎಂಬ ಹೆಗ್ಗಳಿಕೆ ಕಬಿನಿಗೆ ಇದೆ. ಮೈಸೂರು, ಬೆಂಗಳೂರು, ಮಂಡ್ಯ, ಚಾಮರಾಜನಗರ ಕೆಲವು ಪ್ರದೇಶಗಳಿಗೆ ಕುಡಿಯುವ ನೀರು ಮತ್ತು ವ್ಯವಸಾಯಕ್ಕೆ ನೀರು ಒದಗಿಸಲು ಇಲ್ಲಿನ ನೀರು ನೆರವಾಗಲಿದೆ.

ಪ್ರವಾಹದ ಎಚ್ಚರಿಕೆ

ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ 18000 ಕ್ಯುಸೆಕ್ ಗೂ ಹೆಚ್ಚಿದ್ದು, ಜಲಾನಯನ ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆಯಾ ಗುತ್ತಿರುವ ಪ್ರಯುಕ್ತ ಕಬಿನಿ ಜಲಾಶಯದಿಂದ 5000 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಯಾವುದೇ ಕ್ಷಣದಲ್ಲಾದರೂ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸುವ ಸಾಧ್ಯತೆ ಇರುತ್ತದೆ.

ಹೀಗಾಗಿ, ಕಬಿನಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್‌.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯ ವಿಭಾಗದ ಕಾರ್ಯ ಪಾಲಕ ಎಂಜಿನಿಯರ್‌. ಚಂದ್ರಶೇಖರ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.