ಕರಾವಳಿ ಕರ್ನಾಟಕದಲ್ಲಿ ಮುಂದುವರಿದ ಮಳೆ ಅವಾಂತರ: ರೆಡ್ ಅಲರ್ಟ್ ಘೋಷಣೆ, NDRF ತಂಡಗಳ ನಿಯೋಜನೆ
ಅಧಿಕಾರಿಗಳ ಪ್ರಕಾರ, ಜಿಲ್ಲೆಯಾದ್ಯಂತ ಗುಡ್ಡಗಾಡು ಪ್ರದೇಶಗಳಲ್ಲಿ ಸಣ್ಣಪುಟ್ಟ ಭೂಕುಸಿತಗಳು ಸಂಭವಿಸಿವೆ.
ಮಂಗಳೂರು: ರಾಜ್ಯದ ಕರಾವಳಿ ಪ್ರದೇಶದಲ್ಲಿ ಸತತ ಮೂರನೇ ದಿನವಾದ ಸೋಮವಾರವೂ ಭಾರಿ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಧಿಕಾರಿಗಳು ರೆಡ್ ಅಲರ್ಟ್ ಘೋಷಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ.
ಮುಂದಿನ 48 ಗಂಟೆಗಳಲ್ಲಿ ಕರಾವಳಿ ಪ್ರದೇಶದಾದ್ಯಂತ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮುಂದಿನ ಐದು ದಿನಗಳವರೆಗೆ ರೆಡ್ ಅಲರ್ಟ್ ಜಾರಿಯಲ್ಲಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಮಂಗಳೂರು ನಗರದ ಹಲವಾರು ಭಾಗಗಳಲ್ಲಿ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ಜಿಲ್ಲೆಯಾದ್ಯಂತ ಗುಡ್ಡಗಾಡು ಪ್ರದೇಶಗಳಲ್ಲಿ ಸಣ್ಣಪುಟ್ಟ ಭೂಕುಸಿತಗಳು ಸಂಭವಿಸಿವೆ.
ಮಂಗಳೂರು ನಗರದ ಕೊಟ್ಟಾರ ಜಂಕ್ಷನ್, ಮಾಲೆಮಾರ್, ಮಹಾವೀರ ವೃತ್ತ ಜವಾವೃತಗೊಂಡಿದ್ದು, ಉರ್ವ, ಮಟಡಕಣಿ, ಕುದ್ರೋಳಿ ಮತ್ತು ಕೊಡಿಯಾಲ್‌ಬೈಲ್ (ಪಶ್ಚಿಮ) ಗಳಲ್ಲಿ ಸಣ್ಣ ಪ್ರಮಾಣದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತೊಕ್ಕುಟ್ಟು, ಗೂಡಿನಬಳಿ, ಮರಕಡ, ಪಣಂಬೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳೂ ಜಲಾವೃತಗೊಂಡಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಹಂಗಾಮಿ ಜಿಲ್ಲಾಧಿಕಾರಿ ಆನಂದ್ ಕೆ, ಸೋಮವಾರ ನಿರಂತರ ಮಳೆಯಿಂದಾಗಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಹಲವು ಪ್ರದೇಶಗಳಲ್ಲಿ 150 ಮಿಮೀ ಮಳೆಯಾಗಿದ್ದು, ಸುಳ್ಯದ ಬೆಳ್ಳಾರೆಯಲ್ಲಿ ಅತಿ ಹೆಚ್ಚು 200.5 ಮಿಮೀ ಮಳೆಯಾಗಿದೆ. ಬಂಟ್ವಾಳದ ಸಾರಪಾಡಿ ಮತ್ತು ಪುತ್ತೂರಿನ ಬೆಳಂದೂರಿನಲ್ಲಿ ತಲಾ 190 ಮಿ.ಮೀ. ಮಳೆಯಾಗಿದೆ.
ಪರಿಸ್ಥಿತಿ ಹದಗೆಡುತ್ತಿರುವುದರಿಂದ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಒಂದು ತಂಡವನ್ನು ಪುತ್ತೂರಿನಲ್ಲಿ ನಿಯೋಜಿಸಲಾಗಿದ್ದು, ಮಂಗಳೂರು ಮತ್ತು ಸುಬ್ರಹ್ಮಣ್ಯದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್) ಎರಡು ತಂಡಗಳನ್ನು ನಿಯೋಜಿಸಲಾಗಿದೆ.
ಅಧಿಕಾರಿಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸಲು ಸೂಚಿಸಲಾಗಿದ್ದು, ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಜೆಸಿಬಿಗಳು ಮತ್ತು ರಕ್ಷಣಾ ದೋಣಿಗಳಂತಹ ನಿರ್ಮಾಣ ಸಲಕರಣೆಗಳನ್ನು ಸಿದ್ಧವಾಗಿಡಲಾಗಿದೆ. ದುರ್ಬಲಗೊಂಡ ಕಟ್ಟಡಗಳಲ್ಲಿರುವ ಶಾಲೆಗಳು ಮತ್ತು ಅಂಗನವಾಡಿಗಳನ್ನು ಪುನಃ ತೆರೆಯುವ ಮೊದಲು ತೆರವುಗೊಳಿಸಲಾಗುತ್ತಿದೆ.
ಕುಮಟಾ ಬಳಿಯ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಭೂಕುಸಿತಗಳು ವರದಿಯಾಗಿವೆ. ಬೆಳ್ತಂಗಡಿ ಸುತ್ತಮುತ್ತಲಿನ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದ್ದು, ತಗ್ಗು ಪ್ರದೇಶಗಳಿಗೆ ಪ್ರವಾಹದ ಅಪಾಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆದ್ದಾರಿ ನಿರ್ಮಾಣ ಕಾರ್ಯಗಳಿಂದಾಗಿ ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿರುವ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಅಧಿಕಾರಿಗಳು ಕೋರಿದ್ದಾರೆ.
ಈಮಧ್ಯೆ, ಮಳೆಗೂ ಮುನ್ನ ಹೊರಟಿದ್ದ ಮೀನುಗಾರಿಕಾ ದೋಣಿಗಳು ಪ್ರತಿಕೂಲ ಪರಿಸ್ಥಿತಿಯಿಂದಾಗಿ ನವ ಮಂಗಳೂರು ಬಂದರಿಗೆ ಹಿಂತಿರುಗುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



