KAS ಮುಖ್ಯ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ: ಸುಳ್ಳು ಸುದ್ದಿ, ವದಂತಿಗಳಿಗೆ ಕಿವಿಗೊಡಬೇಡಿ; KPSC ಸ್ಪಷ್ಟನೆ
ಸಾಮಾಜಿಕ ಮತ್ತು ಸಮೂಹ ಮಾಧ್ಯಮದಲ್ಲಿ ಭಿತ್ತರಗೊಳ್ಳುತ್ತಿರುವ ವಿಷಯವು ಸತ್ಯಕ್ಕೆ ದೂರವಾದುದ್ದಾಗಿದ್ದು, ಇತರೆ ಅಭ್ಯರ್ಥಿಗಳು ಇದರಿಂದ ಯಾವುದೇ ರೀತಿಯಲ್ಲಿಯೂ ಹತಾಶರಾಗಬಾರದೆಂದು ಮತ್ತು ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು.

ಬೆಂಗಳೂರು: ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆಪತ್ರಿಕೆಯೇ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು ಇದರ ಬೆನ್ನಲ್ಲೇ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಸ್ಪಷ್ಟನೆ ನೀಡಿದೆ.
ಈ ಸಂಬಂಧ ಸಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೆಪಿಎಸ್'ಸಿ, ಆಯೋಗದ ವತಿಯಿಂದ ಮೇ 05 ರಂದು ನಡೆಸಲಾದ ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳ ಮುಖ್ಯ ಪರೀಕ್ಷೆಯ ಪ್ರಬಂಧ ಪತ್ರಿಕೆಯ ಪರೀಕ್ಷೆಯ ಸಂದರ್ಭದಲ್ಲಿ ಬೆಂಗಳೂರಿನ ಮೈಸೂರು ರಸ್ತೆಯ ಕಸ್ತೂರ ಬಾ ನಗರದ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸಾಧ್ಯತೆಯ ಬಗ್ಗೆ ಕೆಲವು ಸಮೂಹ ಮಾಧ್ಯಮಗಳು ವರದಿ ಮಾಡಿವೆ. ಈ ವಿಷಯದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಪರೀಕ್ಷಾ ಉಪ ಕೇಂದ್ರದ ಮೇಲ್ವಿಚಾರಕರು ಮತ್ತು ಆಯೋಗದಿಂದ ನಿಯೋಜಿತರಾದ ಸ್ಥಳೀಯ ನಿರೀಕ್ಷಣಾಧಿಕಾರಿಗಳಿಂದ ವಿಸ್ತ್ರತವಾದ ವರದಿಗಳನ್ನು ಪಡೆಯಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗವು ಪ್ರೊಬೇಷನರಿ ಪರೀಕ್ಷೆಗಳೂ ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳನ್ನು ನಡೆಸುವಾಗ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಂತೆ ಮತ್ತು ಪರೀಕ್ಷಾ ಗೌಪ್ಯತೆಯನ್ನು ಕಾಪಾಡುವ ಮತ್ತು ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ ಹಾಗೂ ದುರಾಚಾರ ಪ್ರಕರಣಗಳು ನಡೆಯದಂತೆ ತಡೆಯಲು ಹಲವು ಹಂತಗಳ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿರುತ್ತದೆ. ಅದರಂತೆಯೇ ಈ ಪರೀಕ್ಷೆಯಲ್ಲಿಯೂ ಸಹ ಪ್ರಶ್ನೆ ಪತ್ರಿಕೆಯ ಭದ್ರತೆಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಮೊಹರು ಮಾಡಿದ ಪೆಟ್ಟಿಗೆ, ಮೊಹರು ಮಾಡಿದ ಲೋಹದ ಟ್ರಂಕ್ ಹಾಗೂ ಮೊಹರು ಮಾಡಿದ ಟ್ಯಾಂಪರ್ ಎವಿಡೆಂಟ್ ಕವರ್‌ಗಳನ್ನು ಇತ್ಯಾದಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅದರೊಂದಿಗೆ ಪ್ರಶ್ನೆಪತ್ರಿಕೆಗಳನ್ನು ಸಾಗಿಸುವಾಗ ಅವು ಹಾನಿಯಾಗದಂತೆ ಸಂರಕ್ಷಿಸಲು ನೀರು ನಿರೋಧಕ ಪ್ಲಾಸ್ಟಿಕ್ ಕವರ್‌ಗಳನ್ನು ದ್ರವ ಪದಾರ್ಥಗಳಿಂದ ಸುರಕ್ಷಿತವಾಗಿ ಸಂರಕ್ಷಿಸುವ ಉದ್ದೇಶಕ್ಕಾಗಿ ಮಾತ್ರ ಉಪಯೋಗಿಸಲಾಗಿದ್ದು, ಅದು ಟ್ಯಾಂಪರ್ ಎವಿಡೆಂಟ್ ಕವರ್ ಆಗಿರುವುದಿಲ್ಲ.
ಸದರಿ ಪರೀಕ್ಷೆಯ ಪರೀಕ್ಷಾ ಉಪಕೇಂದ್ರಕ್ಕೆ ವಿತರಿಸಲಾದ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ ಪೆಟ್ಟಿಗೆಗಳು, ಟ್ರಂಕ್‌ಗಳು ಮತ್ತು ಟ್ಯಾಂಪರ್ ಎವಿಡೆಂಟ್ ಕವರಳಲ್ಲಿನ ಎಲ್ಲಾ ಭದ್ರತಾ ಮೊಹರುಗಳು ಕ್ರಮಬದ್ಧವಾಗಿಯೇ ಇರುವುದು ಕಂಡುಬಂದಿರುತ್ತದೆ. ಇದನ್ನು ಅಭ್ಯರ್ಥಿಗಳು, ಉಪ-ಕೇಂದ್ರದ ಮೇಲ್ವಿಚಾರಕರು, ಸ್ಥಳೀಯ ನಿರೀಕ್ಷಣಾಧಿಕಾರಿಗಳು ಮತ್ತು ಕೊಠಡಿ ಸಂವೀಕ್ಷಕರು ಖಚಿತಪಡಿಸಿದ್ದಾರೆ. ಸದರಿ ಉಪ-ಕೇಂದ್ರಕ್ಕಾಗಿ ಕೊನೆಯ ಪದರದ ಪ್ಲಾಸ್ಟಿಕ್ ಕವರ್‌ಗಳಲ್ಲಿ ಅಳವಡಿಸಲಾದ ಪ್ರಶ್ನೆಸಹಿತ ಉತ್ತರ ಪುಸ್ತಿಕೆಗಳ ಸಂಖ್ಯೆ ಇತರ ಕೇಂದ್ರಗಳಿಗೆ ಸಾಮಾನ್ಯವಾಗಿ ವಿತರಿಸಲಾದ ಪ್ರಶ್ನೆ ಪತ್ರಿಕೆಗಳಿಗಿಂತ ದುಪ್ಪಟ್ಟಾಗಿತ್ತು.
ಮೇಲೆ ತಿಳಿಸಿದ ಅಂಶಗಳ ಹಿನ್ನೆಲೆಯಲ್ಲಿ ಸದರಿ ಪ್ರಕರಣವನ್ನು ಪರಿಶೀಲಿಸಲಾಗಿ ಪ್ರಶ್ನೆಪತ್ರಿಕೆಗಳ ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಅವುಗಳನ್ನು ಬಹುಪದರಗಳುಳ್ಳ ಪ್ಯಾಕ್‌ನಲ್ಲಿರಿಸಿ ಮೊಹರು ಮಾಡಲಾಗಿರುತ್ತದೆ. ಹಾಗಾಗಿ, ಸದರಿ ಉಪಕೇಂದ್ರದ 2 ಕೊಠಡಿಗಳಲ್ಲಿ ಟ್ಯಾಂಪರ್ ಎವಿಡೆಂಟ್ ಎನ್ವಲಪ್ ಒಳಗಿನ ದ್ರವ ಪದಾರ್ಥಗಳಿಂದ ಸಂರಕ್ಷಿಸಲು ಪ್ಯಾಕ್ ಮಾಡಲಾಗಿದ್ದ ಪ್ಲಾಸ್ಟಿಕ್ ಕವರ್‌ಗಳು ಮಾತ್ರ ಪ್ಯಾಕಿಂಗ್ ಅಥವಾ ಸಾಗಣೆಯ ಸಮಯದಲ್ಲಿ ಯಾಂತ್ರಿಕವಾಗಿ ಹರಿದಿರಬಹುದಾದ ಸಾಧ್ಯತೆ ಇರುತ್ತದೆಯೇ ಹೊರತು ಇತರೆ ಯಾವುದೇ ರೀತಿಯ ಲೋಪಗಳುಂಟಾಗಿರುವುದಿಲ್ಲ. ಇನ್ನುಳಿದಂತೆ ಆಯೋಗವು ನಡೆಸಿದ ಇತರೆ ಯಾವುದೇ ಪರೀಕ್ಷಾ ಉಪ ಕೇಂದ್ರಗಳಿಂದ ಈ ರೀತಿಯ ಯಾವುದೇ ವರದಿಗಳು ಸ್ವೀಕೃತವಾಗಿರುವುದಿಲ್ಲ.
ಪರೀಕ್ಷಾ ಗೌಪ್ಯ ಸಾಮಗ್ರಿಗಳ ಗೌಪ್ಯತೆ, ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ಆಯೋಗವು ಅತ್ಯಂತ ಜವಾಬ್ದಾರಿಯುತವಾಗಿ ಕಾಳಜಿ ವಹಿಸುವುದಲ್ಲದೆ, ಅತ್ಯಂತ ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಯತ್ನಿಸುತ್ತಿದೆ ಎಂಬ ಅಂಶವನ್ನು ಪುನರುಚ್ಛರಿಸುತ್ತಾ, ಸಾಮಾಜಿಕ ಮತ್ತು ಸಮೂಹ ಮಾಧ್ಯಮದಲ್ಲಿ ಭಿತ್ತರಗೊಳ್ಳುತ್ತಿರುವ ವಿಷಯವು ಸತ್ಯಕ್ಕೆ ದೂರವಾದುದ್ದಾಗಿದ್ದು, ಇತರೆ ಅಭ್ಯರ್ಥಿಗಳು ಇದರಿಂದ ಯಾವುದೇ ರೀತಿಯಲ್ಲಿಯೂ ಹತಾಶರಾಗಬಾರದೆಂದು ಮತ್ತು ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದೆಂದು ಈ ಮೂಲಕ ತಿಳಿಸಿದೆ ಎಂದು ಸ್ಪಷ್ಟನೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



