ರಾಜ್ಯ

ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ ಪತ್ರ ವಿತರಣೆ; ಮುಂದೆ ಚಾಲಕರು, ಸಹಾಯಕರು ಖಾಯಂ: ಸಿಎಂ ಘೋಷಣೆ

ಮುಂದಿನ ದಿನಗಳಲ್ಲಿ ಸುಮಾರು 9,000 ವಾಹನ ಚಾಲಕರು, ಸಹಾಯಕರು ಹಾಗೂ ಆಪರೇಟರ್​​ಗಳನ್ನೂ ಕೂಡ ಖಾಯಂ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.

ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ ಪತ್ರ ವಿತರಣೆ; ಮುಂದೆ ಚಾಲಕರು, ಸಹಾಯಕರು ಖಾಯಂ: ಸಿಎಂ ಘೋಷಣೆ
ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ ಪತ್ರ ವಿತರಣೆ
Published On :

ಬೆಂಗಳೂರು: ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ(BBMP)ಯ 12,692 ಪೌರಕಾರ್ಮಿಕರನ್ನು ಖಾಯಂಗೊಳಿಸಿ, ನೇಮಕಾತಿ ಪತ್ರವನ್ನು ನೀಡಿದೆ. ಮುಂದಿನ ದಿನಗಳಲ್ಲಿ ಸುಮಾರು 9,000 ವಾಹನ ಚಾಲಕರು, ಸಹಾಯಕರು ಹಾಗೂ ಆಪರೇಟರ್​​ಗಳನ್ನೂ ಕೂಡ ಖಾಯಂ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.

ಇಂದು ಬಿಬಿಎಂಪಿ ವತಿಯಿಂದ ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಮಿಕರ ದಿನಾಚರಣೆ ಹಾಗೂ ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಿದರು.

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದಾರೆ ಅಂತ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಪೌರಕಾರ್ಮಿಕರು ದೂರು ನೀಡಿದ್ದರು. ಮಿನಿಮಮ್ ವೇಜಸ್ ಆ್ಯಕ್ಟ್ ಅಡಿ ಕನಿಷ್ಠ ವೇತನ ಕೊಡಿಸುವ ಕೆಲಸ ಮಾಡಿದೆ. ಮಧ್ಯವರ್ತಿಗಳ ಹಾವಳಿಯಿಂದ ನೀವು ಇವತ್ತು ಮುಕ್ತರಾಗಿದ್ದೀರಿ ಎಂದರು.

ಮೊದಲು 7000 ರೂ. ದೊರೆಯುತ್ತಿದ್ದ ಸಂಬಳವನ್ನು ಈಗ 17000 ಕ್ಕೆ ಹೆಚ್ಚಿಸಿ, ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಯಾಗುವ ವ್ಯವಸ್ಥೆಯನ್ನು ಮಾಡಲಾಯಿತು. ಈ ರೀತಿ ಪೌರಕಾರ್ಮಿಕರನ್ನು ಮದ್ಯವರ್ತಿಗಳ ಹಾವಳಿಯಿಂದ ಮುಕ್ತಗೊಳಿಸಲಾಯಿತು ಎಂದು ಸಿಎಂ ತಿಳಿಸಿದರು.

ವಿರೋಧ ಪಕ್ಷದ ನಾಯಕನಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಪೌರ ಕಾರ್ಮಿಕರ ಬೇಡಿಕೆಯನ್ನು ಪೂರೈಸುವುದಾಗಿ ನೀಡಲಾಗಿದ್ದ ಭರವಸೆಯನ್ನು ಇಂದು ಈಡೇರಿಸಲಾಗಿದೆ. ಇದರಿಂದ 4ನೇ ದರ್ಜೆಯ ಪೌರಕಾರ್ಮಿಕರ ವೇತನ, ಅವರ ಖಾತೆಗೆ ನೇರವಾಗಿ 39000 ರೂ.ಗಳು ಪಾವತಿಯಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ನೀವೆಲ್ಲ ಶುಚಿತ್ವ ಕಾಪಾಡುವರು. ಶುಚಿತ್ವದಲ್ಲೇ ದೈವತ್ವ ಕಾಣುತ್ತೇವೆ. ಅಂತಾ ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಶುಚಿತ್ವ ಮಾಡುವ ಕೆಲಸ ಬಹಳ ಶ್ರೇಷ್ಠವಾದದ್ದು. ಬಸವಣ್ಣ ಅವರು ಕಾಯಕವೇ ಕೈಲಾಸ ಅಂದಿದ್ದರು. ಯಾವ ಕೆಲಸವೂ ಕೀಳಲ್ಲ, ಯಾವ ಕೆಲಸವೂ ಮೇಲಲ್ಲ ಎಂದರು.

ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ತಮ್ಮ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಪ್ರಮುಖ ಭರವಸೆಯನ್ನು ಈಡೇರಿಸಿದೆ. ನಾವು ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂ ಸರ್ಕಾರಿ ನೌಕರರನ್ನಾಗಿ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದೆವು ಮತ್ತು ಇಂದು ನಾವು ಆ ಭರವಸೆಯನ್ನು ಈಡೇರಿಸಿದ್ದೇವೆ ಎಂದರು.

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.