ಮಚ್ಚು ಹಿಡಿದು ರೀಲ್ಸ್: ಬಿಗ್ಬಾಸ್ ಮಾಜಿ ಸ್ಪರ್ಧಿಗಳನ್ನು 3 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಕೋರ್ಟ್
ನಿನ್ನೆ ಬಿಗ್ಬಾಸ್ ಮಾಜಿ ಸ್ಪರ್ಧಿಗಳನ್ನು ವಶಕ್ಕೆ ಪಡೆದಿದ್ದ ಬಸವೇಶ್ವರ ನಗರ ಠಾಣೆ ಪೊಲೀಸರು ಇಂದು ಇಬ್ಬರನ್ನು 24ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು.

ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಪಾಲಾಗಿರುವ ಕನ್ನಡ ಬಿಗ್ಬಾಸ್ನ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಕೋರ್ಟ್ ಬುಧವಾರ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ.
ನಿನ್ನೆ ಬಿಗ್ಬಾಸ್ ಮಾಜಿ ಸ್ಪರ್ಧಿಗಳನ್ನು ವಶಕ್ಕೆ ಪಡೆದಿದ್ದ ಬಸವೇಶ್ವರ ನಗರ ಠಾಣೆ ಪೊಲೀಸರು ಇಂದು ಇಬ್ಬರನ್ನು 24ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು.
ವಾದ, ಪ್ರತಿವಾದ ಆಲಿಸಿದ ಕೋರ್ಟ್ ಇಬ್ಬರನ್ನೂ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಅಲ್ಲದೆ ಕಸ್ಟಡಿ ಅವಧಿ ಮುಗಿದ ಬಳಿಕ ಅಂದರೆ, ಮಾರ್ಚ್ 28ರಂದು ಸಂಜೆ 4 ಗಂಟೆಗೆ ಇಬ್ಬರನ್ನು ಕೋರ್ಟ್ಗೆ ಹಾಜರುಪಡಿಸುವಂತೆ ಸೂಚಿಸಿದೆ.
ನಿನ್ನೆ ವಿಚಾರಣೆಗೆ ಹಾಜರಾದ ರಜತ್ ಹಾಗೂ ವಿನಯ್ ಗೌಡ ಅವರನ್ನು ಬಸವೇಶ್ವರ ನಗರ ಪೊಲೀಸರು ನಾಗರಬಾವಿಯ ಅಕ್ಷಯ್ ಸ್ಟುಡಿಯೋಗೆ ಕರೆ ತಂದು ರೀಲ್ಸ್ ಮಾಡಿದ ಜಾಗದಲ್ಲಿ ಸ್ಥಳ ಮಹಜರು ಮಾಡಿಸಿದ್ದರು.
ಅಕ್ಷಯ ಸ್ಟುಡಿಯೋದ ಮೂಲೆಮೂಲೆಯಲ್ಲಿ ಹುಡುಕಿದರೂ ಲಾಂಗ್ ಪತ್ತೆ ಆಗಿಲ್ಲ. ಮಚ್ಚು ಎಲ್ಲಿದೆ ಎಂದು ಕೇಳಿದರೂ ರಜತ್ ಹಾಗೂ ವಿನಯ್ ಗೌಡ ಬಾಯಿ ಬಿಟ್ಟಿಲ್ಲ. ಸೆಟ್ ಹಾಕಿದ್ದವರು ತಗೊಂಡು ಹೋಗಿರಬಹುದೆಂದು ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಹೀಗಾಗಿ ಬಸವೇಶ್ವರ ನಗರ ಪೊಲೀಸರು ಅವರಿಬ್ಬರನ್ನು ಮತ್ತೆ ಠಾಣೆಗೆ ಕರೆದುಕೊಂಡು ಬಂದಿದ್ದರು.
ಸದ್ಯ ರೀಲ್ಸ್ನಲ್ಲಿ ಬಳಸಿದ ಮಚ್ಚು ಎಲ್ಲಿದೆ ಅಂತ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಳೆದ ಮಾರ್ಚ್ 20ರಂದು ನಾಗರಬಾವಿಯ ಅಕ್ಷಯ ಸ್ಟುಡಿಯೋ ಬಳಿ ಮಾರಕಾಸ್ತ್ರ ಹಿಡಿದು ಸುಮಾರು 18 ಸೆಕೆಂಡ್ಗಳ ರೀಲ್ಸ್ ವಿಡಿಯೋ ಮಾಡಿದ್ದು, ಇದನ್ನು ಬುಜ್ಜಿ ಹೆಸರಿನಲ್ಲಿ ಇನ್ಸ್ಟಾಗ್ರಾಂ ಖಾತೆಗೆ ರಜತ್ ಅಪ್ಲೋಡ್ ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಬಸವೇಶ್ವನಗರ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸೋಮವಾರ ಇಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದರು.
ತಾವು ಮಾಡಿದ ವಿಡಿಯೋದಲ್ಲಿ ನಕಲಿ ಮಚ್ಚು ಉಪಯೋಗಿಸಲಾಗಿದೆ ಎಂದು ಹೇಳಿ ಫೈಬರ್ ನಿಂದ ತಯಾರಿಸಿದ ಮಚ್ಚನ್ನು ಆರೋಪಿಗಳು ಪೊಲೀಸರಿಗೆ ನೀಡಿದ್ದರು ಎಂದು ವರದಿಯಾಗಿದೆ. ಆದರೆ ತನಿಖೆ ವೇಳೆ ವಿಡಿಯೋದಲ್ಲಿ ಬಳಕೆಯಾಗಿರುವ ಮಚ್ಚಿಗೂ ಆರೋಪಿಗಳು ನೀಡಿದ್ದ ಮಚ್ಚಿಗೂ ತಾಳೆಯಾಗದ ಹಿನ್ನೆಲೆ ಪೊಲೀಸರು, ಆರೋಪಿಗಳನ್ನು ಇಂದು ಮತ್ತೆ ವಶಕ್ಕೆ ಪಡೆದು ರೀಲ್ಸ್ನಲ್ಲಿ ಬಳಕೆಯಾಗಿರುವ ಮಚ್ಚು ತೋರಿಸುವಂತೆ ಸ್ಥಳ ಮಹಜರಿಗೆ ಒಳಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



