ಶಿರಾಡಿ ಘಾಟ್ ಭೂಕುಸಿತ, ವಾಹನ ಸಂಚಾರ ಸ್ಥಗಿತ: ಮಂಗಳೂರು ಕಡೆ ಹೋಗುವವರು ಬದಲಿ ಮಾರ್ಗ ಬಳಸಲು ಸೂಚನೆ; Video
ತಡರಾತ್ರಿ ಮರಗಳ ಸಮೇತ ರಸ್ತೆಗೆ ಅಡ್ಡಲಾಗಿ ಗುಡ್ಡ ಕುಸಿದ ಕಾರಣ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ.

ಹಾಸನ/ಸಕಲೇಶಪುರ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಭಾರಿ ಮಳೆಯ ಪರಿಣಾಮ ಕರಾವಳಿ, ಮಲೆನಾಡು, ಕೊಡಗು, ಹಾಸನ ಜಿಲ್ಲೆಗಳಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯವುಂಟಾಗಿದ್ದು, ಜನಜೀವನಕ್ಕೆ ಸಮಸ್ಯೆಯಾಗಿದೆ. ಹಲವು ಕಡೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ನಿರಂತರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂ ಕುಸಿತ ಸಂಭವಿಸಿದೆ. ಸಕಲೇಶಪುರ ತಾಲೂಕಿನ ಹೆಗ್ಗದ್ದೆ ಮಾರನಹಳ್ಳಿ ಬಳಿ ಭೂ ಕುಸಿತ ಸಂಭವಿಸಿದ ಕಾರಣ ಶಿರಾಡಿ ಘಾಟ್ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಬೆಂಗಳೂರು ಹಾಗೂ ಮಂಗಳೂರು ನಡುವೆ ಪ್ರಯಾಣಕ್ಕೆ ಬದಲಿ ಮಾರ್ಗ ಬಳಕೆಗೆ ಸೂಚನೆ ನೀಡಲಾಗಿದೆ.
ಸಕಲೇಶಪುರ ತಾಲ್ಲೂಕಿನ, ಮಾರನಹಳ್ಳಿ ಬಳಿ ಗುಡ್ಡ ಕುಸಿದ ಕಾರಣ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ತಡರಾತ್ರಿ ಮರಗಳ ಸಮೇತ ರಸ್ತೆಗೆ ಅಡ್ಡಲಾಗಿ ಗುಡ್ಡ ಕುಸಿದ ಕಾರಣ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ.
ಮಂಗಳೂರಿಗೆ ಕಡೆ ಹೋಗುವವರು ಬದಲಿ ಮಾರ್ಗ
ಮಂಗಳೂರು ಕಡೆಗೆ ತೆರಳುವ ವಾಹನಗಳಿಗೆ ಬೇಲೂರು ಮೂಲಕ ಚಾರ್ಮಾಡಿ ಘಾಟ್ ರಸ್ತೆ ಬಳಸುವಂತೆ ಸೂಚನೆ ನೀಡಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನ ಸವಾರರು ಕೊಡಗಿನ ಸಂಪಾಜೆ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಿ ಹಾಸನ ಡಿಸಿ ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.
ಕೊಡಗಿನಲ್ಲಿ ದಾಖಲೆ ಮಳೆ
ಕೊಡಗಿನಾದ್ಯಂತ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇಂದು ಶಿಕ್ಷಣ ಸಂಸ್ಥೆಗೆ ರಜೆ ಘೋಷಿಸಲಾಗಿದೆ.
ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣಾ ನದಿ ಮತ್ತು ಅದರ ಉಪನದಿಗಳಿಗೆ ನೀರಿನ ಒಳಹರಿವು ಗಮನಾರ್ಹವಾಗಿ ಹೆಚ್ಚಾಗಿದೆ, ಬೆಳಗಾವಿಯ ಕೆಲವು ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿ ಮತ್ತು ಸುತ್ತಮುತ್ತ ಸತತ ನಾಲ್ಕನೇ ದಿನವೂ ನಿರಂತರ ಮಳೆಯಾಗುತ್ತಲೇ ಇದೆ. ಬೆಳಗಾವಿಯಲ್ಲಿ ಮಳೆಯಿಂದಾಗಿ ಹಳೆಯ, ಮಣ್ಣಿನಿಂದ ನಿರ್ಮಿಸಲಾದ ಮನೆಗಳು ಕುಸಿಯಲು ಪ್ರಾರಂಭಿಸಿವೆ, ಮರಗಳು ಉರುಳಿವೆ, ಕೃಷಿ ಬೆಳೆಗಳು ಮತ್ತೆ ಮುಳುಗಿವೆ. ಬೆಳಗಾವಿಯ ಹೊರವಲಯದಲ್ಲಿರುವ ಕೃಷಿಭೂಮಿಗಳಲ್ಲಿ ಮೆಣಸಿನಕಾಯಿ, ಸಿಹಿ ಗೆಣಸು, ಬೆಂಡೆಕಾಯಿ, ಕಬ್ಬು ಮುಂತಾದ ಬೆಳೆಗಳು ನೀರಿನಲ್ಲಿ ಮುಳುಗಿ ರೈತರಿಗೆ ಭಾರಿ ನಷ್ಟವನ್ನುಂಟುಮಾಡಿವೆ.
ಪ್ರವಾಹದಿಂದಾಗಿ ಚಿಕ್ಕೋಡಿ ಉಪವಿಭಾಗದಾದ್ಯಂತ 11 ಸೇತುವೆಗಳು ಮುಳುಗಿ 22 ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದ್ದು, ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೊಪ್ಪದಲ್ಲಿ ಸಣ್ಣಪುಟ್ಟ ಭೂಕುಸಿತ
ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ರಸ್ತೆಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


