ಮಂಗಳೂರು: ಭಾರತದ ಅತಿದೊಡ್ಡ ಭೂಗತ LPG ಸಂಗ್ರಹಣಾಗಾರ ನಿರ್ಮಾಣ ಕಾರ್ಯ ಪೂರ್ಣ
ಇದು ದೇಶದಲ್ಲಿ ಎರಡನೇ ಭೂಗತ LPG ಸಂಗ್ರಹಣಾಗಾರವಾಗಿದೆ. ಇಂಧನ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಶುದ್ಧ ಶಕ್ತಿಯ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಮಂಗಳೂರು: ಮಂಗಳೂರಿನ ಬಾಲಾದಲ್ಲಿ 80,000 ಮೆಟ್ರಿಕ್ ಟನ್ ಸಾಮರ್ಥ್ಯದ ದೇಶದ ಅತಿದೊಡ್ಡ ಭೂಗತ LPG ಸಂಗ್ರಹಣಾಗಾರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಭಾರತದ ಇಂಧನ ಮೂಲಸೌಕರ್ಯ ವ್ಯವಸ್ಥೆಯಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಗಾಗಿ ಮೇಘಾ ಎಂಜಿನಿಯರಿಂಗ್ ಮತ್ತು ಮೂಲಸೌಕರ್ಯ ಲಿಮಿಟೆಡ್ (MEIL) ಅಭಿವೃದ್ಧಿಪಡಿಸಿದ ಈ ಸೌಲಭ್ಯವು ಭಾರತದ ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳನ್ನು ಬಲಪಡಿಸುವತ್ತ ಒಂದು ಮಹತ್ವದ ಹೆಜ್ಜೆಯಾಗಿದೆ.
ವಿಶಾಖಪಟ್ಟಣಂನಲ್ಲಿ ಕೂಡಾ ಇದೇ ರೀತಿಯ ಭೂಗತ ಸಂಗ್ರಹಣಾಗಾರವಿದ್ದು, ಇದು ದೇಶದಲ್ಲಿ ಎರಡನೇ ಭೂಗತ LPG ಸಂಗ್ರಹಣಾಗಾರವಾಗಿದೆ. ಇಂಧನ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಶುದ್ಧ ಶಕ್ತಿಯ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಈ ಸಂಗ್ರಹಣಾಗಾರದಲ್ಲಿ ಆರು ಲಕ್ಷ ಬ್ಯಾರೆಲ್ಗಳು ಅಥವಾ 60 ಮಿಲಿಯನ್ ಲೀಟರ್ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಸಂಗ್ರಹಿಸಬಹುದು. ಇದು 40,000 MT ಪ್ರೊಪೇನ್ ಮತ್ತು 60,000 MT ಬ್ಯುಟೇನ್ ಅನ್ನು ಸಂಗ್ರಹಿಸಲು ವಿನ್ಯಾಸಗೊಳಿಸಲಾದ ಎರಡು ಪ್ರತ್ಯೇಕ ಭೂಗತ ಕೋಣೆಗಳನ್ನು ಒಳಗೊಂಡಿದೆ.
ಈ ಸಂಗ್ರಹಾಗಾರವನ್ನು 854 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಜೂ 6ರಂದು ಎಲ್ಲ ಪ್ರಮುಖ ಪರೀಕ್ಷಾ ಹಂತಗಳಲ್ಲಿ ಉತ್ತೀರ್ಣವಾಗಿದೆ. ಈ ಸಂಗ್ರಹಾಗಾರ ಈಗ ಕಾರ್ಯಾಚರಣೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಜೂನ್ 6 ರಂದು MEIL ತನ್ನ ಅಧಿಕೃತ 'X' ಖಾತೆಯಲ್ಲಿ ತಿಳಿಸಿದೆ. ಅತ್ಯಂತ ನಿರ್ಣಾಯಕ ಹಂತವಾದ ಕ್ಯಾವರ್ನ್ ಅಕ್ಸೆಪ್ಟೆನ್ಸ್ ಪರೀಕ್ಷೆ (CAT) ಯನ್ನು ಮೇ 9 ರಿಂದ ಜೂನ್ 6 ರವರೆಗೆ ನಡೆಸಲಾಯಿತು. ಇದು ಕಠಿಣ ಮೂರು-ಹಂತದ ಪ್ರಕ್ರಿಯೆಯನ್ನು ಒಳಗೊಂಡಿತ್ತು.
ಸಂಗ್ರಹಾಗಾರದೊಳಗೆ ಗಾಳಿ ತುಂಬಿಸಿ ಒತ್ತಡವನ್ನು 8.310 kg/cm² ಗೆ ಹೆಚ್ಚಿಸಲಾಯಿತು. ಬಳಿಕ 100 ಗಂಟೆಗಳ ಸ್ಥಿರೀಕರಣ ಹಂತವನ್ನು ಅನುಸರಿಸಲಾಯಿತು. ಈ ಸಮಯದಲ್ಲಿ ಸೋರಿಕೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಜಲಭೂವೈಜ್ಞಾನಿಕ ಡೇಟಾವನ್ನು ಟ್ರ್ಯಾಕ್ ಮಾಡಲು ಎಲ್ಲ ದ್ವಾರಗಳನ್ನು ಮುಚ್ಚಲಾಯಿತು. ಕ್ರಮೇಣ ಒತ್ತಡ ಕಡಿಮೆ ಮಾಡಿ ಪರೀಕ್ಷಿಸಲಾಯಿತು. ಎಲ್ಲ ಹಂತಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಎಲ್ಪಿಜಿಯನ್ನು ಸುರಕ್ಷಿತವಾಗಿ ಸಂಗ್ರಹಿಸಲು ಸಿದ್ಧವಾಗಿದೆ ಎಂದು ದೃಢೀಕರಿಸಲಾಯಿತು.
ಅದ್ಭುತವಾಗಿ ವಿನ್ಯಾಸಗೊಳಿಸಲಾದ ಈ ಸಂಗ್ರಹಾಗಾರದಲ್ಲಿ 11,083 ಮೀಟರ್ ಉದ್ದದ ಪ್ರವೇಶ ಸುರಂಗವನ್ನು ಹೊಂದಿದೆ. ಮೇಲಿನ ಮತ್ತು ಕೆಳಗಿನ ವಾಟರ್ ಕರ್ಟೈನ್ಸ್ಗಳು ಕ್ರಮವಾಗಿ 578.2 ಮೀಟರ್ ಮತ್ತು 804.31 ಮೀಟರ್ ಅಳತೆ ಹೊಂದಿವೆ ಮತ್ತು 486.2 ಮೀಟರ್ ಉದ್ದದ ಸಂಪರ್ಕಿಸುವ ಸುರಂಗಗಳನ್ನು ಹೊಂದಿವೆ. 220 ಮೀಟರ್ ಆಳದ S1 ಮತ್ತು 225 ಮೀಟರ್ ಆಳದ S2 ಎಂಬ ಎರಡು ಮುಖ್ಯ ಸಂಗ್ರಹಣಾಗಾರಗಳಿವೆ. ವರ್ಟಿಕಲ್ ಶಾಫ್ಟ್ 164.1 ಮೀಟರ್ ವಿಸ್ತರಿಸಿದೆ.
ಮಂಗಳೂರು ಎಲ್ಪಿಜಿ ಸಂಗ್ರಹಾಗಾರವನ್ನು ಪೂರ್ಣಗೊಳಿಸುವುದು ದೇಶದ ಹೆಚ್ಚುತ್ತಿರುವ ಶುದ್ಧ ಇಂಧನದ ಅಗತ್ಯವನ್ನು ಪೂರೈಸಲು ಸಹಾಯ ಮಾಡುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು ಇಂಧನ ಪೂರೈಕೆಯಲ್ಲಿ ಭವಿಷ್ಯದಲ್ಲಿ ಉಂಟಾಗುವ ಯಾವುದೇ ಅಡಚಣೆಗಳನ್ನು ನಿಭಾಯಿಸುವ ದೇಶದ ಸಾಮರ್ಥ್ಯವನ್ನು ಬಲಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

