ಲೋಕಸಭಾ ಚುನಾವಣೆಗೆ ವಾಲ್ಮೀಕಿ ಹಗರಣದ ಹಣ ಬಳಕೆ ಆರೋಪ: ಬಳ್ಳಾರಿ ಶಾಸಕರು- ಸಂಸದರ ಮನೆ ಮೇಲೆ ED ದಾಳಿ
ಸಂಸದ ಇ. ತುಕಾರಾಂ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕ ಜೆ.ಎನ್ ಗಣೇಶ್, ಶಾಸಕ ಬಿ. ನಾಗೇಂದ್ರ ಅವರ ಆಪ್ತ ಗೋವರ್ಧನ್ ರೆಡ್ಡಿ ಸೇರಿದಂತೆ ಹಲವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ.

ಬಳ್ಳಾರಿ: ವಾಲ್ಮೀಕಿ ನಿಗಮದ ಹಗರಣದ ಹಣವನ್ನು ಬಳ್ಳಾರಿ ಚುನಾವಣೆಗೆ ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪದ ಮೇಲೆ ಇ.ಡಿ ಅಧಿಕಾರಿಗಳು ಸಂಸದ ಇ.ತುಕಾರಾಮ್, ಶಾಸಕ ಭರತ್ ರೆಡ್ಡಿ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ( ಇ.ಡಿ)ವು ಬುಧವಾರ ಬೆಳಗ್ಗೆ ದಾಳಿ ನಡೆಸಿದೆ. ಸಂಸದ ಇ. ತುಕಾರಾಂ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕ ಜೆ.ಎನ್ ಗಣೇಶ್, ಶಾಸಕ ಬಿ. ನಾಗೇಂದ್ರ ಅವರ ಆಪ್ತ ಗೋವರ್ಧನ್ ರೆಡ್ಡಿ ಸೇರಿದಂತೆ ಹಲವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಇ.ಡಿ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ದಾಳಿ ಸಂದರ್ಭದಲ್ಲಿ ಸಂಸದರು ಮತ್ತು ಶಾಸಕರು ತಮ್ಮ ನಿವಾಸಗಳಲ್ಲಿ ಇದ್ದರು ಎಂದು ತಿಳಿದು ಬಂದಿದೆ.
ಯಾವ ಪ್ರಕರಣದಲ್ಲಿ ಸಂಸದರು ಮತ್ತು ಶಾಸಕರ ಮನೆಗಳ ಮೇಲೆ ದಾಳಿ ನಡೆದಿದೆ ಎಂಬುದು ಖಚಿತವಾಗಿಲ್ಲ. ಆದರೆ, ನಾಗೇಂದ್ರ ಆಪ್ತ ಗೋವರ್ಧನ್ ರೆಡ್ಡಿ ಮನೆ ಮೇಲೆ ದಾಳಿ ನಡೆದಿರುವುದರಿಂದ ಇದು ವಾಲ್ಮೀಕಿ ನಿಗಮದ ಹಗರಣದ ತನಿಖೆಯ ಭಾಗವಾಗಿರಬಹುದು ಎಂದು ಹೇಳಲಾಗುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಹಣ ನೀಡಲು ನಿಗಮದ ಹಣವನ್ನು ಬಳಸಲಾಗಿದೆ ಎಂಬ ಆರೋಪವಿದ್ದು, ಸುಮಾರು 20 ಕೋಟಿ ಹಣವನ್ನು ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ, ಸಂಡೂರು, ಕಂಪ್ಲಿ ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಳಗಿನ ಜಾವ 4ರಿಂದ 5 ಗಂಟೆಯ ಸುಮಾರಿಗೆ ಸಂಸದ ಇ.ತುಕಾರಾಮ್, ಮಾಜಿ ಶಾಸಕ ನಾಗೇಂದ್ರ ಮತ್ತು ಅವರ ಆಪ್ತ ಕಾರ್ಯದರ್ಶಿ (ಪಿಎ) ಗೋವರ್ಧನ್, ಶಾಸಕ ಭರತ್ ರೆಡ್ಡಿ, ಎನ್.ಟಿ.ಶ್ರೀನಿವಾಸ್ ಮತ್ತು ಕಂಪ್ಲಿ ಗಣೇಶ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಹಲವು ದಾಖಲೆಗಳು ಹಾಗೂ ಲ್ಯಾಪ್‌ಟಾಪ್, ಮೊಬೈಲ್, ಬ್ಯಾಂಕ್ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಎಂಟು ತಂಡಗಳಲ್ಲಿ ಇಡಿ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಶಾಸಕರು ಹಾಗೂ ಸಂಸದರ ನಿವಾಸ ಹಾಗೂ ಗೃಹ ಕಚೇರಿಗಳಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಬಳ್ಳಾರಿ ಗ್ರಾಮಾಂತರ, ಕಂಪ್ಲಿ, ಕೂಡ್ಲಿಗಿ, ಸಂಡೂರು ಕ್ಷೇತ್ರಗಳಲ್ಲಿ ವಾಲ್ಮೀಕಿ ಹಗರಣದ ಹಣ ಹಂಚಿಕೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಪ್ರತಿ ಮತದಾರರಿಗೆ ಶಾಸಕರ ಮೂಲಕ ಮತದಾರರಿಗೆ ಇನ್ನೂರು ರೂಪಾಯಿಯಂತೆ ಹಣ ಹಂಚಿಕೆ ಮಾಡಲಾಗಿದೆ. ಪ್ರಮುಖ ಪಾತ್ರದಲ್ಲಿ ಮಾಜಿ ಸಚಿವ ನಾಗೇಂದ್ರ ಅವರಿದ್ದು, ಶಾಸಕ ಮತ್ತು ಸಂಸದರು ಈ ವಹಿವಾಟಿನಲ್ಲಿ ಭಾಗಿಯಾಗಿರಬಹುದು ಎಂದು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



