ಹೆಣದ ಮೇಲೆ ಬಿಜೆಪಿ ರಾಜಕೀಯ; ಸಂಭ್ರಮಾಚರಣೆ, ಸರ್ಕಾರಿ ಕಾರ್ಯಕ್ರಮ ಮುಂದೂಡಿಕೆ: ಡಿ.ಕೆ ಶಿವಕುಮಾರ್
ಇಲ್ಲಿ ಯಾರ ಮೇಲೂ ದೂಷಣೆ ಮಾಡಲು ಆಗುವುದಿಲ್ಲ. ಈ ರೀತಿ ಏಕಾಏಕಿ, ಕುಟುಂಬ ಸಮೇತರಾಗಿ ಮಕ್ಕಳನ್ನು ಕರೆದುಕೊಂಡು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎಂದು ಯಾರು ನಿರೀಕ್ಷೆ ಮಾಡಿದ್ದರು?

ಬೆಂಗಳೂರು: ಬಿಜೆಪಿ ಹೆಣದ ಮೇಲೆ ರಾಜಕೀಯ ಮಾಡುತ್ತಿದೆ. ಪೊಲೀಸರು ಮುಂಜಾಗೃತಾ ಕ್ರಮವಾಗಿ ತೆರೆದ ವಾಹನ ಮೆರವಣಿಗೆಯನ್ನು ರದ್ದುಗೊಳಿಸಿದ ನಿರ್ಧಾರವನ್ನು ಇದೇ ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಈಗ ಸರ್ಕಾರದ ಮೇಲೆ ಆರೋಪ ಮಾಡುತ್ತಿವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಬಂಧ ಸಿಎಂ ಗೃಹ ಕಚೇರಿ ಕೃಷ್ಣಾ ಆವರಣದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ರಾತ್ರಿ ಪ್ರತಿಕ್ರಿಯೆ ನೀಡಿದರು.
ಕಾಲ್ತುಳಿತದ ಸಾವುಗಳಿಗೆ ಸರ್ಕಾರವೇ ಹೊಣೆ ಎಂಬ ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ, "ಇಂದು ಬೆಳಗ್ಗೆ ವಿಮಾನ ನಿಲ್ದಾಣದಿಂದಲೇ ಮೆರವಣಿಗೆ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ತೆರೆದ ವಾಹನದಲ್ಲಿ ಮೆರವಣಿಗೆಗೆ ಅವಕಾಶ ನೀಡಬಾರದು ಎಂದು ನಮ್ಮ ಪೊಲೀಸ್ ಅಧಿಕಾರಿಗಳು ನಮಗೆ ಸಲಹೆ ನೀಡಿದರು. ಈ ತೀರ್ಮಾನವನ್ನು ಖಂಡಿಸಿದ್ದ ಬಿಜೆಪಿ, ಪರಮೇಶ್ವರ್ ಅವರನ್ನು ಅಸಮರ್ಥ ಗೃಹಮಂತ್ರಿ ಎಂದು ಕರೆದು ಮುಂಜಾಗೃತಾ ಕ್ರಮವಾಗಿ ಪೊಲೀಸರು ಕೈಗೊಂಡ ಕ್ರಮವನ್ನು ಎಕ್ಸ್ ಖಾತೆಯಲ್ಲಿ ಟೀಕಿಸಿತ್ತು" ಎಂದು ತಿಳಿಸಿದರು.
ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ನಾನು ವಿಮಾನ ನಿಲ್ದಾಣಕ್ಕೆ ತೆರಳಿದೆ. ವಿಧಾನ ಸೌಧದ ಕಾರ್ಯಕ್ರಮದ ವೇಳೆ ಕಬ್ಬನ್ ಪಾರ್ಕ್ ಗೇಟ್ ಅನ್ನು ಮುಚ್ಚಿ ಅಗತ್ಯವಾದ ಕ್ರಮ ಕೈಗೊಳ್ಳಲಾಯಿತು" ಎಂದು ವಿವರಿಸಿದರು.
"ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ಸೇರುತ್ತಾರೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಜನದಟ್ಟಣೆ ಹೆಚ್ಚಾದ ಪರಿಣಾಮ ನಾವು 2 ತಾಸುಗಳ ಕಾಲ ಮೆಟ್ರೋ ಸಂಚಾರವನ್ನು ನಿಲ್ಲಿಸಿದ್ದೆವು. ಇಷ್ಟೆಲ್ಲಾ ಮಾಡಿದರೂ ಬಿಜೆಪಿ ಇದರಲ್ಲಿ ರಾಜಕಾರಣ ಮಾಡುತ್ತಿದೆ" ಎಂದರು.
"ಇದೇ ಸಿ.ಟಿ ರವಿ ಹಾಗೂ ಬಿಜೆಪಿ ಏನು ಟ್ವಿಟ್ ಮಾಡಿದ್ದಾರೆ. ಜನರ ಈ ಪ್ರೀತಿ ವ್ಯಾಮೋಹವನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಈ ದುರ್ಘಟನೆಯಿಂದ ನಮಗೂ ನೋವಾಗಿದೆ. ಐ ಆಮ್ ಸಾರಿ, ಈ ರೀತಿ ಆಗಬಾರದಿತ್ತು" ಎಂದು ವಿಷಾದ ವ್ಯಕ್ತಪಡಿಸಿದರು.
18 ವರ್ಷಗಳ ಸುದೀರ್ಘ ಅವಧಿ ಬಳಿಕ ತಮ್ಮ ನೆಚ್ಚಿನ ತಂಡ ಗೆದ್ದಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಜನ ತಮ್ಮ ಕೆಲಸ, ಕಾರ್ಯ ಬಿಟ್ಟು ಕ್ರಿಕೆಟ್ ಆಟಗಾರರನ್ನು ಕಣ್ತುಂಬಿಕೊಳ್ಳಲು ಬಂದಿದ್ದಾರೆ. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ದುರ್ಘಟನೆ ಹಿನ್ನೆಲೆಯಲ್ಲಿ ನಾಳೆ ಸಚಿವ ಸಂಪುಟ ಸಭೆ ಹೊರತು ಪಡಿಸಿ ವಿಶ್ವ ಪರಿಸರ ದಿನ ಸೇರಿದಂತೆ ಉಳಿದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ" ಎಂದು ತಿಳಿಸಿದರು.
ಗುಪ್ತಚರ ಇಲಾಖೆ ವೈಫಲ್ಯವೇ ಎಂದು ಕೇಳಿದಾಗ, "ಇಲ್ಲಿ ಯಾರ ಮೇಲೂ ದೂಷಣೆ ಮಾಡಲು ಆಗುವುದಿಲ್ಲ. ಈ ರೀತಿ ಏಕಾಏಕಿ, ಕುಟುಂಬ ಸಮೇತರಾಗಿ ಮಕ್ಕಳನ್ನು ಕರೆದುಕೊಂಡು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎಂದು ಯಾರು ನಿರೀಕ್ಷೆ ಮಾಡಿದ್ದರು?" ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


