ರಾಜ್ಯದ ಅರಣ್ಯ ಪ್ರದೇಶದೊಳಗೆ ಜಾನುವಾರು ಮೇಯಿಸುವುದಕ್ಕೆ ನಿಷೇಧ: ಈಶ್ವರ್ ಖಂಡ್ರೆ ಆದೇಶ
ಕಾಡಿನೊಳಗೆ ಹೋಗುವ ದನಗಾಹಿಗಳು ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಪರಿಹಾರ ನೀಡಲೂ ನಿಯಮದಲ್ಲಿ ಅವಕಾಶ ಇರುವುದಿಲ್ಲ.

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲಾ ಅರಣ್ಯ ಪ್ರದೇಶದೊಳಗೆ ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸಲು ನಿಯಮಾನುಸಾರ ಕ್ರಮ ವಹಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿರುವ ಸಚಿವರು, ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳನ್ನು ಅರಣ್ಯ ಪ್ರದೇಶದೊಳಗೆ ಮೇಯಲು ಬಿಡುವುದರಿಂದ ಕಾಡಿನಲ್ಲಿ ಆಗಷ್ಟೇ ಮೊಳಕೆ ಒಡೆದ ಚಿಕ್ಕಪುಟ್ಟ ಸಸಿಗಳನ್ನು ಸಾಕು ಪ್ರಾಣಿಗಳು ತಿಂದು ಹಾಕುತ್ತಿದ್ದು, ಹೊಸ ಗಿಡಗಳು ಬೆಳೆಯದೇ ಅರಣ್ಯ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು ಪರಿಸರಪ್ರೇಮಿಗಳು ಅಭಿಪ್ರಾಯಪಟ್ಟಿರುವುದಾಗಿ ತಿಳಿಸಿದ್ದಾರೆ.
ಅಪಾರ ಸಂಖ್ಯೆಯಲ್ಲಿ ಸಾಕುಪ್ರಾಣಿಗಳು ಕಾಡಿನಲ್ಲಿ ಮೇಯುವುದರಿಂದ ಕಾಡಿನಲ್ಲಿರುವ ಸಸ್ಯಹಾರಿ ಪ್ರಾಣಿಗಳಿಗೂ ಮೇವಿನ ಕೊರತೆ ಉಂಟಾಗುತ್ತದೆ. ಅಲ್ಲದೇ ನಾಡಿನಿಂದ ಕಾಡಿಗೆ ಮೇಯಲು ಹೋಗುವ ಪ್ರಾಣಿಗಳಿಂದ ವನ್ಯಜೀವಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ. ಇದು ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಳವಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಕಾಡಿನೊಳಗೆ ಹೋಗುವ ದನಗಾಹಿಗಳು ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಪರಿಹಾರ ನೀಡಲೂ ನಿಯಮದಲ್ಲಿ ಅವಕಾಶ ಇರುವುದಿಲ್ಲ. ಹೀಗಾಗಿ ಅರಣ್ಯ ಪ್ರದೇಶಗಳಲ್ಲಿ ಜಾನುವಾರು ಮೇಯಿಸುವುದನ್ನು ನಿಷೇಧಿಸಬೇಕು ಎಂದು ಪರಿಸರವಾದಿಗಳು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಾಡಿನಲ್ಲಿರುವ ವನ್ಯಜೀವಿಗಳು ಮೇಯಲು ಹೋದ ದನಕರುಗಳನ್ನು ಕೊಂದಾಗ, ಆಕ್ರೋಶಗೊಂಡು ಕೆಲವರು ಮೃತ ಜಾನುವಾರುಗಳಿಗೆ ವಿಷಹಾಕುವ ಕಾರಣ ವನ್ಯಜೀವಿಗಳು ಸಾವಿಗೀಡಾಗುತ್ತವೆ. ಇದಕ್ಕೆ ಇತ್ತೀಚೆಗೆ ಹೂಗ್ಯಂ ವಲಯದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಸಾವಿಗೀಡಾಗಿರುವುದನ್ನು ಪರಿಸರ ಪ್ರೇಮಿಗಳು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ.
ತಮಿಳುನಾಡಿನ ಅರಣ್ಯದೊಳಗೆ ಸಾಕು ಪ್ರಾಣಿಗಳನ್ನು ಮೇಯಿಸುವುದರ ವಿರುದ್ಧ ಮದ್ರಾಸ್ ಹೈಕೋರ್ಟ್ ತೀರ್ಪಿನ ಬಳಿಕ, ನೆರೆಯ ರಾಜ್ಯದಿಂದಲೂ ನಮ್ಮ ರಾಜ್ಯಕ್ಕೆ ದನಕರುಗಳನ್ನು ತಂದು ಕಾಡಿನಲ್ಲಿ ಮೇಯಿಸಲಾಗುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯದ ಅರಣ್ಯಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಅರಣ್ಯ ಪ್ರದೇಶದೊಳಗೆ ಸಾಕು ಪ್ರಾಣಿಗಳನ್ನು ಮೇಯಲು ಬಿಡುವುದನ್ನು ನಿರ್ಬಂಧಿಸಲು ಮತ್ತು ನಿಷೇಧಿಸಲು ನಿಯಮಾನುಸಾರ ಕ್ರಮವಹಿಸಲು ಸಚಿವರು ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



