ಭೂಸ್ವಾಧೀನ ವಿರೋಧಿ ಪ್ರತಿಭಟನೆ: ನಟ ಪ್ರಕಾಶ್ ರೈ ಆಂಧ್ರ, ತಮಿಳುನಾಡಿನಲ್ಲೇಕೆ ಹೋರಾಟ ನಡೆಸುತ್ತಿಲ್ಲ- MB ಪಾಟೀಲ್ ಕಿಡಿ
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಹೋರಾಟದ ಹಕ್ಕಿದೆ. ನಾನೂ ಹೋರಾಟ ಮಾಡಿಕೊಂಡೇ ಬಂದಿರುವವನು. ಈ ವಿಷಯ ಬಹುಭಾಷಾ ನಟ ಪ್ರಕಾಶ್ ರೈಗೆ ಗೊತ್ತಿರಲಿಕ್ಕಿಲ್ಲ.

ಬೆಂಗಳೂರು: ಪ್ರಕಾಶ್ ರೈ ಅವರು ನಮಗಿಂತ ಆಂಧ್ರದಲ್ಲಿ ಹೆಚ್ಚು ಪ್ರಭಾವಿಗಳು ಮತ್ತು ಜನಪ್ರಿಯರು. ಆದ್ದರಿಂದ ಅವರು ಬೇರೆಬೇರೆ ರಾಜ್ಯಗಳಲ್ಲೂ ರೈತರ ಭೂಸ್ವಾಧೀನದ ವಿರುದ್ಧ ಹೋರಾಟ ಮಾಡಿದರೆ ಒಳ್ಳೆಯದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕುಟುಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಹೋರಾಟದ ಹಕ್ಕಿದೆ. ನಾನೂ ಹೋರಾಟ ಮಾಡಿಕೊಂಡೇ ಬಂದಿರುವವನು. ಈ ವಿಷಯ ಬಹುಭಾಷಾ ನಟ ಪ್ರಕಾಶ್ ರೈಗೆ ಗೊತ್ತಿರಲಿಕ್ಕಿಲ್ಲ. ಬರಪೀಡಿತ ವಿಜಯಪುರ ಜಿಲ್ಲೆಯನ್ನು ನಾನು ಹೋರಾಡಿಯೇ ನೀರಾವರಿ ಭೂಮಿಯನ್ನಾಗಿ ಮಾಡಿದ್ದೇನೆ ಎಂದಿದ್ದಾರೆ.
ನಮ್ಮಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕಿಗಾಗಿ ಕೇವಲ 1,282 ಎಕರೆ ಮಾತ್ರ ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಿದ್ದೇವೆ. ಪಕ್ಕದ ಆಂಧ್ರ ಪ್ರದೇಶದಲ್ಲಿ ಇದೇ ಉದ್ದೇಶಕ್ಕಾಗಿ ನಮ್ಮ ಗಡಿಗೆ ಅಂಟಿಕೊಂಡಿರುವ ಮಡಕಶಿರಾದಿಂದ ಪೆನುಗೊಂಡದವರೆಗೆ 10 ಸಾವಿರ ಎಕರೆಯನ್ನು ಸ್ವಾಧೀನಪಡಿಸಿಕೊಂಡು, ಉಚಿತವಾಗಿ ಕೊಡುವುದಾಗಿ ಹೇಳಲಾಗುತ್ತಿದೆ.
ಅಲ್ಲದೆ, ಆಂಧ್ರದಲ್ಲಿ ಬೇರೆಬೇರೆ ಕೈಗಾರಿಕಾ ಉದ್ದೇಶಗಳಿಗೆ 45 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇನ್ಫೋಸಿಸ್, ಕಾಗ್ನಿಜೆಂಟ್, ಟಿಸಿಎಸ್ ಮುಂತಾದ 100 ಕಂಪನಿಗಳಿಗೆ ವಿಶಾಖಪಟ್ಟಣದಲ್ಲಿ ಎಕರೆಗೆ ಬರೀ 99 ಪೈಸೆಯಂತೆ ಭೂಮಿ ಕೊಡಲಾಗಿದೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಪ್ರಕಾಶ್ ರೈಗೆ ಇವೆಲ್ಲ ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸಿದರು.
ತಮಿಳುನಾಡಿನ ಹೊಸೂರು ನಮ್ಮಿಂದ ಕೇವಲ 50 ಕಿ.ಮೀ. ದೂರದಲ್ಲಿದೆ. ಅಲ್ಲಿನ ಸರಕಾರ ಈಗ ಆ ಪ್ರದೇಶವನ್ನು ಕೇಂದ್ರೀಕರಿಸಿ ಕೈಗಾರಿಕಾ ಬೆಳವಣಿಗೆಯನ್ನು ವಿಸ್ತರಿಸುತ್ತಿದೆ. ಜತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ನಿರ್ಮಿಸಲು ಮುಂದಾಗಿದೆ. ಇದಕ್ಕೆಲ್ಲ ಅದೂ ಸಹ ಅಗ್ಗದ ದರದಲ್ಲಿ ಭೂಮಿ ಕೊಡುತ್ತಿದೆ.
ಆಂಧ್ರ ಮತ್ತು ತಮಿಳುನಾಡಿನಲ್ಲಿ ಉದ್ಯಮ ನಡೆಸುತ್ತಿರುವವರಿಗೆ ಬೆಂಗಳೂರು ಬರೀ ಆಶ್ರಯತಾಣವಾಗಿ ಕಾಣುತ್ತಿದೆ. ಆಂಧ್ರದ ಯೋಜನೆ ಗೆದ್ದರೆ, ನಮ್ಮ ರಕ್ಷಣಾ ಮತ್ತು ಏರೋಸ್ಪೇಸ್ ಕಂಪನಿಗಳು ಅಲ್ಲಿಗೆ ಹೋಗಬಹುದು. ಇದರಿಂದ ರಾಜ್ಯಕ್ಕೆ ಆಗುವ ನಷ್ಟವನ್ನು ಅಂದಾಜು ಮಾಡಲೂ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕವು ದೇಶದ ರಕ್ಷಣೆ ಮತ್ತು ವೈಮಾಂತರಿಕ್ಷ ವಹಿವಾಟಿನಲ್ಲಿ ಶೇಕಡ 65ರಷ್ಟು ಪಾಲು ಹೊಂದಿದ್ದು, ಈ ವಲಯದಲ್ಲಿನ ನಮ್ಮ ಕಾರ್ಯ ಪರಿಸರವು ಜಾಗತಿಕವಾಗಿ ತೃತೀಯ ಸ್ಥಾನದಲ್ಲಿದೆ. ನಮ್ಮಲ್ಲಿ ಈ ವಲಯದ ಎಚ್ಎಎಲ್, ಸ್ಯಾಫ್ರಾನ್, ಬೋಯಿಂಗ್, ಏರ್ ಬಸ್, ಕಾಲಿನ್ಸ್, ಲಾಕ್ ಹೀಡ್ ಮಾರ್ಟಿನ್ ಮುಂತಾದ ದೈತ್ಯ ಕಂಪನಿಗಳಿವೆ.
ದೇವನಹಳ್ಳಿಯಲ್ಲಿರುವ ವಿಮಾನ ನಿಲ್ದಾಣದ ಪಕ್ಕದಲ್ಲೇ ಏರೋಸ್ಪೇಸ್ ಪಾರ್ಕ್ ಇದೆ. ಇದಕ್ಕೆ ಮತ್ತಷ್ಟು ಬಲ ತುಂಬಲೆಂದೇ ಈಗ ಅದರ ಸನಿಹದಲ್ಲೇ ಉದ್ದೇಶಿತ ಪಾರ್ಕ್ ಸ್ಥಾಪಿಸುವ ಚಿಂತನೆ ಇದೆ. ಸಂತ್ರಸ್ತ ರೈತರಿಗೆ 2013ರ ಭೂಸ್ವಾಧೀನ ಕಾಯ್ದೆಯ ಪ್ರಕಾರವೇ ನ್ಯಾಯಯುತ ಪರಿಹಾರ ಕೊಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



