JDS ಮುಖಂಡ ಬೆಳವಾಡಿ ಶಿವಮೂರ್ತಿ ಪುತ್ರನ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿಹಾಕಲಾಗಿದೆ: ಸ್ನೇಹಮಯಿ ಕೃಷ್ಣ ಆರೋಪ
ಮೃತ ಪ್ರದೀಪ್ ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ಅವರ ಮಗನಾಗಿದ್ದು, ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಮೈಸೂರು: ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ಅವರ ಪುತ್ರ ಪ್ರದೀಪ್ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿಹಾಕಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಭಾನುವಾರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಗನ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಹೋರಾಟ ನಡೆಸಿ ಶಿಕ್ಷೆ ಕೊಡಿಸಬೇಕಾಗಿದ್ದ ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ಅವರು, ಮಗನ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿ ಭವ್ಯ ಅವರನ್ನು ರಕ್ಷಣೆ ಮಾಡಲು ಸಹಕರಿಸಿ, ಸೊಸೆ ಮತ್ತು ಮೊಮ್ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ. ಈ ಮೂಲಕ ಸುಳ್ಳು ಡೆತ್ ನೋಟ್ ಸೃಷ್ಟಿಸಿಕೊಂಡು ಮಗನ ಆಸ್ತಿ ಕಬಳಿಸಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೃತ ಪ್ರದೀಪ್ ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ಅವರ ಮಗನಾಗಿದ್ದು, ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೂ ಸಹ ನಗರದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಉಪ ಪೊಲೀಸ್ ನಿರೀಕ್ಷಕಿಯಾಗಿದ್ದ ಭವ್ಯ ಅವರು ಆತನೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡು ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದುದ್ದಲ್ಲದೇ, ಎರಡನೇ ಮದುವೆಯಾಗಲು ಒಪ್ಪಿಗೆ ನೀಡುವಂತೆ ಪ್ರತೀಪ್‌ನ ಮನೆಯವರಿಗೆ ಅದರಲ್ಲೂ ಪ್ರತೀಪ್‌ನ ಪತ್ನಿ ನೇಹಾ ಅವರಿಗೆ ಒತ್ತಡ ಹಾಕಿದ್ದರು. ಆ ವೇಳೆ ಅವರು ಒಪ್ಪದ ಕಾರಣ, ಭವ್ಯ ಅವರು ಮದುವೆಯಾಗಲು ನಿರಂತರವಾಗಿ ಒತ್ತಡ ಹೇರುತ್ತಿದ್ದರು. ಹೀಗಾಗಿ ಮಾನಸಿಕ ಒತ್ತಡಕ್ಕೆ ಒಳಗಾದ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದರು.
ಮಗನ ಸಾವಿಗೆ ಕಾರಣರಾದ ಭವ್ಯ ಅವರನ್ನು ರಕ್ಷಣೆ ಮಾಡಲು ಶಿವಮೂರ್ತಿ ಪ್ರಯತ್ನ ನಡೆಸುತ್ತಿದ್ದಾರೆ. ಅಲ್ಲದೇ ತಮ್ಮ ಮಗನ ಮೇಲೆ ಬಹಳ ಪ್ರೀತಿ, ಅಭಿಮಾನ ಇದೆ ಎಂಬಂತೆ ನಾಟಕವಾಡಿದ್ದಾರೆ. ಆತನ ಸಾವಿನಿಂದ ಬಹಳ ನೊಂದಿದ್ದೇನೆ ಎಂಬಂತೆ ಸುಳ್ಳು ಮುಖವಾಡ ಧರಿಸಿ, ಪ್ರದೀಪ್'ನ ತಾತ್ಕಾಲಿಕ ಪ್ರತಿಮೆ, ಸಮಾಧಿಯನ್ನು ಸ್ಥಾಪಿಸಿ, ಮಗನ ಶಾಶ್ವತ ಪ್ರತಿಮೆ ಮಾಡಲು ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಮುಂಗಡ ಹಣ ನೀಡಿದ್ದ ಬೆಳವಾಡಿ ಶಿವಮೂರ್ತಿ ನಾವೊಬ್ಬ ಗೋಮುಖ ವ್ಯಾಘ್ರ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಇನ್ನು ಸ್ವಂತ ಸೊಸೆ ನೇಹಾ ಹಾಗೂ ಮೊಮ್ಮಕ್ಕಳನ್ನು ಮನೆಯಿಂದ ಹೊರ ಹೋಗುವಂತೆ ಮಾಡಿರುವ ಶಿವಮೂರ್ತಿ ಮತ್ತು ಅವರ ಮನೆಯವರು, ಮಗನ ಸಾವಿಗೆ ಕಾರಣರಾದ ಭವ್ಯ ಅವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು, ಆಕೆಯೇ ನಿಜವಾದ ಸೊಸೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಭವ್ಯ ಅವರು ಕೂಡ ಮುದುವೆ ಆಗಿದೆ ಎಂಬಂತೆ ತಾಳಿ, ಕಾಲುಂಗರ ಹಾಕಿಕೊಂಡು ಶಿವಮೂರ್ತಿ ಅವರ ಮನೆ ಸೊಸೆ ಎಂಬಂತೆ ಬಿಂಬಿಸಿಕೊಂಡು ಮನೆಯ ಎಲ್ಲಾ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಅನ್ಯಾಯದ ಬಗ್ಗೆ ನೇಹಾ ಅವರು ಮಾತನಾಡದಂತೆ ತಡೆದಿರುವುದನ್ನು ಗಮನಿಸಿದರೆ, ರಾಜಕೀಯವಾಗಿ ಶಿವಮೂರ್ತಿ ಮತ್ತು ಪೊಲೀಸ್ ಅಧಿಕಾರಿಯಾಗಿ ಭವ್ಯರವರು ಎಷ್ಟು ಪ್ರಭಾವಿಗಳು ಎಂಬುದು ಗೊತ್ತಾಗುತ್ತದೆ. ಏನೇ ಆದರೂ ನೇಹಾ ಮತ್ತು ಅವರ ಮಕ್ಕಳಿಗೆ ನ್ಯಾಯ ಕೊಡಿಸಲು ಸಿದ್ಧನಿದ್ದೇನೆ. ಮೈಸೂರು ಪೊಲೀಸ್ ಆಯುಕ್ತರು ಪ್ರಕರಣವನ್ನು ಪುನರಾರಂಭಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸತ್ಯಕ್ಕೆ ಜಯ ಸಿಗಬೇಕು. ನೇಹಾ ಮತ್ತು ಅವರ ಮಕ್ಕಳಿಗೆ ನ್ಯಾಯದ ಅಗತ್ಯವಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



