ಶೀಘ್ರದಲ್ಲೇ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ; 154 ಎಕರೆ ಸ್ವಾಧೀನ: ಸಚಿವ ಎಂಬಿ ಪಾಟೀಲ್
154 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಪೂರ್ಣ

ಬೆಂಗಳೂರು: ಬಾಂಗ್ಲಾದೇಶದಲ್ಲಿ ಉಂಟಾಗಿರುವ ರಾಜಕೀಯ ಭಿಕ್ಕಿಟ್ಟಿನ ಹಿನ್ನೆಲೆಯಲ್ಲಿ ಜೀನ್ಸ್ ಉದ್ಯಮವನ್ನು ಹೆಚ್ಚಿಸಲು ಅವಕಾಶ ಸಿಕ್ಕಿದ್ದು, ಬಳ್ಳಾರಿ ಸಮೀಪದ ಸಂಜೀವರಾಯನಕೋಟೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಜೀನ್ಸ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಗುರುವಾರ ಘೋಷಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಭರವಸೆಯನ್ನು ಈಡೇರಿಸಲು ಈ ಯೋಜನೆಗಾಗಿ ಈಗಾಗಲೇ 154 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
'ಉದ್ದೇಶಿತ ಪಾರ್ಕ್ನಲ್ಲಿ ಜಾಗತಿಕವಾಗಿ ಹೆಸರಾಂತ ಕಂಪನಿಗಳು ತಮ್ಮ ಕಾರ್ಯಾಚರಣೆಗಳನ್ನು ಆರಂಭಿಸುವ ನಿರೀಕ್ಷೆಯಿದೆ. ಬಾಂಗ್ಲಾದೇಶದಲ್ಲಿನ ಅಸ್ಥಿರ ಪರಿಸ್ಥಿತಿಯು ಹೂಡಿಕೆದಾರರು ಮತ್ತು ರಫ್ತುದಾರರನ್ನು ಪರ್ಯಾಯ ಅವಕಾಶಗಳತ್ತ ಗಮನ ಹರಿಸಲು ಪ್ರೇರೇಪಿಸಿದೆ. ಹೀಗಾಗಿ, ಬಳ್ಳಾರಿ ಅನುಕೂಲಕರ ತಾಣವಾಗಿ ಹೊರಹೊಮ್ಮಿದೆ. ಜೀನ್ಸ್ ವಲಯದಲ್ಲಿ ಗಮನಾರ್ಹ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ನಾವು ಇದನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳುವ ಗುರಿಯನ್ನು ಹೊಂದಿದ್ದೇವೆ' ಎಂದು ತಮ್ಮ ಕಚೇರಿಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ 500ಕ್ಕೂ ಹೆಚ್ಚು ಜೀನ್ಸ್ ತಯಾರಿಕಾ ಘಟಕಗಳಿದ್ದು, ಇದು ಹತ್ತಾರು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಕೈಗಾರಿಕಾ ಇಲಾಖೆಯು ಜವಳಿ ಇಲಾಖೆಯ ನೆರವಿನೊಂದಿಗೆ ಈ ಪ್ರದೇಶವನ್ನು ಸಂಘಟಿತ ರಫ್ತು ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಯೋಜಿಸಿದೆ. ಜೀನ್ಸ್ ಉತ್ಪಾದನಾ ಘಟಕಗಳಿಗೆ ಸಂಭವನೀಯ ಪ್ರೋತ್ಸಾಹ ಆಯ್ಕೆಗಳ ಕುರಿತು ಚರ್ಚಿಸಲು ಜವಳಿ ಸಚಿವರೊಂದಿಗೆ ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದರು.
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಬಳ್ಳಾರಿಯ ಜೀನ್ಸ್ ಉದ್ಯಮದ ಕಾರ್ಮಿಕರು ಮತ್ತು ಮಾಲೀಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸುವ ಭರವಸೆ ನೀಡಿದ್ದರು ಮತ್ತು ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2023ರ ಆಗಸ್ಟ್ 1 ರಂದು ಕೈಗಾರಿಕಾ ಇಲಾಖೆಗೆ ಪತ್ರ ಬರೆದಿದ್ದರು.
ಎಂಬಿ ಪಾಟೀಲ್ ಅವರ ಪ್ರಕಾರ, ಸದ್ಯದ ಭೌಗೋಳಿಕ ರಾಜಕೀಯ ಪರಿಸ್ಥಿತಿಯು ಈ ದೃಷ್ಟಿಯನ್ನು ಸಾಕಾರಗೊಳಿಸಲು ಅನುಕೂಲಕರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ರ ಫೆಬ್ರುವರಿಯಲ್ಲಿ ಮಂಡಿಸಿದ ರಾಜ್ಯ ಬಜೆಟ್ನಲ್ಲಿ ಈ ಉಪಕ್ರಮವನ್ನು ಘೋಷಿಸಿದರು. ಬಳ್ಳಾರಿಯ ಜೀನ್ಸ್ ಉದ್ಯಮವನ್ನು ರಚನಾತ್ಮಕ ಚೌಕಟ್ಟಿನಲ್ಲಿ ಜಾಗತಿಕ ಗುಣಮಟ್ಟಕ್ಕೆ ಏರಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




