ಪೊಲೀಸ್ ಠಾಣೆಯಲ್ಲೇ ರಾಸಲೀಲೆ: ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ವಿರುದ್ಧ ಮತ್ತೊಂದು ದೂರು ದಾಖಲು
ಅಮಾನತುಗೊಂಡು ಜೈಲು ಪಾಲಾಗಿರುವ ಡಿವೈಎಸ್‌ಪಿ ವಿರುದ್ಧ ಮತ್ತೋರ್ವ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು: ದೂರು ನೀಡಲೆಂದು ಪೊಲೀಸ್ ಠಾಣೆಗೆ ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅಮಾನತುಗೊಂಡು ನ್ಯಾಯಾಂಗ ಬಂಧನದಲ್ಲಿರುವ ಡಿವೈಎಸ್‌ಪಿ ಎ ರಾಮಚಂದ್ರಪ್ಪ ವಿರುದ್ಧ ಮತ್ತೊಬ್ಬ ಮಹಿಳೆ ಗುರುವಾರ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಕೊರಟಗೆರೆ ತಾಲ್ಲೂಕಿನ ಮಹಿಳೆಯೊಬ್ಬರು ಈ ಸಂಬಂಧ ಗುರುವಾರ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ತಮ್ಮ ಕಚೇರಿಯಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಬಂಧಿತರಾಗಿದ್ದ ಡಿವೈಎಸ್‌ಪಿ ಎ ರಾಮಚಂದ್ರಪ್ಪ ಅವರನ್ನು ಜೆಎಂಎಫ್‌ಸಿ ನ್ಯಾಯಾಲಯ ಜನವರಿ 4ರಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಲೈಂಗಿಕ ದೌರ್ಜನ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ರಾಮಚಂದ್ರಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಿದ್ದರು. ನ್ಯಾಯಾಂಗ ಬಂಧನದ ಆದೇಶದ ನಂತರ ರಾಮಚಂದ್ರಪ್ಪ ಅವರನ್ನು ತಾಲ್ಲೂಕು ಉಪಕಾರಾಗೃಹಕ್ಕೆ ಕಳುಹಿಸಲಾಯಿತು.
ನಿವೇಶನ ನೀಡುವುದಾಗಿ ಹೇಳಿ ತನ್ನಿಂದ 12 ಲಕ್ಷ ರೂ. ಹಣ ಪಡೆದ ಪ್ರಭಾವಿ ವ್ಯಕ್ತಿಯೊಬ್ಬ ನಿವೇಶನವನ್ನೂ ನೀಡದೆ, ಹಣವನ್ನೂ ಹಿಂತಿರುಗಿಸದೆ ವಂಚಿಸಿದ್ದಾನೆ. ಆತನ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಮಹಿಳೆಯು ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಿದ್ದರು. ಈ ಸಂಬಂಧ ಮಹಿಳಾ ಆಯೋಗವು ತುಮಕೂರು ಜಿಲ್ಲಾ ಪೊಲೀಸ್ ಕಚೇರಿಗೆ ಪತ್ರ ಬರೆದಿತ್ತು.
ರಾಜ್ಯ ಮಹಿಳಾ ಆಯೋಗದ ಶಿಫಾರಸಿನ ಮೇರೆಗೆ ತಾನು ಸಲ್ಲಿಸಿದ್ದ ವಂಚನೆ ಪ್ರಕರಣದ ವಿಚಾರಣೆ ನೆಪದಲ್ಲಿ ತನ್ನನ್ನು ಠಾಣೆಗೆ ಕರೆಸಿಕೊಂಡ ರಾಮಚಂದ್ರಪ್ಪ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ತೆ ವಿವರಿಸಿದ್ದಾರೆ.
ಒಂದಲ್ಲ ಒಂದು ಕಾರಣಕ್ಕೆ ರಾಮಚಂದ್ರಪ್ಪ ತನ್ನನ್ನು ಠಾಣೆಗೆ ಕರೆಸುತ್ತಿದ್ದರು. ನಾನು ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ, ನನ್ನ ಪತಿಯನ್ನು ಹೊರಗೆ ಕಾಯುವಂತೆ ಹೇಳಿ ರಾಮಚಂದ್ರಪ್ಪ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




