ಪೊಲೀಸರು ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಕೈ ಜೋಡಿಸಿದರೆ ಸಹಿಸಲ್ಲ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದ್ದಾಗ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಹೀಗಾಗಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿ ಠಾಣೆಗೆ ಬರುವವರನ್ನು ಆರೋಗ್ಯಕರವಾಗಿ ನಡೆಸಿಕೊಳ್ಳಬೇಕು.

ಬೆಂಗಳೂರು: ಅಪರಾಧಿಗಳಿಗೆ ಭಯದ ವಾತಾವರಣ, ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸುವುದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.
ನಗರದ ಚಾಮರಾಜಪೇಟೆ, ಕಬ್ಬನ್ ಪಾರ್ಕ್, ಹೈಗ್ರೌಂಡ್ಸ್ ಪುಲಿಕೇಶಿನಗರ ಪೊಲೀಸ್ ಠಾಣೆಗಳ ನೂತನ ಕಟ್ಟಡ ಹಾಗೂ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ರಾಜ್ಯದ ಜನಸಂಖ್ಯೆ 7 ಕೋಟಿ ದಾಟಿ ಹೋಗುತ್ತಿದೆ. ಇವರೆಲ್ಲರ ರಕ್ಷಣೆ, ಆಸ್ತಿ ಪಾಸ್ತಿ, ಮಾನ, ಪ್ರಾಣ ರಕ್ಷಿಸಿ ನೆಮ್ಮದಿಯ ಬದುಕಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಇದಕ್ಕಾಗಿ ಇಲಾಖೆಗೆ ಅಗತ್ಯವಾದ ಸವಲತ್ತು ಮತ್ತು ನೂತನ ಠಾಣೆಗಳನ್ನು ಒದಗಿಸಲು ಸರ್ಕಾರ ಸದಾ ಸಿದ್ಧವಿದೆ ಎಂದರು.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದ್ದಾಗ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಹೀಗಾಗಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿ ಠಾಣೆಗೆ ಬರುವವರನ್ನು ಆರೋಗ್ಯಕರವಾಗಿ ನಡೆಸಿಕೊಳ್ಳಬೇಕು. ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಕಡಿಮೆ ಆಗುತ್ತಿರುವುದು ನೆಮ್ಮದಿಯ ಸಂಗತಿ. ಆದರೆ ಪೊಲೀಸರು ಚಾಪೆ ಕೆಳಗೆ ತೂರಿದರೆ ಅಪರಾಧಿಗಳು ರಂಗೋಲಿ ಕೆಳಗೆ ತೂರಿ, ಕಾನೂನಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಇದಕ್ಕೆ ಅವಕಾಶ ಆಗಬಾರದು ಎಂದು ತಿಳಿಸಿದರು.
ಜನರಿಗೆ ಉದ್ಯೋಗ ಇಲ್ಲದಿರುವುದು, ಬದುಕಿಗೆ ಅವಕಾಶ ಇಲ್ಲದಿರುವಾಗ ಅಪರಾಧ ಜಗತ್ತಿನ ಕಡೆಗೆ ಆಕರ್ಷಿತರಾಗುತ್ತಾರೆ. ನಗರದಲ್ಲಿ ರಿಯಲ್ ಎಸ್ಟೇಟ್ ದಂಧೆ ಕಾರಣದಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಪೊಲೀಸರು ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಕೈ ಜೋಡಿಸಿದರೆ ಸಹಿಸಲ್ಲ. ಯಾವುದೇ ಕಾರಣಕ್ಕೂ ಅಕ್ರಮ ರಿಯಲ್ ಎಸ್ಟೇಟ್ ಗೆ ಬೆಂಬಲ ನೀಡುಬಾರದು. ಬೆಂಬಲ ಕೊಡುವ ಕೆಲಸ ಮಾಡಿದರೆ ಸರ್ಕಾರ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.
ಪೇದೆಗಳು, ಎಸ್.ಐ ಗಳು, ಇನ್ಸ್‌ಪೆಕ್ಟರ್‌ಗಳೇ ಹೆಚ್ಚೆಚ್ಚು ಕೆಲಸ ಮಾಡುತ್ತಾರೆ. ಇವರ ಯೋಗಕ್ಷೇಮ ಕೂಡ ನಮ್ಮ ಜವಾಬ್ದಾರಿ. ಪೊಲೀಸ್ ಸಿಬ್ಬಂದಿಯ ಗೃಹ ಯೋಜನೆಯನ್ನು ಸರ್ಕಾರ ಮುಂದುವರೆಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



