40 ವರ್ಷಗಳ ಹಿಂದೆಯೇ ಜಮೀನು ಖರೀದಿ, ಯಾವುದೇ ಅಕ್ರಮವಿಲ್ಲ: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ
ನಾನು ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿದ್ದೇನೆ. ಕಾಂಗ್ರೆಸ್ ಸರ್ಕಾರ ಹಾಗೂ ರಾಜ್ಯದ ಸಂಪತ್ತನ್ನು ರಕ್ಷಿಸುತ್ತಿರುವುದಾಗಿ ಹೇಳಿಕೊಂಡಿರುವ ಹೋರಾಟಗಾರರು ನನ್ನ ವಿರುದ್ಧ ಆರೋಪಿಸುತ್ತಿದ್ದಾರೆ.

ಬೆಂಗಳೂರು: ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿನ ತಮ್ಮ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ನಡೆಸುತ್ತಿರುವಂತೆಯೇ 40 ವರ್ಷಗಳ ಹಿಂದೆಯೇ ಜಮೀನು ಖರೀದಿಸಲಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆಡಳಿತರೂಢ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ಭೂಮಿಯನ್ನು ಖರೀದಿಸಿ 40 ವರ್ಷವಾಗಿದೆ. ಅನೇಕ ಬಾರಿ ಸರ್ವೇ, ತನಿಖೆ ನಡೆಸಲಾಗಿದೆ. ಅಷ್ಟು ವರ್ಷಗಳಿಂದ ಯಾರೂ ನನ್ನ ಬಳಿ ಬಂದಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಎಲ್ಲಿಂದ ಬಂದರು ದೂರುದಾರರು ಎಂದು ಪ್ರಶ್ನಿಸಿದರು.
ಹೈಕೋರ್ಟ್ ನೋಟಿಸ್ ಬಂದಿಲ್ಲ: 1986-87ರಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಚಂದ್ರ ಅವರುಗಳು ಅಕ್ರಮವಾಗಿ ಜಮೀನು ಖರೀದಿಸಲಾಗಿದೆ ಎಂದು ಆರೋಪಿಸಿ ಆಗಿನ ಪ್ರಧಾನಮಂತ್ರಿ, ಗೃಹ ಮಂತ್ರಿಯವರಿಗೆ ಪತ್ರ ಬರೆದಿದ್ದರು. ನಾನು ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿದ್ದೇನೆ. ಕಾಂಗ್ರೆಸ್ ಸರ್ಕಾರ ಹಾಗೂ ರಾಜ್ಯದ ಸಂಪತ್ತನ್ನು ರಕ್ಷಿಸುತ್ತಿರುವುದಾಗಿ ಹೇಳಿಕೊಂಡಿರುವ ಹೋರಾಟಗಾರರು ನನ್ನ ವಿರುದ್ಧ ಆರೋಪಿಸುತ್ತಿದ್ದಾರೆ. ಇಲ್ಲಿಯವರೆಗೂ ಹೈಕೋರ್ಟ್ ನಿಂದ ನಾನು ಯಾವುದೇ ನೋಟಿಸ್ ಪಡೆದಿಲ್ಲ ಎಂದು ತಿಳಿಸಿದರು.
ಅಧಿಕಾರಿಗಳು ನನ್ನಗೆ ನೋಟಿಸ್ ನೀಡದೆ ಸರ್ವೇ ಮಾಡಲು ಹೊರಟಿರುವ ವಿಷಯ ಗೊತ್ತಾದಾಗ, ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಕರೆ ಮಾಡಿ, ನೋಟಿಸ್ ಕೊಟ್ಟು ಸರ್ವೇ ಮಾಡಿ ಎಂದು ಹೇಳಿದ್ದೆ. ಜಾಗತಿಕ ಮಟ್ಟದ ಭೂಮಪಕರನ್ನು ಕರೆತಂದು ಸರ್ವೇ ಮಾಡಿಸಿಕೊಳ್ಳಿ ಎಂದು ಹೇಳಿದ್ದೆ ಎಂದು ಕುಮಾರಸ್ವಾಮಿ ಹೇಳಿದರು.
14 ಎಕರೆ ಸರ್ಕಾರಿ ಜಮೀನು ಕಬಳಿಕೆ ಆರೋಪ: ಕಂದಾಯ ಇಲಾಖೆ ಅಧಿಕಾರಿಗಳು ಸೋಮವಾರ ಕೇತಗಾನಹಳ್ಳಿಯಲ್ಲಿರುವ ಕುಮಾರಸ್ವಾಮಿ ಅವರ ಫಾರ್ಮ್ ಹೌಸ್ ಜಮೀನು ಸರ್ವೇ ಆರಂಭಿಸಿದರು. ಕುಮಾರಸ್ವಾಮಿ ಅವರು 14 ಎಕರೆ ಸರ್ಕಾರಿ ಜಮೀನನ್ನು ಕಬಳಿಸಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಆರೋಪಿಸಿದ್ದಾರೆ. ಈ ಸಂಬಂಧ ವರದಿಯೊಂದನ್ನು ಸಲ್ಲಿಸುವಂತೆ ಕಂದಾಯ ಇಲಾಖೆಗೆ ಹೈಕೋರ್ಟ್ ಆದೇಶಿಸಿತ್ತು. ಬಳಿಕ ಕುಮಾರಸ್ವಾಮಿಯಿಂದ ಜಮೀನು ಒತ್ತುವರಿ ಆರೋಪ ಕುರಿತು ತನಿಖೆಗೆ ಸರ್ಕಾರ SIT ರಚಿಸಿದೆ.
ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ: ಟಾರ್ಗೆಟ್ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಅದರಲ್ಲಿ ಯಾವುದೇ ಅನುಮಾನವಿಲ್ಲಾ. ಎಷ್ಟು ಬಾರಿ ತನಿಖೆ ಮಾಡಲಾಗುತ್ತದೆ. ಮಾರ್ಚ್ 2023ರಲ್ಲಿ ಲೋಕಾಯುಕ್ತಕ್ಕೆ ವರದಿ ಸಲ್ಲಿಸಲಾಗಿತ್ತು. ಅವರು ಬಂದು ಸರ್ವೇ ಮಾಡಿ ವರದಿ ಸಲ್ಲಿಸಿದ್ದರು. ನಾನು ಹೆದರುವುದಿಲ್ಲ. 40 ವರ್ಷಗಳ ಹಿಂದೆಯೇ ಭೂಮಿ ಖರೀದಿಸಿದ್ದು, ಎಲ್ಲಾ ದಾಖಲೆಗಳಿವೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ಹಲವು ಬಾರಿ ಸಭೆ ನಡೆಸಿರುವುದು ನನ್ನಗೆ ಗೊತ್ತಿದೆ. ಅವರಿಂದಲೇ ಈ ಎಲ್ಲಾ ತನಿಖೆ ನಡೆಯುತ್ತಿದೆ. ನನ್ನ ಎಲ್ಲಾದಕ್ಕೂ ಮುಕ್ತನಾಗಿದ್ದೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿಯಿಂದ ಕಲಿಯುವ ಅಗತ್ಯವಿಲ್ಲ: ನೀರಾವರಿ ಯೋಜನೆ ಅನುಷ್ಟಾನ ಬಗ್ಗೆ ಇತ್ತೀಚಿಗೆ ದೇವೇಗೌಡರ ಹೇಳಿಕೆ ಕುರಿತು ಸಿದ್ದರಾಮಯ್ಯ ಮಾತನಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಎಚ್ ಡಿ ಕುಮಾರಸ್ವಾಮಿ, ದೇವೇಗೌಡರು ಮುಖ್ಯಮಂತ್ರಿಯಿಂದ ಕಲಿಯುವ ಅಗತ್ಯವಿಲ್ಲ. ರಾಜ್ಯದ ಭೂಮಿ, ನೀರು ವಿಚಾರದಲ್ಲಿ ಅವರ ಬದ್ಧತೆ ಏನು ಎಂದು ಪ್ರಶ್ನಿಸಿದರು. ದೇವೇಗೌಡರು ಅನಾರೋಗ್ಯದಲ್ಲಿಯೂ ಸಂಸತ್ತಿನಲ್ಲಿ ಗೋದಾವರಿ- ಕಾವೇರಿ ನದಿ ಜೋಡಣೆ ಬಗ್ಗೆ ಮಾತನಾಡಿದ್ದಾರೆ. ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹಣ ಲೂಟಿ ಹೊಡೆಯುವುದನ್ನು ಬಿಟ್ಟರೆ ರಾಜ್ಯಕ್ಕೆ ಅವರ ಕೊಡುಗೆ ಏನು ಎಂದು ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



