ವಿಜಯಪುರ: 'ಭೀಮಾತೀರ' ಕುಖ್ಯಾತಿಯ ಬಾಗಪ್ಪ ಹರಿಜನ್ ಬರ್ಬರ ಹತ್ಯೆ!
ಈ ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿಯಾಗಿತ್ತು. ಆದರೆ ಆಗ ಬಾಗಪ್ಪ ಬಚಾವ್ ಆಗಿದ್ದ.

ವಿಜಯಪುರ: ಭೀಮಾ ತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ ಸಹಚರ ಹಾಗೂ ಸಹೋದರ ಸಂಬಂಧಿ ಬಾಗಪ್ಪ ಹರಿಜನ್ ಹತ್ಯೆ ಮಾಡಲಾಗಿದೆ. ಮಂಗಳವಾರ ರಾತ್ರಿ 8-50 ರ ಸುಮಾರಿನಲ್ಲಿ ವಿಜಯಪುರದ ಮದಿನಾ ನಗರದಲ್ಲಿ ಮಾರಕಾಸ್ತ್ರಗಳಿಂದ ಮುಖ, ತಲೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ.
ಈ ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿಯಾಗಿತ್ತು. ಆದರೆ ಆಗ ಬಾಗಪ್ಪ ಬಚಾವ್ ಆಗಿದ್ದ. ಆದರೆ ಈ ಬಾರಿ ಹಂತಕರು ಯೋಜಿತ ರೀತಿಯಲ್ಲಿ ದಾಳಿ ನಡೆಸಿ ಬಾಗಪ್ಪನನ್ನು ಕೊಂದು ಹಾಕಿದ್ದಾರೆ.
ವಿಜಯಪುರದ ಮದಿನಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಬಾಗಪ್ಪ ರಾತ್ರಿ 8-50 ಸುಮಾರಿಗೆ ಮನೆಯಿಂದ ಹೊರಬರುತ್ತಿದ್ದಂತೆ ದುಷ್ಕರ್ಮಿಗಳು ಮಚ್ಚಿನಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ SP ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಂತಕರ ಪತ್ತೆಗಾಗಿ ASP ರಾಮನಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.ಈ ಹಿಂದೆ 2023 ರಲ್ಲಿ ಕೋರ್ಟ್ ಆವರಣದಲ್ಲಿ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.
ಅಪಚಿತರ ವ್ಯಕ್ತಿಯೊಬ್ಬ ಏಕಾಏಕಿ ಐದು ಸುತ್ತು ಗುಂಡು ಹಾರಿಸಿದ್ದರಿಂದ ಬಾಗಪ್ಪ ಹರಿಜನನ ಎದೆ ಭಾಗಕ್ಕೆ ಹೊಕ್ಕಿತ್ತು. ಕೂಡಲೇ ಆತನನ್ನು ಬಿಎಲ್ ಡಿಇ ಆಸ್ಪತ್ರೆಗೆ ದಾಖಲು ಮಾಡುವ ಮೂಲಕ ಬದುಕುಳಿದಿದ್ದ. ಆದರೆ, ಈಗ ಸುಮಾರು 20 ಜನರಿಂದ ತಂಡ ಯೋಜಿತ ರೀತಿಯಲ್ಲಿ ದಾಳಿ ನಡೆಸಿದ್ದು, ಬಾಗಪ್ಪ ಹರಿಜನ್ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ.
ಯಾರಿದು ಬಾಗಪ್ಪ ಹರಿಜನ್?
ಭೀಮಾ ತೀರದ ಹಂತಕದ ಕುಖ್ಯಾತಿಯಲ್ಲಿ ಬಾಗಪ್ಪ ಹರಿಜನ ಕೂಡ ಒಬ್ಬ. ಈ ಹಿಂದೆ ಇಡೀ ಭೀಮಾತೀರವನ್ನು ನಡುಗಿಸಿದ್ದ ಚಂದಪ್ಪ ಹರಿಜನನ ಸಹೋದರ ಸಂಬಂಧಿ ಕೂಡ ಆಗಿರುವ ಬಾಗಪ್ಪ ಹರಿಜನ ಚಂದಪ್ಪ ಹರಿಜನನ ಬಲಗೈ ಬಂಟನಾಗಿದ್ದ. ಚಂದಪ್ಪನ ಸಾವಿನ ಬಳಿಕ ಕುಟುಂಬದಲ್ಲಿ ಉಂಟಾಗಿದ್ದ ಆಸ್ತಿ ಗಲಾಟೆ ಪ್ರಕರಣದಲ್ಲಿ ಬಾಗಪ್ಪ ಚಂದಪ್ಪನ ಸಹೋದರ ಬಸಪ್ಪ ಹರಿಜನ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ. ಆಲಮೇಲ ಪೊಲೀಸ್‌ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದಲ್ಲದೆ ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2013ರಲ್ಲಿ ಬ್ಯಾಡಗಿಹಾಳ ಗ್ರಾಮದ ಬಸ್ ಕಂಡಕ್ಟರ್ ಲಾಳಸಂಗಿ ಎಂಬುವರ ಕೊಲೆ ಪ್ರಕರಣದಲ್ಲಿ ಬಾಗಪ್ಪ ಪ್ರಮುಖ ಪಾತ್ರಧಾರಿಯಾಗಿದ್ದು, ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



