ಬಂಧನ ಭೀತಿಯಿಂದ ಬೈರತಿ ಬಸವರಾಜ್ ಪಾರು: ಹೈಕೋರ್ಟ್ ಜಾಮೀನು ಮಂಜೂರು
ಒಂದು ವೇಳೆ ಅವರನ್ನು ಬಂಧಿಸಿದರೆ ಷರತ್ತುಗಳ ಆಧಾರದಡಿ ಬಿಡುಗಡೆ ಮಾಡಬೇಕು. ಬಸವರಾಜ ಅವರು ತನಿಖೆಗೆ ಸಹಕರಿಸಬೇಕು ಎಂದು ಸಿಐಡಿಗೆ ಆದೇಶಿಸಿದೆ.

ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ಐದನೇ ಆರೋಪಿಯಾಗಿರುವ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರಿಗೆ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಒಂದು ವೇಳೆ ಅವರನ್ನು ಬಂಧಿಸಿದರೆ ಷರತ್ತುಗಳ ಆಧಾರದಡಿ ಬಿಡುಗಡೆ ಮಾಡಬೇಕು. ಬಸವರಾಜ ಅವರು ತನಿಖೆಗೆ ಸಹಕರಿಸಬೇಕು ಎಂದು ಸಿಐಡಿಗೆ ಆದೇಶಿಸಿದೆ. ಆರೋಪಿ ಬಸವರಾಜ ಅವರು ಈ ಸಂಬಂಧ ಎರಡನೇ ಬಾರಿಗೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ರಜಾಕಾಲದ ಪೀಠದಲ್ಲಿದ್ದ ನ್ಯಾಯಮೂರ್ತಿ ಜಿ.ಬಸವರಾಜ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಅರ್ಜಿದಾರರು ನಾಲ್ಕು ಬಾರಿ ಶಾಸಕರಾಗಿದ್ದಾರೆ. ಅವರನ್ನು ರಾಜಕೀಯ ಕಾರಣಕ್ಕಾಗಿ ಈ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ. ಬಿಕ್ಲು ಶಿವು ಕೊಲೆಯಲ್ಲಿ ಅವರದ್ದು ಎಂದು ಹೇಳಬಹುದಾದ ಯಾವುದೇ ಪಾತ್ರವಿಲ್ಲ. ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿದ ಬಳಿಕ ಬಂಧಿಸುವ ಯತ್ನ ನಡೆದಿದೆ.
ಈಗಾಗಲೇ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು ಅದರಲ್ಲಿ ಅವರ ವಿರುದ್ಧ ಯಾವುದೇ ದೋಷ ಹೊರಿಸಿಲ್ಲ. ತನಿಖೆ ಬಾಕಿ ಇರಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಹಿರಿಯ ವಕೀಲ ಸಂದೇಶ ಪಿ ಚೌಟ ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು.
ಅರ್ಜಿದಾರರಿಗೆ ಈಗಾಗಲೇ ಹೈಕೋರ್ಟ್ 5 ತಿಂಗಳು 10 ದಿನಗಳ ಕಾಲ ಬಂಧನದಿಂದ ರಕ್ಷಣೆ ನೀಡಿತ್ತು. ಕೋಕಾ (ಕರ್ನಾಟಕ ರಾಜ್ಯ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ–2000) ಕಾಯ್ದೆ ಹೇರಿಕೆ ರದ್ದುಪಡಿಸಿದೆ. ಹಾಗಾಗಿ, ಬಂಧನದಿಂದ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿ, ಪ್ರತಿವಾದಿ ಸಿಐಡಿಗೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿತು. ಅಂತೆಯೇ, ವಿಚಾರಣೆಯನ್ನು 2026ರ ಜನವರಿ 6ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಷನ್ ಪರ ನಾಗೇಶ್ವರಪ್ಪ ಮತ್ತು ಆರ್.ಸೌಮ್ಯ ಹಾಜರಿದ್ದರು. ಈ ಪ್ರಕರಣದಲ್ಲಿ ವಿಶೇಷ ಪ್ರಾಸಿಕ್ಯೂಟರ್ ಆಗಿ ರಾಜ್ಯದ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



