ರಾಜ್ಯ

MUDA: 300 ಎಕರೆ ಜಮೀನಿನಲ್ಲಿ ಹೊಸದಾಗಿ ಲೇಔಟ್‌ ಅಭಿವೃದ್ಧಿ; ಸಚಿವ ಬೈರತಿ ಸುರೇಶ್‌

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಮಾಡಿ ಹೊಸ ಬಡಾವಣೆ ಮಾಡಲು ಅನುಮತಿ ಪಡೆದು 300 ಎಕರೆ ಸ್ಥಳ ಗುರುತಿಸುವ ಕೆಲಸವಾಗಿದೆ ಎಂದರು.

MUDA: 300 ಎಕರೆ ಜಮೀನಿನಲ್ಲಿ ಹೊಸದಾಗಿ ಲೇಔಟ್‌ ಅಭಿವೃದ್ಧಿ; ಸಚಿವ ಬೈರತಿ ಸುರೇಶ್‌
ಸಚಿವ ಬೈರತಿ ಸುರೇಶ್‌
Published On :

ಬೆಳಗಾವಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ನಾಗರೀಕರಿಗೆ ನಿವೇಶನ ನೀಡುವ ಸಂಬಂಧ ಮೈಸೂರಿನಲ್ಲಿ 300 ಎಕರೆ ಜಾಗವನ್ನ ಗುರುತಿಸಲಾಗಿದ್ದು, ನಿಯಮಾನುಸಾರ ಕ್ರಮ ಕೈಗೊಂಡು ನಾಗರಿಕ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು, ನಾನು ಮಂತ್ರಿಯಾದ ಬಳಿಕ ನಿವೇಶನ ಹಂಚಿಕೆ ವಿಚಾರದಲ್ಲಿ ನಡೆದಿದ್ದ ಬೆಳವಣಿಗೆಯಿಂದ ಮುಡಾ ಕಚೇರಿ ಗರ ಬಡಿದಂತಿತ್ತು. ಇದೀಗ ನ್ಯಾಯಾಲಯದಿಂದ ಆದೇಶಗಳು ಬಂದಿದ್ದು, ಹೊಸ ಬಡಾವಣೆ ರಚಿಸಲು ಅನುಮೋದನೆ ದೊರೆತಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಮಾಡಿ ಹೊಸ ಬಡಾವಣೆ ಮಾಡಲು ಅನುಮತಿ ಪಡೆದು 300 ಎಕರೆ ಸ್ಥಳ ಗುರುತಿಸುವ ಕೆಲಸವಾಗಿದೆ ಎಂದರು.

ರಾಜ್ಯ ನಗರಾಭಿವೃದ್ಧಿ ಇಲಾಖೆಯಿಂದ ಬಳ್ಳಾರಿ, ಬೀದರ್, ಚಾಮರಾಜನಗರ, ಮಂಗಳೂರು, ಕಲಬುರಗಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಕರ್ನಾಟಕ ನಗರಾಭಿವೃದ್ಧಿ ನಿವೇಶನ ಹಂಚಿಕೆ ನಿಯಮಗಳಂತೆ ಹಿಂದುಳಿದವರಿಗೆ ಶೇ.2, ಅಧಿಸೂಚಿತ ಬುಡಕಟ್ಟು ಜನಾಂಗಕ್ಕೆ ಶೇ.3ರಷ್ಟು ಅಧಿಸೂಚಿತ ಜಾತಿಗಳಿಗೆ ಶೇ.15ರಷ್ಟು ಕೇಂದ್ರ ಸಶಸ್ತ್ರ ಪಡೆಗಳ ಸೈನಿಕರಿಗೆ ಶೇ.5ರಷ್ಟು ಹಾಗೂ ಸಾರ್ವಜನಿಕರಿಗೆ ಶೇ.55ರಷ್ಟು ಮೀಸಲಾತಿಯಂತೆ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಡಿಕೆ ಶಿವಕುಮಾರ್, ಮೈಸೂರು ಸೇರಿದಂತೆ ಹಲವು ನಗರಗಳಲ್ಲಿ ನಿವೇಶನ ಹಂಚಿಕೆ ಮಾಡುತ್ತಿಲ್ಲ. ಸಾಮಾನ್ಯ ಜನರಿಗೆ ನಿವೇಶನಗಳು ಸಿಗುತ್ತಿಲ್ಲ. ಆದರೆ, ಹೌಸಿಂಗ್ ಸೊಸೈಟಿಗಳಿಗೆ ನಿವೇಶನ ಸಿಗುತ್ತಿವೆ. ಜಾತಿವಾರು ಹೌಸಿಂಗ್ ಸೊಸೈಟಿಗಳಿಗೆ ನಿವೇಶನ, ಜಮೀನು ಕೊಡುವುದನ್ನು ನಿಲ್ಲಿಸಬೇಕು. ಈ ಮೂಲಕ ಹಿಂದಿನ ವರ್ಣ-ಜಾತಿ ವ್ಯವಸ್ಥೆಗೆ ನಾವೇ ದಾರಿ ಮಾಡಿಕೊಟ್ಟಂತೆ ಆಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿವೇಶನಗಳನ್ನು ಮನಸೋ ಇಚ್ಛೆ ವಿತರಿಸಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ವಿತರಣೆ ಮಾಡುತ್ತೇವೆ. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಿಗಳ ಕಾಯ್ದೆ 1987ರ ನಿಯಮಗಳ ಪ್ರಕಾರ ನಿಯಮ 3ರ ಅನ್ವಯ ಪ್ರಾಧಿಕಾರವು ಅಭಿವೃದ್ದಿಪಡಿಸುವ ಬಡಾವಣೆಯಲ್ಲಿ ಲಭ್ಯವಿರುವ ನಿವೇಶನಗಳನ್ನು ವೆಬ್‍ಸೈಟ್ ಮತ್ತು ಪತ್ರಿಕೆಗಳಲ್ಲಿ ಜಾಹಿರಾತು ನೀಡಿ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸುತ್ತೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.